ಶುಕ್ರವಾರ, ಮೇ 20, 2022
19 °C

ಶಿವಮೊಗ್ಗದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯವನ್ನು ಖಂಡಿಸಿ ಮೇ 10ರಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ತಿಳಿಸಿದರು.

‘ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಭೋವಿ ಸಮಾಜ ಭವನ ಮುಂಭಾಗದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಸಮಾವೇಶದಲ್ಲಿ 25 ಸಾವಿರದಿಂದ 30 ಸಾವಿರ ಜನ ಸೇರುವ ನಿರೀಕ್ಷೆಯಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮಾವೇಶಕ್ಕೂ ಮೊದಲು ಬಸ್ ನಿಲ್ದಾಣ ಸಮೀಪದ ಅಶೋಕ ವೃತ್ತದಿಂದ ಪಾದಯಾತ್ರೆ ನಡೆಸಲಾಗುವುದು. ಬಿ.ಎಚ್. ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತದ ಮುಖಾಂತರ ಮೆರವಣಿಗೆ ಸಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಸೇರಿ ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲೆಯ ಎಲ್ಲಾ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಮೆರವಣಿಗೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಿಜೆಪಿ ಪಕ್ಷದ ಶಾಸಕರುಗಳೆಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಬಡವರಿಗೆ ಮನೆ ನಿರ್ಮಾಣ ಸ್ಥಗಿತಗೊಂಡಿದೆ. ಗಂಗಾ ಕಲ್ಯಾಣ ಯೋಜನೆ ಏನಾಗಿದೆ ಗೊತ್ತಿಲ್ಲ‘ ಎಂದು ಆರೋಪಿಸಿದರು.

‘ದೇಶ ಸುಭಿಕ್ಷವಾಗಿದೆ ಎಂದು ಬಿಜೆಪಿಯ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಜನರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ’ ಎಂದು ದೂರಿದರು.

‘ಬಿಜೆಪಿ ಕೂಡ ಸಾಕಷ್ಟು ಹೋರಾಟಗಳನ್ನು ರಸ್ತೆಯ ಮೇಲೆಯೇ ನಡೆಸಿದೆ. ಆ ಸಂದರ್ಭದಲ್ಲಿ ಅವರು ರಸ್ತೆಯಲ್ಲಿ ಅಕ್ಕಿರೊಟ್ಟಿ ಸುಟ್ಟಿಲ್ಲವೇ? ಇದೀಗ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಅಡುಗೆ ಅನಿಲ, ವಿದ್ಯುತ್, ಪೆಟ್ರೋಲ್- ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಭ್ರಷ್ಟಾಚಾರ ವಿಪರೀತವಾಗಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸದಿದ್ದರೆ ತಪ್ಪಾಗುತ್ತದೆ‘ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧವೂ ಆರೋಪ ಕೇಳಿಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ವೈಯಕ್ತಿಕವಾಗಿ ಒಬ್ಬರ ಮೇಲೆ ಆರೋಪ ಮಾಡಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಎಂಎಲ್ಸಿ ಆರ್. ಪ್ರಸನ್ನ ಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಎನ್. ರಮೇಶ್, ಕೆ. ರಂಗನಾಥ್, ಜಿ.ಡಿ. ಮಂಜುನಾಥ ಇದ್ದರು.

ದೊಡ್ಡಮಟ್ಟದ ಸಮಾವೇಶ ನಡೆಸುವ ಚಿಂತನೆ

ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾವೇಶ ಹಮ್ಮಿಕೊಂಡು ಬರಲಾಗುತ್ತಿದೆ. ಇದೀಗ ಶಿವಮೊಗ್ಗದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಮುಂಬರುವ ದಿನದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಸಮಾವೇಶ ನಡೆಸುವ ಚಿಂತನೆ ಇದೆ. ಸಮಾವೇಶದಲ್ಲಿ ರಾಜ್ಯ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.