ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಚಿಕ್ಕಬಿಲಗುಂಜಿ ಶಾಲೆಗೆ ಸುವರ್ಣ ಮಹೋತ್ಸವ ಸಂಭ್ರಮ

ಸ್ಥಳೀಯರ ಸಹಕಾರದಿಂದ ಶಾಲೆ ಅಭಿವೃದ್ಧಿ; ಇಂದು ಕಾರ್ಯಕ್ರಮ
Last Updated 23 ಏಪ್ರಿಲ್ 2022, 5:07 IST
ಅಕ್ಷರ ಗಾತ್ರ

ತ್ಯಾಗರ್ತಿ: ಸಮೀಪದ ಚಿಕ್ಕಬಿಲಗುಂಜಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸುವರ್ಣ ಮಹೋತ್ಸವದ ಸಂಭ್ರಮ.

ಶಿಕ್ಷಕರು, ಗ್ರಾಮಸ್ಥರು ಸಹಕಾರ ನೀಡಿದರೆ ಶಾಲೆ ಅಭಿವೃದ್ಧಿಯಾಗಬಲ್ಲದು ಎಂಬುದಕ್ಕೆ ಈ ಶಾಲೆ ಸಾಕ್ಷಿ.

1972ರಲ್ಲಿ ತಳಗೇರಿ ಗ್ರಾಮಕ್ಕೆ ಮಂಜೂರಾದ ಸರ್ಕಾರಿ ಶಾಲೆಯನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಹಿರಿಯರಾದ ನಾಗೇಶ್ ರಾವ್ ಅವರ ಶ್ರಮ ಹಾಗೂ ಆಸಕ್ತಿಯಿಂದ ಚಿಕ್ಕಬಿಲಗುಂಜಿ ಗ್ರಾಮದಲ್ಲಿ ಶಾಲೆ ಆರಂಭಿಸಲಾಯಿತು.

ಮೊದಲು ಸೋಗೆ ಗುಡಿಸಲು, ಬಿದಿರು ತಟ್ಟಿಯ ಗೋಡೆಯಿಂದ ಆರಂಭಗೊಂಡ ಶಾಲೆಗೆ ಕಾನ್ ಮನೆತನದ ಮಾಣಿಗೌಡರು ಮತ್ತು ಕಕ್ಕರಸೆ ಮನೆತನದವರು ತಮ್ಮ 21 ಗುಂಟೆ ಜಮೀನನ್ನು ದಾನ ಮಾಡಿದರು.

1975ರಲ್ಲಿ ಸರ್ಕಾರದಿಂದ ಕೊಠಡಿ ಮಂಜೂರಾಯಿತು. ಈ ಶಾಲೆಯಲ್ಲಿ ಕರ್ತವ್ಯ ನಿರ್ವಸಿದ ಎಲ್ಲಾ ಶಿಕ್ಷಕರ ಶ್ರಮದಿಂದ ಶಾಲೆ ಶೈಕ್ಷಣಿಕ ಪ್ರಗತಿಯಲ್ಲಿ ಮೇಲುಗೈ ಸಾಧಿಸಿತು.

2004-05ನೇ ಸಾಲಿನಲ್ಲಿ ಕೆಎಸ್‍ಕ್ಯೂಎಒ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆದು ಕ್ಲಸ್ಟರ್ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. 2009-10ನೇ ಸಾಲಿನಲ್ಲಿ ಪರಿಸರ ಸ್ನೇಹಿ ಶಾಲಾ ಕಾರ್ಯಕ್ರಮದಡಿಯಲ್ಲಿ ಸತತವಾಗಿ ‘ಕಿತ್ತಳೆ ಶಾಲೆ’, ‘ಹಸಿರು ಶಾಲೆ’ ಪ್ರಶಸ್ತಿ, 2011-12ನೇ ಸಾಲಿನಲ್ಲಿ ಗುಣಾತ್ಮಕ ಸಾಧನೆಯಲ್ಲಿ ಉತ್ತಮ ಎಸ್‍ಡಿಎಂಸಿ ಪ್ರಶಸ್ತಿ, 2011-12ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ‘ಪರಿಸರ ಮಿತ್ರ ಶಾಲೆ’ ಹಾಗೂ 2013-14ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಪರಿಸರ ಮಿತ್ರ ಪ್ರಶಸ್ತಿ ಪಡೆದು ಸಾಧನೆ ಮಾಡಿದೆ.

ಕಲಿಕೋಪಕರಣ ಮೇಳದಲ್ಲಿಯೂ ಸತತ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಕರಿಬಸವ ನಾಯಕ್ ಮತ್ತು ಲಲಿತಮ್ಮ ಸಿ. ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ, ಗುಣಾತ್ಮಕ ಶಿಕ್ಷಣದಲ್ಲಿ ಉತ್ತಮ ನಿರ್ವಹಣೆ ತೋರಿರುವ ಈ ಶಾಲೆ ಸಾಧನೆಗೆ ಎನ್‍ಸಿಆರ್‌ಟಿಇ ದೆಹಲಿ, ಡಿಎಸ್‍ಆರ್‌ಟಿಇ ಬೆಂಗಳೂರಿನ ಅಧಿಕಾರಿಗಳ ತಂಡ ಬಂದು ಶಾಲಾ ಪ್ರಶಂಸೆ ವ್ಯಕ್ತಪಡಿಸಿದೆ ಎನ್ನುತ್ತಾರೆ ಮುಖ್ಯಶಿಕ್ಷಕಿ ಲಲಿತಮ್ಮ ಸಿ.

*
ಶಾಲೆಯೆಂದರೆ ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಯಂತೆಯೇ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇವರ ಸಹಕಾರದಿಂದ ಈ ಶಾಲೆಯು ಹಲವು ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
-ಲಲಿತಮ್ಮ ಸಿ., ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT