ಮಂಗಳವಾರ, ಜುಲೈ 5, 2022
27 °C
ಜೀವಾಮೃತ ಬಳಸಿ ರೈತ ಪರಶುರಾಮ್ ಬೇಸಾಯ

ಶಿಕಾರಿಪುರ: ಸೀಬೆಕಾಯಿ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ

ಎಚ್‌.ಎಸ್‌. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕೃಷಿ ಭೂಮಿಯಲ್ಲಿ ಸೀಬೆಕಾಯಿ (ಪೇರಲೆ) ಬೆಳೆದು ತಾಲ್ಲೂಕಿನ ಬೆಂಡೆಕಟ್ಟೆ ಗ್ರಾಮದ ರೈತ ಜಿ.ಸಿ. ಪರಶುರಾಮ್ ರೈತರಿಗೆ ಮಾದರಿಯಾಗಿದ್ದಾರೆ.

ಹೆಚ್ಚು ವಿದ್ಯಾಭ್ಯಾಸ ಮಾಡದ ರೈತ ಪರಶುರಾಮ್ ಅವರು ಹಲವು ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹೆಚ್ಚು ಬಳಸದೇ, ಜೀವಾಮೃತ, ಸಾವಯವ ಗೊಬ್ಬರ ಹಾಕುವ ಮೂಲಕ ತಮ್ಮ
4 ಎಕರೆ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದಿದ್ದಾರೆ. ಜೀವಾಮೃತ ಗೊಬ್ಬರವನ್ನು ತಾವೇ ತಯಾರಿಸಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದಾರೆ. ಇವರ ಕೃಷಿ ಚಟುವಟಿಕೆಗೆ ಪತ್ನಿ ರೂಪಾ ಸಾಥ್ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಹಣ್ಣಿನ ಬೆಳೆ ಬೆಳೆಯುವ ರೈತರ ಸಂಖ್ಯೆ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ರೈತ ಪರಶುರಾಮ್ ಅವರು ತಮ್ಮ ಕೃಷಿ ಭೂಮಿಯಲ್ಲಿ ಅಡಿಕೆ ಜತೆ ಸೀಬೆಕಾಯಿ (ಪೇರಲೆ) ಬೆಳೆದಿದ್ದಾರೆ. ಇದರ ಜೊತೆ ಕಾಳು ಬೀನ್ಸ್, ಟೊಮೆಟೊ, ಚಂಡಿನ ಹೂವು, ಕಾಕಡ ಹೂವು, ಉದ್ದಿನಬೆಳೆ, ಹೆಸರುಕಾಳು ಸೇರಿದಂತೆ ವಿವಿಧ ಮಿಶ್ರ ಬೆಳೆಗಳನ್ನು ಬೆಳೆದಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ದೃಶ್ಯ ಮಾಧ್ಯಮದಲ್ಲಿ ಕೃಷಿ ಚಟುವಟಿಕೆ ಬಗ್ಗೆ ಕಾರ್ಯಕ್ರಮ ವೀಕ್ಷಿಸುವಾಗ ಬೆಳಗಾವಿ ಜಿಲ್ಲೆಯ ರೈತ ಗೋಪಾಲ ಪೂಜಾರಿ ತಮ್ಮ ಕೃಷಿ ಭೂಮಿಯಲ್ಲಿ ಸೀಬೆಕಾಯಿ ಬೆಳೆದ ದೃಶ್ಯವನ್ನು ವೀಕ್ಷಿಸಿದ ರೈತ ಪರಶುರಾಮ್, ಆ ರೈತರನ್ನು ಭೇಟಿ ಮಾಡಿ 3,600 ಸೀಬೆಕಾಯಿ ಗಿಡಗಳ ಸಸಿಗಳನ್ನು ತಂದು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿದ್ದರು.

2 ಎಕರೆ ಅಡಿಕೆ ತೋಟದ ಜೊತೆ ಹಾಗೂ ಪ್ರತ್ಯೇಕವಾಗಿ 2 ಎಕರೆ ಕೃಷಿ ಭೂಮಿಯಲ್ಲಿ ಒಟ್ಟು 4 ಎಕರೆ ಕೃಷಿ ಭೂಮಿಯಲ್ಲಿ ಸೀಬೆಕಾಯಿ ಗಿಡಗಳನ್ನು ಬೆಳೆದಿದ್ದಾರೆ. ಸಸಿ ಹಚ್ಚಿ 9 ತಿಂಗಳ ನಂತರ ಸೀಬೆಕಾಯಿ ಬೆಳೆ ಆರಂಭವಾಗಿದ್ದು, ಮೂರು ತಿಂಗಳಿಗೊಮ್ಮೆ ಬೆಳೆ ಕಟಾವು ಮಾಡುತ್ತಿದ್ದಾರೆ. ಸೀಬೆಕಾಯಿಯನ್ನು ಶಿವಮೊಗ್ಗ, ಶಿರಸಿ, ಸಾಗರ, ಶಿಕಾರಿಪುರ ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಪ್ರಸ್ತುತ ಅಡಿಕೆ ಬೆಳೆ ಫಸಲು ಬರುತ್ತಿರು
ವುದರಿಂದ ಅಡಿಕೆ ಜತೆ ಇರುವ ಸೀಬೆಕಾಯಿ ಗಿಡಗಳನ್ನು ಕಟಾವು ಮಾಡಿದ್ದು, 1,800 ಗಿಡಗಳನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಒಂದೇ ಬೆಳೆಯನ್ನು ಅವಲಂಬಿಸದೇ, ಮಿಶ್ರ ಬೆಳೆಯನ್ನು ಬೆಳೆದರೆ ರೈತರಿಗೆ ನಷ್ಟವಾಗುವುದಿಲ್ಲ. ಲಾಭವಾಗುತ್ತದೆ. ರೈತರು ಮಣ್ಣು ಪರೀಕ್ಷೆ ಮಾಡಿಸುವ ಮೂಲಕ ಮಣ್ಣಿಗೆ ತಕ್ಕಂತೆ ಬೆಳೆಯನ್ನು ಬೆಳೆಯಬೇಕು ಎಂಬುದು ರೈತ ಪರಶುರಾಮ್ ಅವರ ಸಲಹೆಯಾಗಿದೆ.
(ಮೊ:99452 90115 ಸಂಪರ್ಕಿಸಬಹುದು).

ಹಣ್ಣಿನ ಬೆಳೆಗೆ ಪೂರಕ ವಾತಾವರಣ

ಶಿಕಾರಿಪುರ ತಾಲ್ಲೂಕಿನಲ್ಲಿ ಸೀಬೆಕಾಯಿ ಸೇರಿ ವಿವಿಧ ಬಗೆಯ ಹಣ್ಣಿನ ಬೆಳೆಗಳನ್ನು ಬೆಳೆಯಲು ಪೂರಕವಾದ ವಾತಾವರಣ ಇದೆ. ಆದರೆ ಅಡಿಕೆ ಜೊತೆ ಬೆಳೆಯದೇ ಪ್ರತ್ಯೇಕವಾಗಿ ಬೆಳೆದರೆ ಇಳುವರಿ ಹೆಚ್ಚು ಬರುತ್ತದೆ. ರೈತರು ಹಣ್ಣಿನ ಬೆಳೆ ಬೆಳೆಯಲು ಮುಂದೆ ಬಂದರೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಸಹಾಯಧನ ಹಾಗೂ ತಾಂತ್ರಿಕ ಸಲಹೆಯನ್ನು ನೀಡಲಾಗುತ್ತದೆ.

– ಡಿ.ಎಸ್. ಪ್ರಭುಶಂಕರ್ , ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿಕಾರಿಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು