ಹೊಸನಗರ: ತುರ್ತು ನೀರು ಸರಬರಾಜು ಯೋಜನೆಗೆ ಹಣ ನೀಡಲು ವಿಳಂಬ ಸೇರಿದಂತೆ ಗ್ರಾಮ ಪಂಚಾಯಿತಿ ಬಗ್ಗೆ ನಿರ್ಲಕ್ಷ ಧೋರಣೆ ಖಂಡಿಸಿ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರಶೆಟ್ಟಿ ಅವರು ಪಾದಯಾತ್ರೆ ನಡೆಸಿ ಪ್ರತಿಭಟನೆ ದಾಖಲಿಸಿದರು. ತಾಲ್ಲೂಕು ಪಂಚಾಯಿತಿವರೆಗೆ 17 ಕಿ.ಮೀ. ಪಾದಯಾತ್ರೆ ನಡೆಸಿದರು.
ಕುಡಿಯುವ ನೀರಿಗೆ ತೊಂದರೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಿದ ಹಣ ಜಿಲ್ಲಾ ಟಾಸ್ಟ್‌ಫೋರ್ಸ್‌ನಿಂದ ಮಂಜೂರಾಗಿ ತಾಲ್ಲೂಕಿಗೆ ಬಂದರೂ ಇನ್ನೂ ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆ ಬಾವಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮೂಡುಗೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ನೀರುಗಂಟಿ, ಅಟೆಂಡರ್ ಹುದ್ದೆ ಖಾಲಿ ಇದ್ದರು ನೇಮಕ ಮಾಡುತ್ತಿಲ್ಲ ಎಂದೂ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ತೆರಳಿ, ತಾಲ್ಲೂಕು ಪಂಚಾಯಿತಿ ಇಒ ನರೇಂದ್ರ ಅವರನ್ನು ಭೇಟಿ ಮಾಡಿ, ತುರ್ತು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಮೂಡುಗೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಂಗೀತಾ, ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರ ನಾಯ್ಕ, ಸದಸ್ಯ ರಮೇಶ ಹಲಸಿನಹಳ್ಳಿ ಇತರರು ಪಾಲ್ಗೊಂಡಿದ್ದರು.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಧೋರಣೆ ಖಂಡಿಸಿ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಪಾದಯಾತ್ರೆ ನಡೆಸಿದರು