ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಶತಮಾನ ಕಂಡ ತುಂಗಭದ್ರಾ ಸೇತುವೆಗೆ ಗಂಡಾಂತರ

ಪಿಡಬ್ಲ್ಯೂಡಿ ಅಧಿಕಾರಿಗಳ ನಿರ್ಲಕ್ಷ್ಯ
Published 19 ಜುಲೈ 2023, 11:31 IST
Last Updated 19 ಜುಲೈ 2023, 11:31 IST
ಅಕ್ಷರ ಗಾತ್ರ

ಇನಾಯತ್ ಉಲ್ಲಾ ಟಿ.

ಹರಿಹರ: ಇಲ್ಲಿಗೆ ಸಮೀಪದ ಕೊಡಿಯಾಲ ಹೊಸಪೇಟೆ ನದಿ ದಡದಲ್ಲಿ ಚರಂಡಿಯಿಂದ ಹರಿಯುವ ತ್ಯಾಜ್ಯ ನೀರು ಶತಮಾನದ ಸೇತುವೆಯ ಭದ್ರತೆಗೆ ಅಪಾಯ ಉಂಟು ಮಾಡಿದೆ. ಅಪೂರ್ಣ ಕಾಮಗಾರಿಯಿಂದಾಗಿ ಈ ಸ್ಥಿತಿ ಎದುರಾಗಿದೆ. 

ಹರಿಹರ ನಗರ ಹಾಗೂ ಕೊಡಿಯಾಲ ಹೊಸಪೇಟೆ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಶತಮಾನದ ಸೇತುವೆ ಇದು. ಈ ಸೇತುವೆಯು ಆಗಿನ ಮೈಸೂರು ಸಂಸ್ಥಾನ ಮತ್ತು ಬಾಂಬೆ ರಾಜ್ಯದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.

ಈ ಸೇತುವೆ ಪಕ್ಕದಲ್ಲಿ ರಾಣೆಬೆನ್ನೂರು ಪಿಡಬ್ಲ್ಯೂಡಿ ಇಲಾಖೆಯಿಂದ ದೊಡ್ಡ ಗಾತ್ರದ ಚರಂಡಿಯನ್ನು ನಿರ್ಮಿಸಲಾಗಿದೆ. ಅಂದಾಜು ಒಂದೂವರೆ ಕಿ.ಮೀ. ಉದ್ದನೆಯ ಈ ಚರಂಡಿಯು ಕೊಡಿಯಾಲ ಹೊಸಪೇಟೆ ಗ್ರಾಮ ಹಾಗೂ ಸುತ್ತಲಿನ ವಸತಿ ಪ್ರದೇಶಗಳ ತ್ಯಾಜ್ಯ ನೀರು ಹಾಗೂ ಮಳೆ ನೀರನ್ನು ಹೊತ್ತು ತರುತ್ತದೆ.

ಅಪೂರ್ಣ ಕಾಮಗಾರಿ: ಚರಂಡಿ ನಿರ್ಮಿಸಿರುವುದು ಸರಿ, ಆದರೆ ಕಾಂಕ್ರೀಟ್ ಚರಂಡಿಯನ್ನು ನದಿ ಪಾತ್ರದವರೆಗೆ ನಿರ್ಮಿಸದೆ ಸೇತುವೆ ರಕ್ಷಣಾ ಗೋಡೆ ಬಳಿ ಕೊನೆಗೊಳಿಸಿದ್ದಾರೆ. ಇದು ಮಳೆಗಾಲವಾದ್ದರಿಂದ ಮಳೆ ನೀರು ಧಾರಾಕಾರವಾಗಿ ಚರಂಡಿಯಲ್ಲಿ ಹರಿದು ಬಂದು ಸೇತುವೆ ಪಕ್ಕದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿದೆ.

ನೆಲದಲ್ಲಿ ಕಂದಕ ಸ್ರಷ್ಟಿಸುವ ಜೊತೆಗೆ ಸೇತುವೆಯ ರಕ್ಷಣೆಗಿರುವ ಗೋಡೆಯನ್ನು (ಪಿಚ್ಚಿಂಗ್) ದೊಡ್ಡ ಪ್ರಮಾಣದಲ್ಲಿ ಕೊರೆದಿದೆ. ಅಲ್ಲಿನ ಸೈಜು ಕಲ್ಲುಗಳು, ಮಣ್ಣು ನೀರಿನೊಂದಿಗೆ ಹರಿದು ಹೋಗಿವೆ. ಇದು ಹೀಗೇ ಮುಂದುವರೆದರೆ ಈ ಮಳೆಗಾಲದ ಅವಧಿಯಲ್ಲೇ ಸೇತುವೆಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ಒದಗಿಸುವ ಅಪಾಯವಿದೆ.

ಕೊಡಿಯಾಲ ಹೊಸಪೇಟೆಯ ಬಿರ್ಲಾ ಸರ್ಕಲ್‌ನಿಂದ ಈ ಸೇತುವೆವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣದ ₹10 ಕೋಟಿ ಮೊತ್ತದ ಗುತ್ತಿಗೆಯನ್ನು ದಾವಣಗೆರೆಯ ಎಸ್.ಆರ್.ಕನ್‌ಸ್ಟ್ರಕ್ಷನ್ ಸಂಸ್ಥೆ ಪಡೆದುಕೊಂಡಿದೆ.

ಆರಂಭದಿಂದಲೂ ಕುಂಟುತ್ತಾ ಸಾಗಿರುವ ರಸ್ತೆಯ ಕಾಮಗಾರಿಯಿಂದ ವಾಹನ ಸವಾರರು ತೊಂದರೆಗೀಡಾಗಿದ್ದರು. ಈಗ ಚರಂಡಿಯ ಅಪೂರ್ಣ ಕಾಮಗಾರಿಯಿಂದ ಸೇತುವೆ ಭದ್ರತೆಗೆ ಅಪಾಯ ಉಂಟು ಮಾಡಿದೆ.

ಶತಮಾನ ಕಂಡ ಹರಿಹರ-ಕೊಡಿಯಾಲ ಹೊಸಪೇಟೆ ನಡುವಿನ ಹಳೆ ತುಂಗಭದ್ರಾ ಸೇತುವೆಯ ವಿಹಂಗಮ ನೋಟ 
ಶತಮಾನ ಕಂಡ ಹರಿಹರ-ಕೊಡಿಯಾಲ ಹೊಸಪೇಟೆ ನಡುವಿನ ಹಳೆ ತುಂಗಭದ್ರಾ ಸೇತುವೆಯ ವಿಹಂಗಮ ನೋಟ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT