ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ, ಸಿಗಂದೂರಿಗೆ ಬರುವ ಪ್ರವಾಸಿಗರ ಮೇಲೆ ನಿಗಾ

ಮೂರನೇ ಅಲೆ– ಪ್ರವಾಸಿಗರ ತಪಾಸಣೆಗೆ ಕ್ರಮ: ಅಧಿಕಾರಿಗಳ ಸಭೆಯಲ್ಲಿ ಶಾಸಕ ಹಾಲಪ್ಪ ಹೇಳಿಕೆ
Last Updated 2 ಆಗಸ್ಟ್ 2021, 3:04 IST
ಅಕ್ಷರ ಗಾತ್ರ

ಸಾಗರ: ‘ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಜೋಗ ಹಾಗೂ ಸಿಗಂದೂರಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಬಂದಿರುವ ಬಗ್ಗೆ ವರದಿ ತರಬೇಕು ಎನ್ನುವ ನಿಯಮ ಅಳವಡಿಸುವ ಪ್ರಸ್ತಾಪ ಜಿಲ್ಲಾಡಳಿತದ ಮುಂದಿದೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಕೋವಿಡ್ ಮೂರನೇ ಅಲೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಭಾನುವಾರ ನಡೆದ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಆಗುಂಬೆ, ಮಾಸ್ತಿಕಟ್ಟೆ, ತೀರ್ಥಹಳ್ಳಿ ಭಾಗದಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳು ಬಂದಿರುವ ಬಗ್ಗೆ ವರದಿಗಳಿವೆ. ಹೀಗಾಗಿ, ಈ ತಾಲ್ಲೂಕಿಗೆ ಬರುವ ಪ್ರವಾಸಿಗರ ಮೇಲೆ ಕೆಲವು ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

‘ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಮಾಹಿತಿ ಇದೆ. ಮಕ್ಕಳಿಗೆ ಸೋಂಕು ತಗುಲಿದರೆ ಅವರನ್ನು ಆಸ್ಪತ್ರೆಯಲ್ಲಿ ಪೋಷಕರಿಲ್ಲದೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟದ ಕೆಲಸ. ಪೋಷಕರ ಸಂಪರ್ಕದಲ್ಲಿದ್ದೇ ಮಕ್ಕಳು ಚಿಕಿತ್ಸೆ ಪಡೆಯುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್ ಸಿದ್ಧಗೊಳಿಸಿ’ ಎಂದು ಅವರು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದರು.

ಮೂರನೇ ಅಲೆಯನ್ನು ತಡೆಯಲು ಸರ್ಕಾರಿ ಆಸ್ಪತ್ರೆಯ ಎಲ್ಲ ವೈದ್ಯರು ಒಂದು ತಂಡವಾಗಿ ಕೆಲಸ ಮಾಡಬೇಕು. ವೈದ್ಯರ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದರ ವ್ಯತಿರಿಕ್ತ ಪರಿಣಾಮ ರೋಗಿಗಳ ಮೇಲೆ ಆಗುತ್ತದೆ. ವೈದ್ಯರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿದೇಶಕ್ಕೆ ತೆರಳುವವರು ವೀಸಾ ಪಡೆಯಲು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಮಾಡಿರುವುದರಿಂದ ತೊಂದರೆಯಾಗುತ್ತಿದೆ. ಈ ಅಧಿಕಾರವನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಬೇಕು ಎಂಬ ಒತ್ತಾಯ ಬಂದಿರುವ ಕುರಿತು ಶಾಸಕ ಹಾಲಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಫೋನ್ ಮೂಲಕ ಚರ್ಚಿಸಿದರು.

‘ನಗರವ್ಯಾಪ್ತಿಯಲ್ಲಿ ಡೆಂಗಿ ಜ್ವರದ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಗರಸಭೆ ಅಧಿಕಾರಿಗಳು ಸ್ವಚ್ಛತಾ ಕಾರ್ಯ ಹಾಗೂ ಜಾಗೃತಿ ಮೂಡಿಸುವ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು. ಕೇವಲ ಕರಪತ್ರ ಮುದ್ರಿಸಿ ಕಸ ಸಂಗ್ರಹಿಸುವ ಗಾಡಿ ಮೂಲಕ ಪ್ರಚಾರ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸಬಾರದು. ಸ್ವಚ್ಛತೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್.ಮೋಹನ್, ‘ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಪ್ರಮಾಣ ಶೇ 1.57ರಷ್ಟಿದೆ. ಜುಲೈ ತಿಂಗಳಲ್ಲಿ ಹೆಚ್ಚಿನ ಜನರು ಪರೀಕ್ಷೆಗೆ ಒಳಗಾಗಿದ್ದು, 257 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ತಡೆ ಲಸಿಕೆ ನೀಡಲಾಗುತ್ತಿದೆ. ಈ ಸಂಬಂಧ ಇದ್ದ ಎಲ್ಲ ನಿರ್ಬಂಧಗಳು ತೆರವುಗೊಂಡಿವೆ’ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ವಾಸುದೇವ್, ‘ಆಗಸ್ಟ್ 2ರಂದು ಸಾಗರ ಪಟ್ಟಣದ ನಾಲ್ಕು ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ 1.77 ಲಕ್ಷ ಜನರಿಗೆ ಲಸಿಕೆ ನೀಡಬೇಕಿದ್ದು, ಈವರೆಗೆ 84 ಸಾವಿರ ಜನರು ಲಸಿಕೆ ಪಡೆದಿದ್ದಾರೆ’ ಎಂದು ಹೇಳಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ್ ಬೋಸ್ಲೆ, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಸತೀಶ್ ಕೆ.ಮೊಗವೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT