ಗುರುವಾರ , ಜನವರಿ 21, 2021
23 °C

ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದು ಸುಲಭವಲ್ಲ: ಶಾಸಕ ಎಚ್.ಹಾಲಪ್ಪ ಹರತಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ಪಕ್ಷದ ನೆಲೆ ಇಲ್ಲದೆ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆ ಗೆಲ್ಲಲು ಸಾಕಷ್ಟು ಕಷ್ಟಪಡಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಶುಕ್ರವಾರ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾನು ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದನ್ನು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಬೆಂಬಲ ನೀಡಿದವರ ಪರವಾಗಿ ಹಾಗೂ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.

ಕೆಲವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ರೀತಿ ಕಪ್ಪು ಕನ್ನಡಕ ಧರಿಸಿ ಜನರತ್ತ ಕೈಬೀಸುತ್ತ ತೆರಳುವುದನ್ನೇ ರಾಜಕೀಯ ಎಂದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರು ಹೇಳದೆ ಟೀಕಿಸಿದ ಹಾಲಪ್ಪ, ‘ಈಗಾಗಲೇ ಸಾಗರದ ಕಾಂಗ್ರೆಸ್‌ನಲ್ಲಿ ಹಲವು ಬಣಗಳಿವೆ. ಹೀಗಾಗಿ ನನ್ನನ್ನು ಟೀಕಿಸುವವರು ಹೇಗೆ ವಿಧಾನಸಭೆಗೆ ಪ್ರವೇಶಿಸುತ್ತಾರೆ ಎಂದು ನಾನು ನೋಡುತ್ತೇನೆ’ ಎಂದರು.

ನೂತನ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪಂಚಾಯಿತಿಗೆ ಈಗ ನೀಡುವ ಅನುದಾನದ ಪ್ರಮಾಣ ಹೆಚ್ಚಿದೆ. ಹಣ ಪಾವತಿ ಚೆಕ್‌ಗೆ ಸಹಿ ಮಾಡುವ ಅಧಿಕಾರ ಸಂಸದರು ಅಥವಾ ಶಾಸಕರಿಗೆ ಇಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದೆ. ಇದನ್ನು ನೂತನ ಸದಸ್ಯರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ‘ತಾಲ್ಲೂಕಿನ 15ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಬಿಜೆಪಿ ಈಗಾಗಲೇ ಬಹುಮತ ಗಳಿಸಿದ್ದು, ಅಧ್ಯಕ್ಷರ ಚುನಾವಣೆ ವೇಳೆಗೆ ಇದರ ಸಂಖ್ಯೆ 25 ದಾಟಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖರಾದ ಯು.ಎಚ್. ರಾಮಪ್ಪ, ಚೇತನ್ ರಾಜ್ ಕಣ್ಣೂರು, ಮಧುರಾ ಶಿವಾನಂದ್, ವಿ. ಮಹೇಶ್, ಸುರೇಶ್ ಸ್ವಾಮಿರಾವ್, ಸುವರ್ಣ Sಟೀಕಪ್ಪ, ಕಲಸೆ ಚಂದ್ರಪ್ಪ, ಕುಪೇಂದ್ರ, ವೀರೇಶ್ ಆಲವಳ್ಳಿ, ಗೌತಮ್, ಕೆ.ಆರ್. ಗಣೇಶ್ ಪ್ರಸಾದ್, ಸವಿತಾ ನಟರಾಜ್, ವಾಸಂತಿ ರಮೇಶ್ ಇದ್ದರು.

ಲೋಕನಾಥ ಬಿಳಿಸಿರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಸ್ವಾಗತಿಸಿದರು. ಹು.ಭಾ. ಅಶೋಕ್ ನಿರೂ
ಪಿಸಿದರು. ದೇವೇಂದ್ರಪ್ಪ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು