ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ಅಕ್ಷರಧಾಮ ಮಾದರಿಯಲ್ಲಿ ಉಡುತಡಿ ಅಭಿವೃದ್ಧಿ

ಅಕ್ಕಮಹಾದೇವಿ ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸಿದ ಬಿ.ಎಸ್. ಯಡಿಯೂರಪ್ಪ
Last Updated 9 ಅಕ್ಟೋಬರ್ 2021, 6:52 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ‘ಉಡುತಡಿಯನ್ನು ಐತಿಹಾಸಿಕ ಕ್ಷೇತ್ರವನ್ನಾಗಿಸುವ ಸಂಕಲ್ಪ ನನ್ನದು. ಅಕ್ಕಮಹಾದೇವಿ ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನದ ಚರಿತ್ರೆ ಸಾರುವ ಈ ಸ್ಥಳ ದೇಶದ ಗಮನ ಸೆಳೆಯಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪಟ್ಟಣ ಸಮೀಪದ ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ 66 ಅಡಿ ಎತ್ತರದ ಪ್ರತಿಮೆಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

‘ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಹತ್ತು ಎಕರೆ ಜಮೀನು ನೀಡಲಾಗಿದ್ದು, ಹೆಣ್ಣುಮಕ್ಕಳಿಗಾಗಿ ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಬೇಕಾಗುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ಗ್ರಾಮಿಣ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದು, ಸಂಸದ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ದೆಹಲಿಯ ಅಕ್ಷರಧಾಮದ ಮಾದರಿಯಲ್ಲೇ ಅಭಿವೃದ್ಧಿಪಡಿಸಲಾಗುವುದು. ಒಂದೂವರೆ ವರ್ಷದೊಳಗೆ ಲೋಕಾರ್ಪಣೆಗೊಳ್ಳಲಿದೆ’ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಶಿವಶರಣೆ ಅಕ್ಕಮಹಾದೇವಿ ಅವರು 12 ಶತಮಾನದಲ್ಲೇ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ತಾಯಿ. ಅಕ್ಕಮಹಾದೇವಿ ಅವರ 66 ಅಡಿ ಎತ್ತರದ ಪ್ರತಿಮೆಯು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಮ್ಮ ಉಡುತಡಿಯಲ್ಲಿ ನಿರ್ಮಾಣವಾಗುತ್ತಿದೆ. ಅಕ್ಕಮಹಾದೇವಿ ಜೀವನ ಚರಿತ್ರೆ ಬಿಂಬಿಸುವ 500 ಅಡಿ ಉದ್ದದ ಕದಳಿವನದ ಗುಹೆ. ಸಮಾನತೆ ಸಾರಿದ 30 ಪ್ರಸಿದ್ಧ ಶಿವಶರಣರ ಶಿಲಾಕೃತಿ ಮಂಟಪಗಳು.ದೋಣಿ ವಿಹಾರ, ದಿಬ್ಬದ ಮೇಲೆ ಶರಣೆ ಅಕ್ಕಮಹಾದೇವಿ ಶಿಲ್ಪ ಕಲಾಕೃತಿಗಳು ಇಲ್ಲಿ ನಿರ್ಮಾಣವಾಗುತ್ತಿವೆ.ಅದನ್ನು ಸ್ಥಳೀಯರು ಉಳಿಸಿ ಬೆಳೆಸಬೇಕು. ಅಲ್ಲಮ ಪ್ರಭು ಅವರ ಕ್ಷೇತ್ರದ ಅಭಿವೃದ್ಧಿಗೆ ₹ 1 ಕೋಟಿ ಬಿಡುಗಡೆಯಾಗಲಿದೆ’ ಎಂದು ಹೇಳಿದರು.

ಆನಂದಪುರದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚನ್ನವೀರಪ್ಪ, ಶಿಕಾರಿಪುರ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಲಿಂಗಪ್ಪ, ಶಿರಾಳಕೊಪ್ಪ ಪುರಸಭೆ ಅಧ್ಯಕ್ಷೆ ಮಂಜುಳಾ ರಾಜು, ಪದ್ಮನಾಭ ಭಟ್, ಕೊಳಗಿ ರೇವಣಪ್ಪ, ಅಗಡಿ ಅಶೋಕ್, ರುದ್ರಮುನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT