ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದಿರಾಗಾಂಧಿ ಅಧಿಕಾರಕ್ಕಾಗಿ ಸಂವಿಧಾನವನ್ನು ಬಲಿಕೊಟ್ಟರು: ಪ್ರಭಾಕರ್‌ ಭಟ್ಟ ಕಿಡಿ

ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತು ಸಂವಾದ
Published 25 ಜೂನ್ 2024, 16:17 IST
Last Updated 25 ಜೂನ್ 2024, 16:17 IST
ಅಕ್ಷರ ಗಾತ್ರ

ಶಿವಮೊಗ್ಗ: ಅಧಿಕಾರಕ್ಕಾಗಿ ವೈಯುಕ್ತಿಕ ಸ್ವಾತಂತ್ರ್ಯ ಹರಣ ಮಾಡಿ, ಸಂವಿಧಾನವನ್ನೇ ಹಾಳು ಮಾಡುವ ಮೂಲಕ ದೇಶವನ್ನೇ ಬಲಿಕೊಟ್ಟ ಅಪಕೀರ್ತಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್‌ ಭಟ್ಟ ಹೇಳಿದರು. 

’ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು‘ ವೇದಿಕೆಯಿಂದ ನಗರದ ಬಂಟರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ’ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ‘ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜವಾಹರಲಾಲ್‌ ನೆಹರೂ ದೇಶ ವಿಭಜನೆ ಮಾಡಿದರು. ಪಾಕ್‌ ಆಕ್ರಮಿತ ಕಾಶ್ಮೀರ (ಪಿಓಕೆ) ಮತ್ತು ಚೀನಾ ದೇಶಕ್ಕೆ 43 ಸಾವಿರ ಚದರ ಕಿ.ಮೀ ಭೂಮಿ ಬಿಟ್ಟುಕೊಟ್ಟರು.  ಇಂದಿರಾ ಗಾಂಧಿ ಅವರು ನಿಜವಾದ ಗಾಂಧಿ ವಂಶಸ್ಥರು ಅಲ್ಲವೇ ಅಲ್ಲ. ಅವರು ಫೀರೋಜ್‌ ಗ್ಯಾಂಡಿಯನ್ನು ಮದುವೆಯಾಗಿ ಗ್ಯಾಂಡಿ ಬದಲಾಗಿ ಗಾಂಧಿ ಸೇರಿಸಿಕೊಂಡರು. ಗಾಂಧಿ ಪದವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು. 

ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಆರೋಪ ಬಂದಾಗ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂದಿರಾಗಾಂದಿ ತುರ್ತು ಪರಿಸ್ಥಿತಿ ಹೇರಿದರು. 567ಕ್ಕೂ ಅಧಿಕ ಹೋರಾಟಗಾರನ್ನು ಬಂಧಿಸಿ ಜೈಲಿಗೆ ಹಾಕಿಸಿದರು. ಆಗ ಇಡೀ ದೇಶವೇ ಸ್ಥಬ್ಧವಾಗಿತ್ತು ಎಂದು ಹೇಳಿದರು. 

ಇಂದಿರಾ ಗಾಂಧಿ ಬಗ್ಗೆ ಮಾತನಾಡುವರರು ಯಾರು ಇರಲಿಲ್ಲ. ಮಾತನಾಡಿದರೇ ಸಾಕು ಬಂಧಿಸುತ್ತಿದ್ದರು. ಆದರೆ ಆರ್‌ಎಸ್‌ಎಸ್‌ ಹೋರಾಟ ಮಾಡುವ ಮೂಲಕ ಜನರಿಗೆ ನ್ಯಾಯ ಕೊಡಿಸಿತು. ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಇದ್ದ ಪರಿಸ್ಥಿತಿಯಲ್ಲಿ ಸಂಘ ಬೀದಿಗಿಳಿದು ಹೋರಾಟ ಮಾಡಿತು. ಅಂದು ಬುದ್ಧಿಜೀವಿಗಳು ಹೇಡಿಗಳಂತೆ ವರ್ತನೆ ಮಾಡಿದರು. ಕೆಲವು ಮಾಧ್ಯಮಗಳು ಕೂಡ ಧ್ವನಿ ಎತ್ತಲಿಲ್ಲ. ಮಾಧ್ಯಮಗಳ ಸ್ವಾತಂತ್ರವನ್ನು ಸಹ ಹರಣ ಮಾಡಲಾಗಿತ್ತು ಎಂದರು.

ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಸ್ವತಃ ಇಂದಿರಾಗಾಂಧಿ ಅವರನ್ನೇ ದೇಶದ ಜನತೆ ಸೋಲಿಸಿದರು. ಜನತಾ ಪರಿವಾರ ಆಡಳಿತಕ್ಕೆ ಬಂದಿತು. ಇದು ನಿಜಕ್ಕೂ ಪ್ರಜಾಪ್ರಭುತ್ವ ಗೆಲುವು ಆಯಿತು.

ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ಸಿನವರು ಸುಖಾಸುಮ್ಮನೇ ಆರೋಪ ಮಾಡುತ್ತಾರೆ. ದೇಶದ ಅಭಿವೃದ್ಧಿಗಾಗಿ ಕಾಲ ಕಾಲಕ್ಕೆ ಸಂವಿಧಾನ ತಿದ್ದುಪಡಿ ಮಾಡಲಾಗುತ್ತದೆ. ಆದರೆ  ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿನವರಿಗೆ ಬದ್ಧತೆಯೇ ಇಲ್ಲ. ಹೀಗಾಗಿಯೇ ಮೂರ್ಖರ ಮಾತನ್ನು ಜನರು ನಂಬಬಾರದು ಎಂದು ಹೇಳಿದರು. 

ಭ್ರಷ್ಟಾಚಾರ ಮಾಡಿರುವುದೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ ಆಗಿದೆ. ಗರಬಿ ಹಟಾವೋ ಅಂದ್ರು ಆದರೆ ಇವತ್ತಿಗೂ ಕೂಡ ಸಾಕಷ್ಟು ಜನರು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ಸಿನ ದುರಾಡಳಿತವೇ ಕಾರಣವಾಗಿದೆ ಎಂದು ಹೇಳಿದರು. 

ಡಾ. ಶ್ರೀನಿವಾಸರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್‌. ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ. ವಿಷ್ಣುಕಾಂತ್‌ ಚಟ್ಪಲ್ಲಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT