ಸೋಮವಾರ, ಜುಲೈ 4, 2022
21 °C
ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ

ಮುಂದಿನ ಬಾರಿ ಬಿಜೆಪಿಗೆ ಪೂರ್ಣ ಬಹುಮತ: ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದರೂ ಪೂರ್ಣ ಬಹುಮತವಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದ ಅಗತ್ಯವಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

ಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಇವರೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಪೂರ್ಣ ಬಹುಮತವಿಲ್ಲದ ಸರ್ಕಾರದಲ್ಲಿ ಅಧಿಕಾರ ನಡೆಸಿದ್ದಾರೆ. ಈ ತಾಪತ್ರಯ ಮುಂದಿನ ದಿನಗಳಲ್ಲಿ ಬೇಡ. ಸ್ಪಷ್ಟ ಬಹುಮತ ಪಡೆದು ಪಕ್ಷ ಅಧಿಕಾರ ಪಡೆಯಬೇಕಿದೆ ಎಂದರು.

ಹಲವರು ಪಕ್ಷಕ್ಕೆ ಬರುವ ಅಪೇಕ್ಷೆ ಪಡುತ್ತಿದ್ದಾರೆ. ಅವರು ಏಕೆ ಬರುತ್ತಾರೆ ಎಂದು ಗೊತ್ತೇ ಇದೆ. ತಮ್ಮ ಮುಂದಿನ ಭವಿಷ್ಯ ನಿಗದಿ ಮಾಡಿಕೊಂಡೇ ಪಕ್ಷಕ್ಕೆ ಕಾಲಿಡುತ್ತಾರೆ. ಬಿಜೆಪಿ 108 ಸ್ಥಾನಗಳನ್ನು ಗೆದ್ದರೂ ಸ್ಪಷ್ಟ ಬಹುಮತ ಪಡೆಯಲು ಇದುವರೆಗೆ ಸೋತಿದೆ. ಮುಂದೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದು ಕಿವಿಮಾತು ಹೇಳಿದರು.

ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಇದ್ದಾರೆ. ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲಿ ಯಾರೂ ಕೆಟ್ಟವರಲ್ಲ, ಕೆಲವರು ಮಾತ್ರ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಮೇಕೆದಾಟು, ಜೆಡಿಎಸ್‌ ಜನತಾ ಜಲಧಾರೆ ಹಿಡಿದುಕೊಂಡು ರಾಜ್ಯವನ್ನೇ ಸುತ್ತುತ್ತಿದ್ದಾರೆ. ಇದು ಚುನಾವಣಾ ಗಿಮಿಕ್. ಇವರ ಈ ಸುತ್ತಾಟ ಒಂದೇ ಒಂದು ವೋಟು ತಂದುಕೊಡುವುದಿಲ್ಲ ಎಂದು ಕುಟುಕಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು
ಸಿದ್ಧರಾಗಬೇಕು. ಇನ್ನು ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲು ಕಂಕಣಬದ್ಧರಾಗಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಸುಮಾರು 20 ಕೋಟಿ  ಸದಸ್ಯರಿದ್ದಾರೆ. ಸಂಘಟನೆಯ ಶಕ್ತಿ ವಿಸ್ತಾರವಾಗಿದೆ. ರಾಜ್ಯಸಭೆಯಲ್ಲಿ 100ಕ್ಕೂ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ. 17 ರಾಜ್ಯಗಳಲ್ಲಿ ಪಕ್ಷದ ಆಡಳಿತವಿದೆ. ಹಿಂದಿನ ಹೆಜ್ಜೆ ಗಮನದಲ್ಲಿಟ್ಟು ಮುಂದಿನ ಗುರಿ ತಲುಪಬೇಕು. ಇದೇ ಬಿಜೆಪಿಯ ಮಂತ್ರ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ‘ಜಗತ್ತು ಭಾರತದ ಕಡೆ ನೋಡುತ್ತಿದೆ. ಬಿಜೆಪಿ ಕೇವಲ ರಾಜಕೀಯ ಪಕ್ಷ ಮಾತ್ರವಲ್ಲ. ಅದೊಂದು ಸಂಘಟನೆ. ಮುಂಬರುವ ಚುನಾವಣೆಗೆ ಕಾರ್ಯಕರ್ತರ ಕ್ರಿಯಾಶೀಲತೆ ಹೆಚ್ಚಿಸಲು ಬೂತ್ ಮಟ್ಟದಿಂದ ಶಕ್ತಿ ಬಲಗೊಳಿಸಲಾಗುವುದು’
ಎಂದು ಹೇಳಿದರು.

‘ಸಹಕಾರಿ ರತ್ನ’ ಪ್ರಶಸ್ತಿ ಪಡೆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತೀರ್ಥಹಳ್ಳಿಯ ಎಚ್.ಎಸ್. ಮಂಜಪ್ಪ ಅವರನ್ನು ಅಭಿನಂದಿಸಲಾಯಿತು.

ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಮೇಯರ್‌ ಸುನಿತಾ ಅಣ್ಣಪ್ಪ, ಮುಖಂಡರಾದ ಗಿರೀಶ್ ಪಟೇಲ್, ಮೋನಪ್ಪ ಬಂಡಾರಿ, ಎನ್. ಎಸ್. ಹೆಗಡೆ, ಆರ್.ಕೆ. ಸಿದ್ಧರಾಮಣ್ಣ, ನಟರಾಜ್,  ಮಾಲತೇಶ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು