ಶನಿವಾರ, ಮೇ 28, 2022
26 °C
‘ಜನಾನುರಾಗಿ ದಿ.ಕೆ.ವಿ. ನರಸಪ್ಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮಾಜಿ ಸಭಾಪತಿ ನರಸಪ್ಪ ಮೌಲ್ಯಯುತ ರಾಜಕಾರಣಿ: ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಶಿಕಾರಿಪುರ: ವಿಧಾನಪರಿಷತ್ ಮಾಜಿ ಸಭಾಪತಿ ದಿ.ಕೆ.ವಿ. ನರಸಪ್ಪ ಅವರು ಮೌಲ್ಯಯುತ ರಾಜಕಾರಣವನ್ನು ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದರು.

ಪಟ್ಟಣದ ಜೈನ ಮಂದಿರದಲ್ಲಿ ಭಾನುವಾರ ನಾಗರಿಕ ವೇದಿಕೆ, ಕರ್ನಾಟಕ ಅಧ್ಯಯನ ಕೇಂದ್ರ ಮಾಜಿ ಸಭಾಪತಿ ಕೆ.ವಿ. ನರಸಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಜನಾನುರಾಗಿ ಕೆ.ವಿ. ನರಸಪ್ಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರಳ, ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ನರಸಪ್ಪ ಅವರು ರಾಜಕೀಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ನಾನು ಹಲವು ಬಾರಿ ಅವರ ಜತೆ ಕುಳಿತು ಅಭಿವೃದ್ಧಿ ಕಾರ್ಯ ಹಾಗೂ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರ ನಿಧನದ ನಂತರ ಪಟ್ಟಣದ ಹೃದಯಭಾಗದಲ್ಲಿ ಕೆ.ವಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರ ನಿರ್ಮಿಸಿದ್ದೆವು. ಇಂದು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರನು ನೆನಪುಗಳನ್ನು ಮೆಲುಕು ಹಾಕುವಂತಾಯಿತು’ ಎಂದರು.

ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್, ‘ಕೆ.ವಿ. ನರಸಪ್ಪ ಅವರು ಶಿಕಾರಿಪುರ ಪುರಸಭೆ ಪ್ರಥಮ ಅಧ್ಯಕ್ಷರಾಗಿ ಮುನ್ಸಿಪಲ್ ಹೈಸ್ಕೂಲ್ ಆರಂಭಿಸಿದ್ದರು. ಪೌರವಿಹಾರ ಸಂಸ್ಥೆ ಸ್ಥಾಪಿಸಿದ್ದರು. ಕಾಂಗ್ರೆಸ್ ಶಾಸಕರಾಗಿದ್ದರೂ ಸಮಾಜವಾದಿ ಶಾಸಕನ ರೀತಿ ಕೆಲಸ ಮಾಡಿದ್ದರು. ಭೂ ಸುಧಾರಣೆ ಕಾಯ್ದೆಯನ್ನು ಸ್ವಾಗತಿಸುವ ಮೂಲಕ ಗೇಣಿದಾರರ ಪರ ನಿಂತಿದ್ದರು. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿದ್ದರು’ ಎಂದು ಶ್ಲಾಘಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ‘ರಾಜಕೀಯ ಕ್ಷೇತ್ರದಲ್ಲಿ ಕೆ.ವಿ. ನರಸಪ್ಪ ಸೇರಿ ಹಿರಿಯ ರಾಜಕಾರಣಿಗಳ ಕಾರ್ಯಗಳು ನಮಗೆ ಮಾರ್ಗದರ್ಶನವಾಗಿವೆ. ಕೆ.ವಿ. ನರಸಪ್ಪ ಅವರ ನೀರಾವರಿ ಚಿಂತನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯರೂಪಕ್ಕೆ ತಂದಿದ್ದಾರೆ. ಕೆ.ವಿ. ನರಸಪ್ಪ ಸ್ಮಾರಕ ರಂಗಮಂದಿರವನ್ನು ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ’ ಎಂದು ಹೇಳಿದರು.

ಲೇಖಕ ಬಿಳಿದಾಳೆ ಪಾರ್ವತೀಶ್ ಮಾತನಾಡಿ, ‘ನರಸಪ್ಪ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ವಿಧಾನಪರಿಷತ್ತಿನಲ್ಲಿ ಅವರ ಬಗ್ಗೆ ವಿಚಾರಸಂಕಿರಣ ಹಾಗೂ ಗೌರವ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರಕ್ಕೆ ಸಲಹೆ ನೀಡಬೇಕು’ ಎಂದು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿ ಶಿಕಾರಿಪುರ ಕೃಷ್ಣಮೂರ್ತಿ ‘ನಾಯಕತ್ವ’ ವಿಷಯ ಕುರಿತು ಮಾತನಾಡಿದರು. ಕನಕಪುರದ ಡಾ.ಕಾಂತರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ತಿಮ್ಲಾಪುರ ಬಿ.ಕೆ. ದೇವೇಂದ್ರಪ್ಪ ಹಾಗೂ ಕೆ. ಶಿವಾನಂದಯ್ಯ ಅವರನ್ನು ಸನ್ಮಾನಿಸಲಾಯಿತು.

ಕೆ.ವಿ. ನರಸಪ್ಪ ಅವರ ಪುತ್ರರಾದ ಎನ್. ಅರುಣ್ ಕುಮಾರ್, ಎನ್. ಭಾಸ್ಕರ್, ಎನ್. ರವಿ, ಮೋಹನ್, ಪುತ್ರಿ ದೇವಕಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್‌. ಹುಚ್ಚರಾಯಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು