ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳು –ಬಳ್ಳಿಗಳ ಕಲರವ; ಗರಿಗೆದರಿದ ಸಂಭ್ರಮ

ಶಿವಮೊಗ್ಗ: ಮೇಳೈಸಿದ ದೀವರ ಸಾಂಸ್ಕೃತಿಕ ವೈಭವದ ಗಮ್ಮತ್ತು
Last Updated 21 ನವೆಂಬರ್ 2022, 8:21 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾರ್ತಿಕ ಮಾಸದ ಚುಮು ಚುಮು ಚಳಿಯ ನಡುವೆ ಇಲ್ಲಿನ ಈಡಿಗರ ಭವನದಲ್ಲಿ ಭಾನುವಾರ ಇಡೀ ದಿನ ಸಹ್ಯಾದ್ರಿ ತಪ್ಪಲಿನ ಮಕ್ಕಳು, ಕಳ್ಳು–ಬಳ್ಳಿಗಳ ಅನುಬಂಧದ ಕಲರವ ದೀವರ ಸಾಂಸ್ಕೃತಿಕ ವೈಭವದ ಹೆಸರಲ್ಲಿ ಗರಿಗೆದರಿತ್ತು.

ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಸೇರಿ ನಡೆಸಿದ ಈ ಊರ ಹಬ್ಬದಲ್ಲಿ ದೂರದ ಬೆಳಗಾವಿ, ಬೆಂಗಳೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಂದ ಬಂದಿದ್ದ ಈಡಿಗ ಸಮುದಾಯದ ಪ್ರತಿನಿಧಿಗಳು ದಿನವಿಡೀ ನಕ್ಕು, ನಲಿದು ಸಂಭ್ರಮಿಸಿದರು.

ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಡೊಳ್ಳು, ಕೋಲಾಟ, ಅಂಟಿಕೆ–ಪಿಂಟಿಕೆ, ಸಂಪ್ರದಾಯದ ಹಾಡುಗಳು, ಭರತನಾಟ್ಯ, ತುಳಸಿ ಪೂಜೆ, ಎಣ್ಣೆ ಸಂಪ್ರದಾಯ, ಹಬ್ಬದ ಹಾಡುಗಳು ಅನುರಣಿಸಿದವು. ದೀವರ ಭಾಷೆಯಲ್ಲಿ
ನಾಟಕ ಆಡಿ ಖುಷಿಪಟ್ಟರು. ಮಧ್ಯಾಹ್ನ ಮಲೆನಾಡಿನ ಭೂರಿ ಭೋಜನ ಸಾಂಸ್ಕೃತಿಕ ವೈಭವಕ್ಕೆ ಬಂದವರ ನಾಲಿಗೆ ತಣಿಸಿತು.

ಹಸೆಯ ಚಿತ್ತಾರ ಮೂಡಿಸಿ ಸಾಂಪ್ರದಾಯಿಕ ಸ್ಪರ್ಶದ ಮೂಲಕ ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮಾತಿನ ಬದಲಿಗೆ ಹಾಡು ಹೇಳುವುದೇ ತಮಗೆ ಆಪ್ತ ಸಂಗತಿ ಎಂದು ಹೇಳಿ ಗೌರಮ್ಮ ಸೋಬಾನೆ ಹಾಡುಗಳನ್ನು ಹಾಡಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಮೋಹನ ಚಂದ್ರಗುತ್ತಿ, ‘ಸಂಘಟನೆಯೊಂದು ಬಲಯುತ ವಾಗಿದ್ದರೆ, ಪ್ರಾಮಾಣಿಕವಾಗಿದ್ದರೆ, ಹೃದಯಪೂರ್ವಕವಾಗಿದ್ದರೆ, ಬದ್ಧತೆ ಇದ್ದರೆ ಇಂತಹದ್ದೊಂದು ಕಾರ್ಯಕ್ರಮ ಮಾಡಲು ಸಾಧ್ಯ’ ಎಂದರು.

‘ಬರೀ ರಾಜಕಾರಣ ಮಾತ್ರ ಸಮುದಾಯವನ್ನು ಕಟ್ಟಲು ಸಾಧ್ಯವಿಲ್ಲ. ಸಮುದಾಯವನ್ನು ಸಾಂಸ್ಕೃತಿಕ ನೆಲೆ, ಸಾಹಿತ್ಯಿಕ ನೆಲೆಯಲ್ಲಿ ರೂಪಿಸಿದಾಗ ಅದು ಬಿಗಿ ಬಂಧಗಳಿಂದ ಕೂಡಿರುತ್ತದೆ. ಅದೇ ಉದ್ದೇಶಕ್ಕೆ ಈ ಕಾರ್ಯಕ್ರಮ. ಸಮುದಾಯದ ಅನನ್ಯತೆ, ಸ್ವಾಭಿಮಾನ ಇರುವುದು ಅದರ ಸಾಂಸ್ಕೃತಿಕ ನೆಲೆಗಳಲ್ಲಿ. ಅದರ ಹಬ್ಬ–ಹರಿದಿನ, ಆಚರಣೆ, ನಂಬಿಕೆಗಳಲ್ಲಿ, ಕಲೆ–ಸಾಹಿತ್ಯದಲ್ಲಿ. ಈ ಸಂಭ್ರಮ ದೀವರ ಸಮುದಾಯದ ಅಂತಃಸಾಕ್ಷಿಯ ಪ್ರಜ್ಞೆಯಾಗಿದೆ’ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಧೀರ ದೀವರು ಬಳಗದ ಅಧ್ಯಕ್ಷ ಸುರೇಶ್ ಕೆ.ಬಾಳೆಗುಂಡಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ನಾಗರಾಜ್ ನೇರಿಗೆ, ಜಿಲ್ಲಾ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ್, ರಾಮಚಂದ್ರ, ರವೀಂದ್ರ, ಅಣ್ಣಪ್ಪ ಮಳಿಮಠ ಹಾಜರಿದ್ದರು.

***

ಹಸೆ ಚಿತ್ತಾರಕ್ಕೆ ಜಿಐ ಮನ್ನಣೆ ಸಿಗಲಿ; ಕೊಡಸೆ

‘ಹಸೆ–ಚಿತ್ತಾರ ದೀವರ ಸಮುದಾಯದ ಕಲಾಶ್ರೀಮಂತಿಕೆಯ ದ್ಯೋತಕ. ಈ ಕಲೆಗೆ ಭೌಗೋಳಿಕ ಮನ್ನಣೆ (ಜಿಐ) ಪಡೆದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ಕಲೆಗೆ ಹೆಚ್ಚು ಮಾನ್ಯತೆ ಸಿಗಲಿದೆ’ ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅಭಿಪ್ರಾಯಪಟ್ಟರು.

ಹಸೆ ಚಿತ್ತಾರ ಪರಿಷತ್ ಎಲ್ಲ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಜೊತೆಗೆ ಕಮ್ಮಟಗಳ ಆಯೋಜಿಸಿ ಮದುವೆಗಷ್ಟೇ ಅಲ್ಲದೇ ಬೇರೆ ಬೇರೆ ಅಲಂಕಾರದಲ್ಲಿ ಬಳಸುವ ಸಾಧ್ಯತೆಗಳ ಬಗ್ಗೆ ತರಬೇತಿ, ಮಾಹಿತಿ ನೀಡಿದಲ್ಲಿ ಈ ಕಲೆಗೆ ಹೆಚ್ಚು ಲಾಭವಾಗಲಿದೆ ಎಂದರು.

ಮದುವೆಗಷ್ಟೇ ಅಲ್ಲದೇ ಮನೆಯ ಹೊರಾಂಗಣದ ಸೌಂದರ್ಯದ ರೂಪಕವಾಗಿ, ಅಲಂಕಾರದ ವಿನ್ಯಾಸವಾಗಿ ಹಸೆ ಚಿತ್ತಾರ ಬಳಕೆಯಾದರೆ ಕಲಾವಿದರಿಗೆ ನೆರವಾಗಲಿದೆ. ಅದರ ಸಂರಕ್ಷಣೆಯ ಜೊತೆಗೆ ಮುಂದಿನ ‍ಪೀಳಿಗೆಗೆ ವ್ಯವಹಾರಿಕವಾಗಿ ಉಳಿಸಿಕೊಂಡು ಹೋಗಲು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದರು.

ಮುಳುಗಡೆ ಸಮಸ್ಯೆ ‍ಪರಿಹಾರಕ್ಕೆ ಯತ್ನ

ಕಾನೂನು ತೊಡಕು, ನ್ಯಾಯಾಲಯಗಳ ಆದೇಶದಿಂದ ಮಲೆನಾಡಿನಲ್ಲಿ ಈಗ ಈಡಿಗ ಸಮುದಾಯ ಭೂಮಿಯ ಸಮಸ್ಯೆಗೆ (ಮುಳುಗಡೆ) ಸಿಲುಕಿಕೊಂಡಿದೆ. ಈಗಿನ ಸರ್ಕಾರವೂ ಪ್ರಯತ್ನ ಮಾಡುತ್ತಿದೆ. ವಿರೋಧ ಪಕ್ಷದವರು ಹೋರಾಟದ ಮೂಲಕ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ದಾರಿ ಬೇರೆ ಬೇರೆ ಅದರೂ ನಾವೆಲ್ಲರೂ ಸೇರಿಈ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಹೇಳಿದರು.

ಈ ಕಾಲದಲ್ಲಿ ನಮ್ಮತನವನ್ನು ಮರೆತು ಆಧುನಿಕ ಜಗತ್ತಿಗೆ ಈಗಿನ ಯುವ ಪೀಳಿಗೆ ನಾಗಾಲೋಟದಲ್ಲಿ ಹೋಗುತ್ತಿದೆ. ಈ ಸಂದರ್ಭದಲ್ಲಿ ಸ್ನೇಹಿತರು, ಹಿತೈಷಿಗಳು ಸೇರಿ ನಮ್ಮ ಈಡಿಗ ಪರಂಪರೆಯನ್ನು ಎತ್ತಿಹಿಡಿಯಲು ವೇದಿಕೆ ಸೃಷ್ಟಿಸಿರುವುದು ಶ್ಲಾಘನೀಯ. ಸಮಾಜದ ರೀತಿ–ರಿವಾಜು, ಮದುವೆ ಸಂಪ್ರದಾಯ, ಆಚರಣೆ, ಕಲೆಗಳನ್ನು ದಾಖಲಿಸಿ ಮುಂದಿನ
ಪೀಳಿಗೆ ಗೆ ಉಳಿಸುವ ಕೆಲಸ ನಡೆಯಲಿ. ಅಗತ್ಯ ನೆರವು ನೀಡಲಾಗುವುದು ಎಂದರು.

ಮಂಜಮ್ಮ ವಡ್ನಾಳಗೆ ಚಿತ್ತಾರಗಿತ್ತಿ ಪ್ರಶಸ್ತಿ

ಸಮಾರಂಭದಲ್ಲಿ ಕಾಗೋಡು ಚಳವಳಿಯ ನೇತಾರರಾದ ಮಂಜಮ್ಮ ಗಣ‍ಪತಿಯಪ್ಪ ವಡ್ನಾಳ ಅವರಿಗೆ ‘ಚಿತ್ತಾರಗಿತ್ತಿ’ ಪ್ರಶಸ್ತಿ, ಹೊಸನಗರದ ಸಮಾಜವಾದಿ ಹೋರಾಟಗಾರ ಬಿ.ಸ್ವಾಮಿರಾವ್, ಮಾಜಿ ಶಾಸಕ,ಶಿವಮೊಗ್ಗದ ಡಾ.ಜಿ.ಡಿ. ನಾರಾಯಣಪ್ಪ, ನಿವೃತ್ತ ಕೃಷಿ ವಿಜ್ಞಾನಿ ಡಾ.ಎಂ.ಕೆ. ನಾಯ್ಕ ಹಾಗೂ ಇತಿಹಾಸ ಸಂಶೋಧಕ ಮಧು ಗಣಪತಿರಾವ್ ಮಡೆನೂರು ಅವರಿಗೆ ‘ಧೀರದೀವರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳಗಾವಿ, ಬೆಂಗಳೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಂದ ನೂರಾರು ಮಂದಿ ಈಡಿಗ ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದಿನವಡೀ ಸಾಂಸ್ಕೃತಿಕ ವೈಭವ ಗರಿಗೆದರಿತ್ತು. ಹಾಡು–ಹಸೆ, ಡೊಳ್ಳು ಕುಣಿತ, ಕೋಲಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ಅನಾರೋಗ್ಯದ ಕಾರಣ ಮಂಜಮ್ಮ ಗಣ‍ಪತಿಯಪ್ಪ ವಡ್ನಾಳ ಪ್ರಶಸ್ತಿ ಸ್ವೀಕರಿಸಲು ಬಂದಿರಲಿಲ್ಲ. ಕಾರ್ಯಕ್ರಮದಲ್ಲಿ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT