ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಊರು ಕಟ್ಟಿದ ಮಹನೀಯರ ಸಾಧನೆ ಅಪಾರ- ಆರಗ ಜ್ಞಾನೇಂದ್ರ

ತನಿಕಲ್‌ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ
Last Updated 1 ಮೇ 2022, 6:17 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪೇಟೆ ಹುಡುಕಿಕೊಂಡು ಹೋಗದ ಮಹನೀಯರು ತಾವಿದ್ದಲ್ಲಿ ಸಮೃದ್ಧ ಊರು ಕಟ್ಟಿದ್ದಾರೆ. ಜ್ಞಾನದ ದೀವಿಗೆಯನ್ನು ನೀಡಿದ ಬಹುತೇಕ ಹಿರಿಯರಿಗೆ ಶಿಕ್ಷಣ ಇರಲಿಲ್ಲ. ಹಳ್ಳಿಯ ಭವಿಷ್ಯಕ್ಕೆ ಶಾಲೆ, ಆಸ್ಪತ್ರೆ ನೀಡಿರುವುದು ಬಹುದೊಡ್ಡ ಸಾಧನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲ್ಲೂಕಿನ ಬಾಂಡ್ಯ–ಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮ ಗಾಂಧಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾನ್‌ ಚೇತನಗಳ ಕಲ್ಪನೆ ಇಂದು ನೆನಪು ಮಾಡಿಕೊಳ್ಳುವ ಜೊತೆಗೆ ಅವರಂತೆ ಊರು ಕಟ್ಟುವ ಕೆಲಸ ಆಗಬೇಕು ಎಂದು ಸಲಹೆನೀಡಿದರು.

‘ಗೃಹ ಇಲಾಖೆ ನೇಮಕಾತಿಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.ಪ್ರಾಮಾಣಿಕವಾಗಿ ಇಲಾಖೆ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದೇನೆ’ ಎಂದು ಆರಗ ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ‘ಮಹತ್ವದ ಹುದ್ದೆ ನಿರ್ವಹಣೆ ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಚೋದನೆ ನೀಡುವುದು ತಪ್ಪು. ದೇಶವನ್ನು ಹಾಳು ಮಾಡುತ್ತಿರುವವರು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಇರುವ ವಿದ್ಯಾವಂತರು ಇವರಿಂದಲೇ ದೇಶ ಹಾಳಾಗುತ್ತಿದೆ. ಹೂ ಕಟ್ಟುವವರು, ಔಷಧ ಸಿಂಪಡಿಸುವವರಿಂದ ದೇಶ ಹಾಳಾಗಿಲ್ಲ’ ಎಂದುಹೇಳಿದರು.

ಜಿಲ್ಲಾ ಪಂಚಾಯಿತಿಮಾಜಿ ಅಧ್ಯಕ್ಷ ಅಶೋಕ್‌ ಮೂರ್ತಿ ಎಸ್.ಎನ್., ‘ಸರ್ಕಾರಿ ಶಾಲೆ ಉತ್ತಮ ಶಿಕ್ಷಣ ನೀಡುತ್ತಿದೆ. ತನಿಕಲ್‌ ಪ್ರೌಢಶಾಲೆ 4 ವರ್ಷಗಳಿಂದ ಶೇ 100ರ ಫಲಿತಾಂಶ ನೀಡಿದೆ. ಸರ್ಕಾರಿ ಶಾಲೆ ಉಳಿಸಿಕೊಳ್ಳುವುದು ಇವತ್ತಿನ ತುರ್ತು’ ಎಂದರು.

2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿ ಶ್ರೀಶ ಬಿ.ಎಸ್‌, ವಿಶ್ರಾಂತ ವಾಯುಪಡೆ ಅಧಿಕಾರಿ ಧರ್ಮೇಶ್‌ ಜೆ.ಎಚ್‌., ಭೂಸೇನೆ ವಿಶ್ರಾಂತ ಸೈನಿಕ ಕೃಷ್ಣಮೂರ್ತಿ ಜಿ.ಕೆ., ಬಿಎಸ್‌ಎಫ್‌ ಅಧಿಕಾರಿ ದಿನೇಶ್‌ ಜಿ.ಜಿ. ಅವರನ್ನು ಸನ್ಮಾನಿಸಲಾಯಿತು.

ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ತನಿಕಲ್‌ ರಾಜಣ್ಣ ಜೆ.ಎನ್.‌ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ್‌ ಜಿ.ಎಸ್.‌, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ, ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರಶೇಖರ್‌, ಎಂಎಡಿಬಿ ಕಾರ್ಯದರ್ಶಿ ಮಣಿ ಕೆ.ಎಸ್.‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಸಿ.ಆರ್.‌, ಬಿಒ ಆನಂದ ಕುಮಾರ್‌, ಎಸ್ ಡಿಎಂಸಿ ಅಧ್ಯಕ್ಷ ಮಹೇಶ್‌ ಕೆ.ಲಿಂಗನಕೊಪ್ಪ, ಮುಖ್ಯಶಿಕ್ಷಕ ನಾಗರಾಜ ಮಾತನಾಡಿದರು.

ಬಳಿಕ ಸಮಾರೋಪ ಸಮಾರಂಭ ನಡೆಯಿತು.

ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ: ಕಿಮ್ಮನೆ

‘ಅಕ್ಷರ ಜ್ಞಾನ ಹೆಚ್ಚಿದಂತೆ ಜಾತಿ, ಧರ್ಮದ ತಾರತಮ್ಯಹೆಚ್ಚುತ್ತಿದೆ. ಪ್ರಕೃತಿಯೊಂದಿಗಿನ ಸಮ ಬಾಳ್ವೆ ಮರೆಯಾಗುತ್ತಿದೆ. ಭಾರತದ ಭರವಸೆಯಾಗಿ ಉಳಿದಿರುವುದು ಪುಟಾಣಿ ಮಕ್ಕಳು. ಆದರೆ, ಪ್ರಸ್ತುತ ರಾಜ್ಯದ ಪಠ್ಯಕ್ರಮ, ಸಿಬಿಎಸ್‌ಸಿ, ಐಸಿಎಸ್‌ಸಿ, ಐಬಿ ಶಿಕ್ಷಣ ವ್ಯವಸ್ಥೆಗಳಿಂದ ಬಡ ಕುಟುಂಬದ ವಿದ್ಯಾರ್ಥಿ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಬೀಳುವಂತಾಗಿದೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಶಿಕ್ಷಣ ಪಡೆದ ಮಕ್ಕಳ ಮುಂದೆ ನಮ್ಮ ಹಳ್ಳಿ ವಿದ್ಯಾರ್ಥಿ ನೀಟ್‌, ಎನ್‌ಇಟಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶೈಕ್ಷಣಿಕ ಅಂತರ ಕಡಿಮೆ ಮಾಡಲು ದೇಶದಲ್ಲಿ ಪಿಯುಸಿವರೆಗೆ ಉಚಿತ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು’ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT