ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಹೊನ್ನೂರು: ಅಭಿವೃದ್ಧಿ ಕೆಲಸಗಳಿಗೆ ಸಿಗದ ಒತ್ತು

ಹೊಳೆಹೊನ್ನೂರು ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ ಏರಿ ಎರಡು ವರ್ಷ
Published 23 ಸೆಪ್ಟೆಂಬರ್ 2023, 7:21 IST
Last Updated 23 ಸೆಪ್ಟೆಂಬರ್ 2023, 7:21 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಇಲ್ಲಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿ ಎರಡು ವರ್ಷಗಳಾದರೂ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡದ ಕಾರಣ ಪಟ್ಟಣದ ಜನತೆಗೆ ಅಭಿವೃದ್ಧಿಯು ಮರೀಚಿಕೆಯಾಗಿದೆ.

ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಸಮಸ್ಯೆಗಳು ಹೆಚ್ಚಿದ್ದು, ಸಾರ್ವಜನಿಕರು ಬೇಸತ್ತಿದ್ದಾರೆ. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂಬ ಕೂಗು ಸಾರ್ವಜನಿಕರ ವಲಯದಲ್ಲಿ ಕೇಳಿಬಂದಿದೆ.

ಭಗೀರಥ ಸರ್ಕಲ್, ಭದ್ರಾವತಿಗೆ ಹೋಗುವ ರಸ್ತೆಗಳಲ್ಲಿ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಹಾಗೂ ಬಿಸಿಲು ಸಂದರ್ಭದಲ್ಲಿ ಪ್ರಯಾಣಿಕರು ರಸ್ತೆ ಪಕ್ಕದಲ್ಲಿರುವ ಮನೆಗಳ ಚಾವಣಿಯನ್ನು ಆಶ್ರಿಸಬೇಕಿದೆ.

ನೃಪತುಂಗ ಸರ್ಕಲ್, ಗಾಂಧಿ ಸರ್ಕಲ್ ಹಾಗೂ ಚನ್ನಗಿರಿಗೆ ಹೋಗುವ ರಸ್ತೆಗಳಲ್ಲಿ ಬಸ್‌ ನಿಲ್ದಾಣವಿದ್ದರೂ ದುರಸ್ತಿಯಲ್ಲಿವೆ. ಕುಳಿತುಕೊಳ್ಳುವ ಬೆಂಚ್‌ಗಳು ಮುರಿದು ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡೂಕಾಣದಂತೆ ವರ್ತಿಸುತ್ತಿದ್ದಾರೆ. ಕೆಲವರು ಎಲೆ ಅಡಿಕೆ, ಗುಟ್ಕಾ, ತಂಬಾಕು ಸೇವಿಸಿ ಬಸ್‌ ನಿಲ್ದಾಣದಲ್ಲಿಯೇ ಉಗುಳುವುದರಿಂದ ಪ್ರಯಾಣಿಕರು ನಿಲ್ದಾಣವನ್ನು ಉಪಯೋಗಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಬಸ್ ಬರುವವರೆಗೂ ನಿಂತುಕೊಂಡೇ ಕಾಯಬೇಕಾದ ಸ್ಥಿತಿ ಇದೆ.

ಪಟ್ಟಣ ಪಂಚಾಯಿತಿಗೆ ಸೇರಿದ ಸಾಮೂಹಿಕ ಶೌಚಾಲಯದ ಸ್ಥಿತಿ ಹೇಳತೀರದು. ಸ್ವಚ್ಛತೆಯ ಕೊರತೆ ಮತ್ತು ಅವ್ಯವಸ್ಥೆಯ ಕಾರಣ ಜನರು ಶೌಚಾಲಯ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ರಸ್ತೆ ಪಕ್ಕದಲ್ಲಿಯೇ ಶೌಚಕ್ಕೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೃಪತುಂಗ ಸರ್ಕಲ್‌ನಲ್ಲಿರುವ ಶೌಚಾಲಯದ ಸ್ಥಿತಿ ದಯನೀಯವಾಗಿದೆ.

ನೃಪತುಂಗ ಸರ್ಕಲ್‌ನಲ್ಲಿರುವ ಚನ್ನಗಿರಿ ಬಸ್ ನಿಲ್ದಾಣದ ಹತ್ತಿರ ಬ್ಯಾಂಕ್‌ ಶಾಖೆಗಳಿದ್ದು, ಅಲ್ಲಿಗೆ ಬರುವ ಗ್ರಾಹಕರು ರಸ್ತೆಯ ಎರಡೂ ಬದಿಗಳಲ್ಲಿ ಬೈಕ್ ಹಾಗೂ ಕಾರ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸಬೇಕಾಗಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಕಸವನ್ನು ಎಲ್ಲೆಂದರಲ್ಲಿ ಬೀಸಾಡುವುದರಿಂದ ಚರಂಡಿಗಳಲ್ಲಿ ಕೊಳಚೆ ತುಂಬಿ ಗಬ್ಬು ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ಡೆಂಗಿ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ ಎಂದು ಪಟ್ಟಣ ನಿವಾಸಿ ಜಿ.ವೆಂಕಟೇಶ್‌ ಅಳಲು ತೋಡಿಕೊಂಡಿದ್ದಾರೆ.

ವೆಂಕಟೇಶ್‌
ವೆಂಕಟೇಶ್‌
ಆರ್‌.ಉಮೇಶ್
ಆರ್‌.ಉಮೇಶ್
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲ. ಇದನ್ನು ಸರಿಪಡಿಸಲು ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ಸ್ಥಾಪನೆಯಾಗಬೇಕು
ಆರ್‌.ಉಮೇಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

ಪಟ್ಟಣ ಪಂಚಾಯಿತಿ ಹೊಸದಾಗಿ ಸ್ಥಾಪನೆ ಆಗಿದ್ದರಿಂದ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕು. ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾಮೂಹಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಲಾಗುವುದು. ಸಾಯಿಷಾ ಚೌಟ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT