ಸೋಮವಾರ, ಸೆಪ್ಟೆಂಬರ್ 20, 2021
20 °C

ನೆರೆ ಹಾವಳಿಯಿಂದ ರೈತ ಕಂಗಾಲು: ಬೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ನೆರೆ ಹಾವಳಿಯಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಸರ್ಕಾರ ತಕ್ಷಣವೇ ನೊಂದವರ ನೆರವಿಗೆ ಧಾವಿಸಬೇಕು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

ಗೌತಮಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂಕಷ್ಟದಲ್ಲಿದ್ದವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿ ಮಾತನಾಡಿದರು.

‘ಕೃಷಿಯಿಂದ ಆದಾಯಕ್ಕಿಂತ ನಷ್ಟವೇ ಹೆಚ್ಚು ಎಂಬ ಕಾರಣದಿಂದ ಸಾಕಷ್ಟು ಜನ ಭತ್ತದ ನಾಟಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ತೊಡಗಿದ್ದವರು ನೆರೆಹಾವಳಿಯಿಂದ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಜೊತೆಗೆ ಗೊಬ್ಬರದ ಬೆಲೆ, ಕೂಲಿ ಕಾರ್ಮಿಕರ ಕೊರತೆ ಹಾಗೂ ಕೂಲಿ ಹೆಚ್ಚಳವಾಗಿರುವುದರಿಂದ ಕೃಷಿಕರ ಜೀವನ ಸಂಕಷ್ಟದಲ್ಲಿದೆ. ಹೀಗಾಗಿ, ರೈತರ ಸಂಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಂಡು ಹಣ ಬಿಡುಗಡೆ ಮಾಡಬೇಕು’ ಎಂದು ಹೇಳಿದರು.

‘ಮಧು ಬಂಗಾರಪ್ಪ ಕಾಂಗ್ರೆಸ್ ಸೇರುತ್ತಿರುವುದರಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಒಂದು ವರ್ಷದಿಂದಲೂ ಕಾಂಗ್ರೆಸ್ ಸೇರ್ಪಡೆಯ ಪ್ರಯತ್ನ ನಡೆಯುತ್ತಿತ್ತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ನಾನು ಹಾಗೂ ಮಧು ಬಂಗಾರಪ್ಪ ಒಟ್ಟಾಗಿ ಕೆಲಸ ನಿರ್ವಹಿಸಿದ್ದರಿಂದ ಹೆಚ್ಚಿನ ಸ್ಥಾನ ಪಡೆಯಲು ಅನುಕೂಲವಾಯಿತು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಗೌತಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ದಾಸನ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹರಟೆ, ಪ್ರಮುಖರಾದ ಗಣಪತಿ, ರಮಾನಂದ, ರಹಮತ್‌ ವುಲ್ಲಾ, ಉಮೇಶ್, ರಾಜು ಇದ್ದರು.

ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿ

‘ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಡಿಯೂರಪ್ಪ ಹಾಗೂ ಅವರ ಕುಟುಂಬದಿಂದ ಬಸವರಾಜ ಬೊಮ್ಮಾಯಿ ದೂರ ಇರಬೇಕು. ಅವರ ಹಾಗೂ ಮಕ್ಕಳ ಕೈಗೊಂಬೆಯಾಗದೆ ಮುಖ್ಯಮಂತ್ರಿ ಹುದ್ದೆ ನಿಭಾಯಿಸಬೇಕು’ ಎಂದು ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು.

‘ಬೊಮ್ಮಾಯಿ ಅವರಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಶಕ್ತಿ ಇದೆ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಮಾತು ಕಟ್ಟಿಕೊಂಡು ಆಡಳಿತ ನಡೆಸಿದರೆ ಅವರೂ ಕಳೆದು ಹೋಗುತ್ತಾರೆ. ಅವರ ಕುಟುಂಬದ ಭ್ರಷ್ಟಾಚಾರ ಸಾಕಷ್ಟಿದ್ದು, ಬೊಮ್ಮಾಯಿ ಅದನ್ನು ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರನ್ನು ಸೂಪರ್ ಸಿ.ಎಂ ಎಂದು ಪರಿಗಣಿಸಿದರೆ ಅವರ ಆಡಳಿತ ಹೆಚ್ಚು ದಿನ ಇರುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.