ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಆಯುರ್ವೇದ ವೈದ್ಯಕೀಯ ವಿ.ವಿ. ಸ್ಥಾಪನೆ: ಸಂಸದ ಬಿ.ವೈ. ರಾಘವೇಂದ್ರ

ರಾಷ್ಟ್ರೀಯ ಆಯುರ್ವೇದ ದಿನಾಚರಣೆ
Last Updated 3 ನವೆಂಬರ್ 2021, 3:28 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಲ್ಲಿ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ನಗರಕ್ಕೆ ಆಯುರ್ವೇದ ವಿವಿಯನ್ನು ಬಜೆಟ್‌ನಲ್ಲಿ ಮಂಜೂರು ಮಾಡಿದ್ದರು. ಅದರ ಸ್ಥಾಪನೆ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಆಯುರ್ವೇದ ಕಾಲೇಜು ದೇವರಿಲ್ಲದ ದೇವಸ್ಥಾನ ಆಗಬಾರದು. ಹಿಂದೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್‌.ಈಶ್ವರಪ್ಪ ಅವರ ಪ್ರಯತ್ನದ ಫಲವಾಗಿ ಆಯುರ್ವೇದ ಕಾಲೇಜು ಆರಂಭವಾಗಿದೆ. ಯಡಿಯೂರಪ್ಪ ಅವರು ರಾಜ್ಯದ 105 ಆಯುಷ್ ಕಾಲೇಜುಗಳಿಗೆ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಆಗಬೇಕು ಎಂದು 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಜೊತೆಗೆ ₹ 10 ಕೋಟಿ ಅನುದಾನವನ್ನೂ ಇರಿಸಿದರು. ಅಧಿಕಾರಿಗಳು ಇದನ್ನು ಕಾರ್ಯಗತ ಮಾಡಬೇಕು. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಡಿಆರ್‌ಡಿಒ ಸಂಶೋಧನಾ ಕೇಂದ್ರವನ್ನು ಶಿವಮೊಗ್ಗದಲ್ಲಿ ಆರಂಭಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ಗಾಯಗೊಳ್ಳುವ ಸೈನಿಕರ ಚಿಕಿತ್ಸೆಗೆ ಪಶ್ಚಿಮ ಘಟ್ಟದಲ್ಲಿ ಸಿಗವ ಔಷಧೀಯ ಸಸ್ಯಗಳಿಂದ ಕೇಂದ್ರದಲ್ಲಿ ಔಷಧ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ಶೀಘ್ರವೇ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

‘ದೇಶ ಸೇವೆಯೇ ಈಶ ಸೇವೆ ಎನ್ನುವಂತೆ ಆಯುರ್ವೇದ ಕೂಡಾ ದೇಶ ಸೇವೆಯೇ ಆಗಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಮೂಲಕ ಆ ಭಾಗದ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಈ.ಎಸ್. ಪುಷ್ಪ, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ದೊಡ್ಡಮನಿ, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ.ಅನಿಲ್, ಡಾ.ಪಥಂಜಲಿ, ಡಾ.ಶ್ರೀನಿವಾಸ ರೆಡ್ಡಿ, ಡಾ.ದುರ್ಗಪ್ಪ, ಡಾ.ಮಹಾಲಿಂಗಪ್ಪ, ಡಾ.ಎಸ್. ರಾಘವೇಂದ್ರ, ಡಾ.ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT