ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ | ಕುಡಿಯುವ ನೀರು, ಬೆಳೆ ಉಳಿಸಿಕೊಳ್ಳಲು ಹೆಣಗಾಟ

ಅರೆಮಲೆನಾಡು ಪ್ರದೇಶ ಶಿರಾಳಕೊಪ್ಪ ಸುತ್ತಮುತ್ತ ನೀರಿಗೆ ಹಾಹಾಕಾರ
ನವೀನ್‌ಕುಮಾರ್‌ ಎನ್‌.
Published 16 ಮಾರ್ಚ್ 2024, 7:02 IST
Last Updated 16 ಮಾರ್ಚ್ 2024, 7:02 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಅರೆಮಲೆನಾಡು ಪ್ರದೇಶವಾದ ತಾಳಗುಂದ, ಉಡುಗಣಿ ಹೋಬಳಿಯಲ್ಲಿ ಈ ಬಾರಿ ಭೀಕರ ಬರ ಆವರಿಸಿದ್ದು, ಜನರು ಆತಂಕದಲ್ಲಿದ್ದಾರೆ.

ಈ ಪ್ರದೇಶದಲ್ಲಿ ಕಳೆದ ವರ್ಷ ಕೇವಲ 6 ದಿನ ಮಳೆ ಸುರಿದಿದ್ದು, ಜನರು ಬಯಲುಸೀಮೆಯ ಸುಡು ಬಿಸಿಲಿನ ಅನುಭವ ಹೊಂದುವಂತಾಗಿದೆ.

ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತೋಟದಲ್ಲಿ ಬೆಳೆದು ನಿಂತಿರುವ ಅಡಿಕೆ ಪೈರಿಗೆ ನೀರು ಲಭಿಸುತ್ತಿಲ್ಲ. ಕೊಳವೆಬಾವಿಗಳಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆ ಆಗುತ್ತಿದೆ. ಅಡಿಕೆ ಗಿಡ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಪ್ರಸಕ್ತ ವರ್ಷ ಲಾಭ, ನಷ್ಟದ ಲೆಕ್ಕಾಚಾರ ಹಾಕದೆ ತೋಟವನ್ನು ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿಯಲ್ಲಿದ್ದಾರೆ.

ಏತ ನೀರಾವರಿ ಯೋಜನೆಯಿಂದಾಗಿ ತಾಳಗುಂದ ಹಿರೆಕೆರೆ, ಬಿಸ್ಲಳ್ಳಿ, ಬಳ್ಳಿಗಾವಿ ಸೇರಿ ಹಲವಾರು ದೊಡ್ಡ ಕೆರೆಗಳಲ್ಲಿ ನೀರು ಇನ್ನೂ ಲಭ್ಯವಿದೆ. ಆದರೆ, ಸಣ್ಣ, ಪುಟ್ಟ ಕೆರೆಗಳು ಈಗಾಗಲೇ ಬರಿದಾಗಿವೆ. ಕೊಳವೆಬಾವಿ ಕೊರೆಯಿಸಲು ಲಾರಿಗಳು ಸಿಗುತ್ತಿಲ್ಲ. ದರ ಕೂಡ ದುಪ್ಪಟ್ಟಾಗಿದೆ. 650ರಿಂದ 700 ಅಡಿ ಆಳದವರೆಗೂ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮಂಚಿಕೊಪ್ಪ, ಹೊಸ ಮುತ್ತಿಗೆ, ಕಡೇನಂದಿಹಳ್ಳಿ, ಮಲ್ಲೇನಹಳ್ಳಿ, ಮಳವಳ್ಳಿ, ಕರ್ನಲ್ಲಿ ಸೇರಿ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರ್ನ್ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಶಿರಾಳಕೊಪ್ಪ ಪಟ್ಟಣದಲ್ಲೂ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.

ಕೊಳವೆಬಾವಿಯಿಂದ ನೀರೆತ್ತುವ ಮೋಟರ್‌ ಸುಟ್ಟಿದೆ ಎಂಬ ಕಾರಣಕ್ಕೆ ಕರ್ನಲ್ಲಿ ಗ್ರಾಮದ ಕೆಳಗಿನ ಭಾಗಕ್ಕೆ 15 ದಿನಗಳಿಂದ ನೀರು ಬಿಟ್ಟಿಲ್ಲ. ಮೇಲಿನ ಕೇರಿಗೆ ಸಹ ಮೂರು, ನಾಲ್ಕು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದಾರೆ. ದನ ಕರುಗಳಿಗೆ ಸಹ ನೀರಿನ ಅಭಾವ ಉಂಟಾಗಿದೆ ಎಂದು ಗ್ರಾಮದ ಮಹಿಳೆಯೊಬ್ಬರು ದೂರಿದರು.

ಮನೆಯಲ್ಲಿ ಕುಡಿಯಲು ನೀರಿಲ್ಲ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಯತಮ್ಮ ಮುಚಡಿ ಗ್ರಾಮದ ಹನುಮಂತಮ್ಮ ಮನವಿ ಮಾಡಿದರು.

ಶಿರಾಳಕೊಪ್ಪ ಸಮಿಪದ ಸುಣ್ಣದಕೊಪ್ಪದಿಂದ ಕರ್ನಲ್ಲಿ ಹೋಗುವ ಮಾರ್ಗ ಮಧ್ಯ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟ
ಶಿರಾಳಕೊಪ್ಪ ಸಮಿಪದ ಸುಣ್ಣದಕೊಪ್ಪದಿಂದ ಕರ್ನಲ್ಲಿ ಹೋಗುವ ಮಾರ್ಗ ಮಧ್ಯ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟ

ಸದಾಪುರ ಹಾಗೂ ಬಿದರಕೊಪ್ಪದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಸದಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಕೊಳವೆಬಾವಿ ಬಾಡಿಗೆ ಪಡೆದು ನೀರು ಕೊಡಲಾಗುತ್ತಿದೆ. ಕಡೇನಂದಿಹಳ್ಳಿ ಬಿದರಕೊಪ್ಪದಲ್ಲಿ ನೂತನ ಕೊಳವೆಬಾವಿ ಕೊರೆಯಿಸಿದ್ದು ಪೈಪ್‌ಲೈನ್‌ ಅಳವಡಿಸಲಾಗಿದೆ. –ಅವಿನಾಶ್‌ ಪಿಡಿಒ ಸುಣ್ಣದಕೊಪ್ಪ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT