ಸೋಮವಾರ, ಆಗಸ್ಟ್ 2, 2021
23 °C

ವಿಶ್ವ ಅಪ್ಪಂದಿರ ದಿನ: ಜನ್ಮದಿನಕ್ಕೆ ಉಡುಗೊರೆ ನೀಡುತ್ತೇನೆ ಎಂದ ಅಪ್ಪ ಕೊಟ್ಟ ಆಘಾತ

ರಿ.ರಾ. ರವಿಶಂಕರ್‌ Updated:

ಅಕ್ಷರ ಗಾತ್ರ : | |

Prajavani

ರಿಪ್ಪನ್‌ಪೇಟೆ: ‘ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ನನ್ನಪ್ಪ, ಮುದ್ದಿನ ಮಗಳು ಎಂಬ ಕಾರಣಕ್ಕೆ ಪ್ರತಿವರ್ಷ ನನ್ನ ಜನ್ಮ ದಿನಕ್ಕೆ ಏನಾದರೊಂದು ಹೊಸತನದ ಉಡುಗೊರೆ ನೀಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಎರಡನೇ ಅಲೆಯಿಂದ ಜನ್ಮದಿನದಂದು ಅವರು ಕೊಟ್ಟ ಉಡುಗೊರೆ ಶಾಕ್‌ ನೀಡಿತ್ತು’ ಎಂದು ಗದ್ಗದಿತರಾದರು ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರ್‌ದಿಂಬದ ವಿದ್ಯಾರ್ಥಿನಿ ಶಾಂಭವಿ.

ರಿಪ್ಪನ್‌ಪೇಟೆ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಶಾಂಭವಿ, ರಿಪ್ಪನ್‌ಪೇಟೆ ಸಮೀಪದ ಪೂಜಾರ್‌ದಿಂಬದ ನಿವಾಸಿ ಯುವರಾಜ ಹಾಗೂ ರತ್ನಮ್ಮ ದಂಪತಿಯ ಏಕೈಕ ಪುತ್ರಿ.

ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಿ ಎಲ್ಲರ ಬದುಕಿನಲ್ಲಿ ಚೆನ್ನಾಟವಾಡಿದ ಕೊರೊನಾ ಶಾಂಭವಿಯ ಬದುಕನ್ನೇ ಛಿದ್ರಗೊಳಿಸಿದೆ. ಪ್ರೀತಿಯ ಅಪ್ಪನನ್ನು ಕಸಿದುಕೊಂಡು ದಿಕ್ಕೇ ದೋಚದಂತಾಗಿದೆ ಅವಳ ಬಾಳು.

‘ಮನೆಯ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಮ್ಮಮ್ಮ (ತಂದೆಯ ತಾಯಿ)ನಲ್ಲಿ ಮೈಕೈನೋವು, ಸಣ್ಣ ಜ್ವರ ಕಂಡುಬಂದಿದ್ದರಿಂದ ತಪಾಸಣೆ ಮಾಡಿಸಿದಾಗ ಕೊರೊನಾ ಪಾಸಿಟಿವ್‌ ಬಂದಿತ್ತು. ಜಿಲ್ಲಾ ಆಸ್ಪತ್ರೆಗೆ ಅಜ್ಜಿಯನ್ನು ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೇ 17ರಂದು ಮೃತಪಟ್ಟರು. ಅವರ ಆರೈಕೆಯಲ್ಲಿ ತೊಡಗಿದ್ದ ಅಪ್ಪನಿಗೂ ಕೊರೊನಾ ಪಾಸಿಟಿವ್‌ ಬಂದಿತ್ತು. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದೆವು. ಅಪ್ಪ ಕೂಡ 9ನೇ ದಿನ ನಮ್ಮನ್ನೆಲ್ಲ ಬಿಟ್ಟು ತನ್ನಮ್ಮನ ಹಾದಿ ಹಿಡಿದರು’ ಎಂದು ಅಳಲು ತೋಡಿಕೊಂಡಳು.

‘ನನ್ನ ಜನ್ಮದಿನದಂದು ಗುಣಮುಖರಾಗಿ ಅಪ್ಪ ಮನೆಗೆ ಬಂದರೆ ಸಾಕು ಎಂದು ದೇವರಲ್ಲಿ ಮೊರೆ ಇಟ್ಟಿದ್ದೆ. ಆದರೆ, ಆ ದೇವರಿಗೆ ಎನನ್ನಿಸಿತೋ ಏನೋ ಅದೇ ದಿನ ನನ್ನ ತಂದೆಯನ್ನು ಮನೆಗೆ ಕಳಿಸಿಕೊಟ್ಟಿದ್ದ. ಆದರೆ, ಜೀವಂತವಾಗಲ್ಲ; ಶವವಾಗಿ...’ ಎಂದು ಕಣ್ಣೀರಿಟ್ಟಳು.

‘ನಮ್ಮ ಪುಟ್ಟ ಅರಮನೆಗೆ ಆಸರೆಯಾಗಿದ್ದ ರಾಜನನ್ನು ಕಳೆದುಕೊಂಡ ಕೊರಗು ಕಾಡುತ್ತಿದೆ. ಆದರೆ, ನನ್ನ ಮಗ–ಮಗಳು ಎರಡು ನೀನೇ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು. ನಿನಗೆ ಸ್ಕೂಟಿ ಕೊಡಿಸುತ್ತೇನೆ ಎಂದು ನನ್ನ ಓದಿಗೆ ಹುರಿದುಂಬಿಸುತ್ತಿದ್ದ ನನ್ನಪ್ಪನ ಆಸೆ ಈಡೇರಿಸುವ ಗುರಿ ನನ್ನದು’ ಎಂದು ಆತ್ಮವಿಶ್ವಾಸದಿಂದಲೇ ಹೇಳಿದಳು.

ಈಗ ಮನೆಯಲ್ಲಿ ತಾಯಿಗೆ ಮಗಳು, ಮಗಳಿಗೆ ತಾಯಿಯೇ ಆಸರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು