ಬುಧವಾರ, ನವೆಂಬರ್ 25, 2020
22 °C

ಕರ್ನಾಟಕ ಮರಾಠಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಮರಾಠಿ ಪ್ರಾಧಿಕಾರದ ಬದಲು ಕರ್ನಾಟಕ ಮರಾಠಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪರಿಷತ್ ಅಧ್ಯಕ್ಷ ಎಸ್.ವಿ. ಹಿತಕರ ಜೈನ್, ‘ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ಹೊರತುಪಡಿಸಿ ಇತರೆ ಯಾವ ಭಾಷೆಯ ಪ್ರಾಧಿಕಾರವನ್ನೂ ರಚನೆ ಮಾಡಬಾರದು. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಕರ್ನಾಟಕದ ಸಮಗ್ರ ಅಭಿವೃದ್ಧಿ ವಿಶಾಲ ದೃಷ್ಟಿಕೋನದಿಂದ ಪ್ರಾಧಿಕಾರ ಅಥವಾ ಮಂಡಳಿ ರಚಿಸುವಾಗ ಸ್ಥಳೀಯ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಅಗತ್ಯವಿದೆ’ ಎಂದರು.

ರಾಜ್ಯ ಸರ್ಕಾರ ತರಾತುರಿಯಲ್ಲಿ ರಚಿಸಲು ಮುಂದಾಗಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಮರಾಠ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಎಂದು ಪುನರ್ ನಾಮಕರಣ ಮಾಡಬೇಕು. ಈ ಪ್ರಾಧಿಕಾರದ ಮೂಲಕ ಕರ್ನಾಟಕ ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಮಹಾರಾಷ್ಟ್ರ ಆಕ್ರಮಿಸಿಕೊಂಡಿರುವ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಲಾತೂರ್, ನಾದಿರ್ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸಬೇಕು. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ‘ಬೆಳಗಾವಿ ಮತ್ತು ಕಾರವಾರ ನಮ್ಮದು’ ಎಂಬ ಹೇಳಿಕೆ ನೀಡಿರುವುದನ್ನು ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದ ಭಾಗವಾಗಿದ್ದು ಕೇರಳ ಆಕ್ರಮಿಸಿಕೊಂಡಿರುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕದ 5 ಪ್ರಮುಖ ಪ್ರದೇಶ ಹಾಗೂ ಕಾಸರಗೋಡು ಕರ್ನಾಟಕಕ್ಕೆ ಸೇರಿಸುವ ಕುರಿತು ಲಕ್ಷ್ಯ ವಹಿಸಬೇಕು ಎಂದು ಒತ್ತಾಯಿಸಿದರು.

ಪರಿಷತ್‍ನ ಜಿಲ್ಲಾ ಕಾರ್ಯಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಮೇಜರ್ ನಾಗರಾಜ್, ಎಸ್.ಎಂ ಗಣಪತಿ, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಅಧ್ಯಕ್ಷ ವೈ. ಮೋಹನ್, ಪ್ರಮುಖರಾದ ಸುಭಾಷ್ ಕೌತಳ್ಳಿ, ಲಕ್ಷ್ಮಣ್ ಸಾಗರ್, ಶಿವಶಂಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.