ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೋಡು ಸತ್ಯಾಗ್ರಹಕ್ಕೆ ಪ್ರೇರಣೆ ಗಣಪತಿಯಪ್ಪ: ಕಾಗೋಡು ತಿಮ್ಮಪ್ಪ

Last Updated 1 ಅಕ್ಟೋಬರ್ 2021, 4:53 IST
ಅಕ್ಷರ ಗಾತ್ರ

ಸಾಗರ: ‘ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಉಳುವವನೇ ಒಡೆಯ ಭೂಮಿ ಕಾಯ್ದೆ ಜಾರಿಗೆ ಬಂದಿದ್ದು, ಈ ಹೋರಾಟಕ್ಕೆ ಮೂಲ ಪ್ರೇರಣೆಯಾದ ಡಾ. ಎಚ್.ಗಣಪತಿಯಪ್ಪ ಅವರನ್ನು ಸದಾ ಸ್ಮರಿಸಬೇಕು’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ತಾಲ್ಲೂಕಿನ ವಡ್ನಾಲ ಗ್ರಾಮದಲ್ಲಿ ಗುರುವಾರ ತಾಲ್ಲೂಕು ರೈತ ಸಂಘದಿಂದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಗೋಡು ಸತ್ಯಾಗ್ರಹದ ರೂವಾರಿ ಡಾ. ಎಚ್. ಗಣಪತಿಯಪ್ಪ ಅವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘1952-53ರಲ್ಲಿ ಗಣಪತಿಯಪ್ಪನವರು ಕೈಗೆತ್ತಿಕೊಂಡ ಭೂಹಕ್ಕು ಕೊಡಿಸುವ ಹೋರಾಟಕ್ಕೆ 1972ರಲ್ಲಿ ಜಯ ದೊರೆತಿತ್ತು.ಗಣಪತಿಯಪ್ಪ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ನಾನು ಅವರ ಹೋರಾಟವನ್ನು ನೋಡಿ ರಾಜಕೀಯ ಕ್ಷೇತ್ರಕ್ಕೆ ಬರಲು ಪ್ರೇರಣೆಗೊಂಡೆ. ಗೇಣಿ ರೈತರನ್ನು ಭೂಮಾಲೀಕರನ್ನಾಗಿ ಮಾಡುವಲ್ಲಿ ಗಣಪತಿಯಪ್ಪ ಅವರ ಪ್ರಯತ್ನ ದಾಖಲಾರ್ಹ. ಗೇಣಿ ರೈತರ ಪರವಾಗಿ ಧ್ವನಿ ಎತ್ತುವವರೇ ಇಲ್ಲದ ಸಂದರ್ಭದಲ್ಲಿ ಗಣಪತಿಯಪ್ಪ ಅವರಿಗೆ ಧ್ವನಿ ನೀಡಿದರು. ಭೂಸುಧಾರಣಾ ಸಮಿತಿ ರಚನೆಯಾಗಿದ್ದಾಗ ಗಣಪತಿಯಪ್ಪ ಅವರನ್ನು ಬೆಂಗಳೂರಿಗೆ ಕರೆಸಿ ಗೇಣಿ ರೈತರ ಪರವಾಗಿ ಹೇಳಿಕೆ ಕೊಡಿಸಿದ್ದು ನನಗೆ ಇಂದಿಗೂ ನೆನಪಿನಲ್ಲಿದೆ. ಆ ದಿನ ಅತ್ಯಂತ ಚರಿತ್ರಾರ್ಹ ದಿನ’ ಎಂದು ನೆನಪಿಸಿಕೊಂಡರು.

ಉಳುವವರಿಗೆ ಭೂಮಿ ಕೊಡಬೇಕು ಎಂದು ಕಾಗೋಡು ಗ್ರಾಮದಲ್ಲಿ ಸತ್ಯಾಗ್ರಹ ನಡೆದಾಗ ಮೊದಲ ದಿನ 50 ಜನರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಅದರ ನೇತೃತ್ವ ವಹಿಸಿದವರು ಗಣಪತಿಯಪ್ಪ. ಸ್ಥಳೀಯವಾಗಿ ಸಾಕಷ್ಟು ಜನರು ಭೂಹಕ್ಕಿಗಾಗಿ ಹೋರಾಟ ನಡೆಸಿ ಜೈಲು ಸೇರಿದಾಗ ಗಣಪತಿಯಪ್ಪ ಅವರ ಸಲಹೆಯನ್ನು ಪಡೆದು ಸತ್ಯಾಗ್ರಹವನ್ನು ಸಮಾಜವಾದಿ ಪಕ್ಷಕ್ಕೆ ವಹಿಸಲಾಯಿತು. ಆಗ ಡಾ. ರಾಮಮನೋಹರ ಲೋಹಿಯಾ, ಗರುಡಶರ್ಮ, ಶಾಂತಾವೇರಿ ಗೋಪಾಲಗೌಡ ಇನ್ನಿತರರು ಚಳವಳಿಯಲ್ಲಿ ಪಾಲ್ಗೊಂಡು ಗೇಣಿ ರೈತರನ್ನು ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಸಹಕಾರ ನೀಡಿದ್ದರು. ಗಣಪತಿಯಪ್ಪ ಅವರು ಗೇಣಿ ರೈತರ ಪರವಾಗಿ ಅಂದು ಹೋರಾಟ ನಡೆಸಿದ್ದರ ಫಲವಾಗಿ ಸಾಕಷ್ಟು ಗೇಣಿ ರೈತರು ಇಂದು ಭೂಮಾಲೀಕರಾಗಿದ್ದಾರೆ. ಆದರೆ ಫಲಾನುಭವಿ ರೈತರಿಗೆ ಹೋರಾಟದ ಮಹತ್ವದ ತಿಳಿಯದೇ ಹೋದದ್ದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ‘ಡಾ. ಎಚ್.ಗಣಪತಿಯಪ್ಪ ಅವರು ನಡೆಸಿದ ಹೋರಾಟ ಇಂದಿನ ಯುವಜನಾಂಗಕ್ಕೆ ಆದರ್ಶಪ್ರಾಯವಾಗಬೇಕು. ಕಾಗೋಡು ಸತ್ಯಾಗ್ರಹದಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಭೂಒಡೆತನ ಹೊಂದಿವೆ. ಮುಂದಿನ ಪೀಳಿಗೆ ಸಹ ಈ ಹೋರಾಟವನ್ನು ನೆನಪಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ಅಂದು ಗಣಪತಿಯಪ್ಪ ಅವರು ಉಳುವವನೇ ಹೊಲದೆಡೆಯ ಘೋಷಣೆ ಮೂಲಕ ಭೂಹೀನರಿಗೆ ಭೂಮಿಹಕ್ಕು ಕೊಡಿಸಿದ್ದಾರೆ. ಇಂದಿಗೂ ಭೂ ಸಂಬಂಧಿ ಹೋರಾಟ ಕೊನೆಯಾಗಿಲ್ಲ. ಮುಳುಗಡೆ ಸಂತ್ರಸ್ತರು ತಮ್ಮ ಭೂಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಬಗರ್‌ಹುಕುಂ ಅಡಿ ಸಾಗುವಳಿ ಮಾಡುತ್ತಿರುವವರು ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದ್ದಾರೆ. ಈ ಬಗ್ಗೆ ಶಾಸಕ ಹಾಲಪ್ಪ ನೇತೃತ್ವದಲ್ಲಿ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ’
ಎಂದು ತಿಳಿಸಿದರು.

ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿದರು. ನಾಡಕಲಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ನಾರಾಯಣಪ್ಪ, ಉಪಾಧ್ಯಕ್ಷ ಗಣಪತಿ, ಸದಸ್ಯ ಮಹಾಬಲ ಕೌತಿ, ಮಂಜಮ್ಮ ಗಣಪತಿಯಪ್ಪ ಇದ್ದರು.

ಅಂಬಿಕಾ ಪ್ರಾರ್ಥಿಸಿದರು. ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿದರು. ಹೊಯ್ಸಳ ಗಣಪತಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರಾಜ್ ವಂದಿಸಿದರು. ಸೂರಜ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT