ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಶಿವಮೊಗ್ಗ ಜಿಲ್ಲೆಯ ಜನರ ದನಿ ಆಗಲಿದ್ದಾರೆ: ಸಚಿವ ಮಧು ಬಂಗಾರಪ್ಪ

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಮತ
Published 20 ಮಾರ್ಚ್ 2024, 16:17 IST
Last Updated 20 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ಶಿವಮೊಗ್ಗ: ಗೀತಕ್ಕ (ಗೀತಾ ಶಿವರಾಜಕುಮಾರ್) ನಿಮ್ಮ ಮನೆ ಮಗಳು. ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಆಶೀರ್ವಾದ ಮಾಡಿ. ಎಸ್‌.ಬಂಗಾರಪ್ಪ ಅವರ ಅನುಪಸ್ಥಿತಿಯನ್ನು ನೀಗಿಸಿ ಗೀತಕ್ಕ ನಿಮ್ಮ ಸೇವೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

ಇಲ್ಲಿನ ಲಗಾನ್‌ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಧನೆ ಏನು? ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನಿಸಿದ್ದಾರೆ. 15 ವರ್ಷಗಳ ಹಿಂದೆ ಸಂಸದರಾಗುವ ಮುನ್ನ ಅವರೇನು ಕಡಿದು ಬಂದಿದ್ದರು. ಅಪ್ಪ ಮಾಡಿದ್ದ ಭ್ರಷ್ಟಾಚಾರದ ಹಣದಲ್ಲಿ ಶಾಸಕ, ಸಂಸದ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯ ಬಗ್ಗೆ ರಾಘವೇಂದ್ರ ಸಂಸತ್‌ ಕಲಾಪದಲ್ಲಿ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದು ಕೇಳಿದ ಮಧು ಬಂಗಾರಪ್ಪ, ಗೀತಕ್ಕನನ್ನು ಗೆಲ್ಲಿಸಿದರೆ ಅವರು ದೆಹಲಿಯಲ್ಲಿ ಸಂತ್ರಸ್ತರ ಪರ ದನಿ ಆಗಲಿದ್ದಾರೆ ಎಂದರು.

ಗೀತಕ್ಕನಿಗೆ ಮಧು ಬಂಗಾರಪ್ಪ ಯಾವುದೇ ಮಧ್ಯವರ್ತಿ ಅಲ್ಲ. ಜಿಲ್ಲೆಯಲ್ಲಿ ಅವರ ಆಗು–ಹೋಗುಗಳನ್ನು ನಾನು ನೋಡಿಕೊಳ್ಳುವುದಿಲ್ಲ. ಬದಲಿಗೆ ಅವರೇ ಜನರೊಂದಿಗೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಬಂಗಾರಪ್ಪನವರ ರೀತಿ ಜನರ ಸೇವೆ ಮಾಡಲಿದ್ದಾರೆ. ಅಪ್ಪ (ಎಸ್‌.ಬಂಗಾರಪ್ಪ) ನಮಗೆ ಜನರ ಸೇವೆ ಮಾಡಲು ಹೇಳಿಕೊಟ್ಟಿದ್ದಾರೆ. 

ಹಿಂದಿನ ಚುನಾವಣೆಯಲ್ಲಿ ಗೀತಾ ಅವರನ್ನು ನಿಲ್ಲಿಸುವುದು ಬೇಡ ಎಂದು ಹೇಳಿದ್ದೆನು. ಸೋತರೂ ಪರವಾಗಿಲ್ಲ. 2009ರಲ್ಲಿ ಅಪ್ಪನ (ಬಂಗಾರಪ್ಪ್) ಸೋಲು ಯಾವತ್ತೂ ಮರೆಯಲು ಆಗೊಲ್ಲ ಸ್ಪರ್ಧಿಸುವೆ ಎಂದು ಅವರೇ ಮುಂದಾಗಿದ್ದರು. ಈ ಬಾರಿಯೂ ಗೀತಾ ಶಿವರಾಜಕುಮಾರ್‌ ಪಕ್ಷದ ಆಯ್ಕೆಯ ಆಭ್ಯರ್ಥಿ ಎಂದರು.

ವಿಐಎಸ್‌ಎಲ್ ಮುಚ್ಚಿದವರು ಬಿಜೆಪಿಯವರು. ಆದರೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ಒಂದು ಮಾತು ಆಡಲಿಲ್ಲ. ಮೋದಿ ಅವರ ಹೆಸರಲ್ಲಿ ಗೆದ್ದಿರುವ ರಾಘವೇಂದ್ರ ಕೂಡ ವಿಐಎಸ್‌ಎಲ್‌ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಗೀತಕ್ಕೆ ಆಯ್ಕೆಯಾದರೆ ವಿಐಎಸ್‌ಎಲ್ ಉಳಿವಿನ ಜೊತೆಗೆ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭದ್ರತೆ ಕಲ್ಪಿಸಲು ಕಾಗೋಡು ತಿಮ್ಮಪ್ಪ ಅವರ ಚಿಂತನೆ ಜಾರಿಗೆ ತರಲಾಗುವುದು ಎಂದರು.

ಗೀತಾ ಶಿವರಾಜಕುಮಾರ್ ಮಾತನಾಡಿ, ಅಪ್ಪ ಉನ್ನತ ಸ್ಥಾನಗಳನ್ನು ಅಲಂಕರಿಸಿದರೂ ಜನಸಾಮಾನ್ಯರೊಂದಿಗೆ ಯಾವುದೇ ಬೇಧ ಇಲ್ಲದೇ ನಮ್ಮನ್ನು ಬೆಳೆಸಿದ್ದಾರೆ. ಮನೆಯ ಮಗಳಾಗಿ , ಅಕ್ಕ–ತಂಗಿಯಾಗಿ ಪರಿಗಣಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ನಿಮ್ಮ ಜೊತೆ ಧ್ವನಿಯಾಗಿ ಇರುತ್ತೇನೆ. ಒಂದು ಅವಕಾಶ ಕೊಡಿ,ಕೊಟ್ಟು ನೋಡಿ. ತಂದೆ–ತಮ್ಮನಿಗೆ, ಪಕ್ಷಕ್ಕೆ ಕೆಟ್ಟ ಹೆಸರು ಬಾರದಂತೆ ನಡೆದುಕೊಳ್ಳುವೆ ಎಂದು ಹೇಳಿದರು.

ಶಿಕಾರಿ‍ಪುರದ ಕಾಂಗ್ರೆಸ್ ಮುಖಂಡ ನಾಗರಾಜ ಗೌಡ ಬಗರ್‌ಹುಕುಂ ಸಾಗುವಳಿದಾರರು, ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ, ಇನಾಂ ಭೂಮಿ  ನಂಬಿಕೊಂಡ ರೈತರಿಗೆ ಯಾರಿಗೂ ಹಕ್ಕುಪತ್ರ ಕೊಡದೇ ಅವರಿಗೆಲ್ಲ ಕಳ್ಳರು ಎಂಬ ಹಣೇ‍ಪಟ್ಟಿ ಕಟ್ಟಿದ ಸಾಧನೆ ಬಿಜೆಪಿಯದ್ದು ಎಂದು ಟೀಕಿಸಿದರು.

ಮಧು ಬಂಗಾರಪ್ಪ ಪಾದಯಾತ್ರೆ ನಡೆಸಿ ಎಲ್ಲ ರೈತರಿಗೆ ಹಕ್ಕುಪತ್ರ ಕೊಡಿಸಲು ಸರ್ಕಾರದ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಪ್ರತಿಯೊಬ್ಬರಿಗೂ ಸೂರು, ನೆಲೆಕೊಟ್ಟ ಪಕ್ಷ, ಪ್ರಣಾಳಿಕೆಯಲ್ಲಿನ ಎಲ್ಲ ಯೋಜನೆಗಳನ್ನು ಜನರಿಗೆ ಕೊಟ್ಟ ಶ್ರೇಯ ಕಾಂಗ್ರೆಸ್ ಪಕ್ಷದ್ದು. ನಾರೀ ಗ್ಯಾರಂಟಿ ಯೋಜನೆ ಕೊಡಲು ತೀರ್ಮಾನ ಕೇಂದ್ರದ ಕಾಂಗ್ರೆಸ್ ಸರ್ಕಾರ ಮಾತು ಉಳಿಸಿಕೊಳ್ಳಲಿದೆ.

ಎಸ್‌.ಬಂಗಾರಪ್ಪ 32 ವರ್ಷಗಳ ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಕೊಟ್ಟಿದ್ದರು. ಅದು ಈಗಲೂ ಮುಂದುವರೆದಿದೆ. ಆ ಋಣಕ್ಕೆ ಗೀತಾ ಅವರನ್ನು ಗೆಲ್ಲಿಸೋಣ. ಸಾಮಾನ್ಯ ಜನರ ಕಷ್ಟ ಕೇಳದ ಬಿಜೆಪಿಯ ಸೋಲಿಸೋಣ ಎಂದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮುಖಂಡರಾದ ಕೆ.ಶ್ರೀಕಾಂತ್, ಪ್ರಸನ್ನಕುಮಾರ್, ಎನ್‌. ರಮೇಶ, ಯೋಗೀಶ್ ಮತ್ತಿತರರು ಹಾಜರಿದ್ದರು.

ಶಿವಮೊಗ್ಗದ ಲಗಾನ್ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು
ಶಿವಮೊಗ್ಗದ ಲಗಾನ್ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು

ಜನರ ಸಂಕಷ್ಟಗಳ ಹೊರುವಷ್ಟು ಶಕ್ತಿವಂತರು.. ’ಸುಳ್ಳು ಭರವಸೆ ಕೊಡದೇ ಜನರ ಸಂಕಷ್ಟಗಳಿಗೆ ಸ್ಪಂದಿಸುವವರೇ ನಿಜವಾದ ರಾಜಕಾರಣಿ. ಕೆಲವರು ಗೀತಾ ಅವರ ಅನುಭವ ಕೇಳುತ್ತಾರೆ. ಅವರು 38 ವರ್ಷ ನನ್ನೊಂದಿಗೆ ಸಂಸಾರ ಮಾಡಿದ್ದಾರೆ. 58 ವರ್ಷಗಳ ಜೀವನಾನುಭವ ಇದೆ. ಆಕೆ ಮಗಳು ಹೆಂಡತಿ ತಾಯಿ ಆಗಿ ಮೈಸೂರಿನ ಶಕ್ತಿಧಾಮದ ಉಸ್ತುವಾರಿ ಆಗಿ ಡಾ.ರಾಜಕುಮಾರ್ ಸೊಸೆ ಆಗಿದ್ದಾರೆ. ಅವರಿಗೆ ಇದಕ್ಕಿಂತ ಏನು ಅನುಭವಬೇಕು‘ ಎಂದು ವಿರೋಧಿಗಳಿಗೆ ನಟ ಶಿವರಾಜಕುಮಾರ್‌ ತಿರುಗೇಟು ನೀಡಿದರು.  ’ಭೂಮಿ ತಾಯಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಆಕೆ ಎಲ್ಲರ ಭಾರ ಹೊರುತ್ತಾಳೆ. ಗೀತಾ ಸಂಸದೆ ಆಗಿ ಸಮಾಜದ ಎಲ್ಲ ಸಂಕಷ್ಟಗಳನ್ನು ಹೊರುವಷ್ಟು ಶಕ್ತಿವಂತಳು. 2014ರಲ್ಲಿ ಚುನಾವಣೆ ಮಾಡಿ ಸೋತಿದ್ದೆವು. ಪರವಾಗಿಲ್ಲ. ಸೋಲು–ಗೆಲುವು ಸಹಜ‘ ಎಂದು ಹೇಳಿದ ಶಿವರಾಜಕುಮಾರ್ ’ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವೂ ಒಂದು‘ ಎಂದು ಮಾರ್ಮಿಕವಾಗಿ ಹಾಡಿದರು.

ಈಶ್ವರಪ್ಪನಿಗೆ ಇದೆಲ್ಲಾ ಬೇಕಿತ್ತಾ? ಬೇಳೂರು ಪ್ರಶ್ನೆ ’ಕೆಜೆಪಿ ಪಕ್ಷ ಕಟ್ಟುವಾಗ ಯಾರ್ಯಾರು ವಿರೋಧಿಗಳು ಇದ್ದರೋ ಅವರ ಮಗ್ಗುಲು ಮುರಿದು ಹದ ಮಾಡಿರುವ ಯಡಿಯೂರಪ್ಪ ಈಗ ಈಶ್ವರಪ್ಪನ ತೆಗೆದು ಹಾಕಿಬಿಟ್ಟರು. ಈಶ್ವರಪ್ಪನಿಗೆ ಇದೆಲ್ಲಾ ಬೇಕಿತ್ತಾ. ಮಾತೆತ್ತಿದರೆ ಹಿಂದುತ್ವ ವೇದಾಂತ ಸಿದ್ಧಾಂತ ಅನ್ನುತ್ತಿದ್ದರು‘ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದರು. ಯಡಿಯೂರ‍ಪ್ಪ 10 ವರ್ಷ ನನ್ನ ರಾಜಕೀಯ ಬದುಕು ಕೂಡ ತೆಗೆದಿದ್ದರು. ಜನರು ಕೊಟ್ಟ ಶಕ್ತಿಯ ನೆರವಿನಿಂದ ಈಗ ಸಡ್ಡು ಹೊಡೆಯುತ್ತೇನೆ ಎಂದರು. ಯಡಿಯೂರಪ್ಪ ಕುಟುಂಬದವರು ದುಡ್ಡು ರಾಶಿ ಮಾಡಿ ಹಾಕಿಕೊಂಡಿದ್ದಾರೆ. ಅದನ್ನು ಚುನಾವಣೆಯಲ್ಲಿ ಖರ್ಚು ಮಾಡಲು ತಯಾರಿ ನಡೆಸಿದ್ದಾರೆ. ಹೀಗಾಗಿ ವೈಯಕ್ತಿಕ ಗಲಾಟೆಯನ್ನು ಪಕ್ಷ ಹಾಗೂ ಅಭ್ಯರ್ಥಿಯ ಮೇಲೆ ತರಬೇಡಿ. ಗೀತಕ್ಕನ ಬಹುಮತದಿಂದ ಗೆಲ್ಲಿಸಲು ಶ್ರಮ ಹಾಕಿ ಎಂದು ಮುಖಂಡರಿಗೆ ಬೇಳೂರು ಮನವಿ ಮಾಡಿದರು.

ಮನೆ ಮಗಳಿಗೆ ಕಾಂಗ್ರೆಸ್ ಭರ್ಜರಿ ಸ್ವಾಗತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಚುನಾವಣೆ ಸಿದ್ಧತೆಗಾಗಿ ಬುಧವಾರ ಜಿಲ್ಲೆಗೆ ಬಂದರು.  ಮಧ್ಯಾ‌ಹ್ನ ಇಲ್ಲಿನ ಎಂಆರ್‌ಎಸ್ ವೃತ್ತಕ್ಕೆ ಬಂದ ಗೀತಾ ಹಾಗೂ ಅವರ ಪತಿ ನಟ ಶಿವರಾಜಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ  ಮಧು ಬಂಗಾರಪ್ಪ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಕಾರ್ಯಕರ್ತರು ಜೈಕಾರದ ನಡುವೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತಂದರು. ಬೆಕ್ಕಿನಕಲ್ಮಠದ ಬಳಿ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ ನೇತೃತ್ವದಲ್ಲಿ ಕ್ರೇನ್ ಮೂಲಕ ದೊಡ್ಡ ಮೋಸಂಬಿ ಹಾರ ಹಾಕಿ ಬಲೂನು ಹಾರಿಸಿ ಪಟಾಕಿ ಹಾರಿಸಿ ಸಿಹಿ ಹಂಚಿ ಗೀತಾ ಅವರಿಗೆ ಸ್ವಾಗತ ಕೋರಲಾಯಿತು. ಕಾರ್ಯಕರ್ತರು ಬೈಕ್ ನಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್‌ಕುಮಾರ್ ಬಂದಿದ್ದು  ಪಕ್ಷದ ಪರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ ಸ್ವಾಗತಿಸಿದರು. ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಬಿರು ಬಿಸಿಲಿನಿಂದ ಬಸವಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT