ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆಗೆ ಮೌನಹೊದ್ದ ಮಲೆನಾಡು

ಅಂಬಾರುಗುಡ್ಡ: ಧರೆಸರಿದು, ಹಳ್ಳ ಹರಿದು, ಬದುಕು ಬಯಲು
Last Updated 11 ಜುಲೈ 2022, 2:36 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರಿನ ಸಮೃದ್ಧಿ ಭಾನುವಾರ ಕೂಡ ಮುಂದುವರೆದಿದೆ. ಆಗೊಮ್ಮೆ ಈಗೊಮ್ಮೆ ಕೆಲ ಹೊತ್ತು ಬಿಡುವು ಕೊಡುತ್ತಿದ್ದ ಮಳೆರಾಯ ಉಳಿದಂತೆ ಬಿಟ್ಟೂ ಬಿಡದೆ ಸುರಿದು ಮಲೆನಾಡನ್ನು ‘ಮಳೆ‘ಯ ನಾಡಾಗಿ ಬದಲಾಯಿಸಿದ್ದಾನೆ.

ಭಾನುವಾರದ ರಜೆ, ಮಳೆ, ಥಂಡಿ ಹವೆ ಕಾರಣ ಜನರು ಮನೆ ಬಿಟ್ಟು ಹೊರಗೆ ಬರಲಿಲ್ಲ. ವಿಶ್ರಾಂತಿಯ ಮೂಡ್‌ನಲ್ಲಿ ಕಾಫಿ, ಕುರುಕಲು, ಬಾಡೂಟದಂತಹ ವಿಶೇಷಗಳ ಸಾಂಗತ್ಯಕ್ಕೆ ಮೊರೆ ಹೋದರು. ಹೀಗಾಗಿ ಶಿವಮೊಗ್ಗದ ಓಣಿ, ರಸ್ತೆ, ಮಾರುಕಟ್ಟೆ, ಹೆದ್ದಾರಿ ಹೀಗೆ ಎಲ್ಲೆಲ್ಲೂ ಬರೀ ಮಳೆಯದ್ದೇ ಆಟಾಟೋಪ ಕಾಣಿಸಿತು.

ಶಿವಮೊಗ್ಗ ಬಳಸಿ ಹರಿಯುವ ತುಂಗೆ ದಿನೇ ದಿನೇ ಮೈದುಂಬಿ ಆರ್ಭಟಿಸುತ್ತಿದ್ದಾಳೆ. ನದಿಯ ಸಮೃದ್ಧಿ ಕಣ್ತುಂಬಿಕೊಳ್ಳಲು ಮಳೆ ಬಿಡುವು ಕೊಟ್ಟಾಗಲೆಲ್ಲ ನಗರದ ಜನತೆ ದಂಡೆಗೆ ಬರುತ್ತಿದ್ದು, ಪೂಜೆ ಸಲ್ಲಿಸುವ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.

ಅಂಬಾರುಗುಡ್ಡ; ಕುಸಿದ ಗುಡ್ಡ, ಬಯಲಾದ ಬದುಕು: ಸಾಗರ ತಾಲ್ಲೂಕು ಅಂಬಾರುಗುಡ್ಡದ ಮೇಲಿನಿಂದ ಹರಿಯುವ ಶರಾವತಿಯ ಉಪನದಿ ಮಳೂರು ಹೊಳೆಯ ಸಂಪರ್ಕದ ಆಡಗಳಲೆ ಹಳ್ಳದ ಒಡ್ಡಿನ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಒಡ್ಡು ಒಡೆದು ನೀರಿನೊಂದಿಗೆ ಕೊಚ್ಚಿ ಬಂದ ಗುಡ್ಡದ ಮಣ್ಣು ನೂರಾರು ಎಕರೆ ನಾಟಿ ಮಾಡಿದ ಭತ್ತದ ಸಸಿಗಳ ಮೇಲೆ ಬಿದ್ದಿದೆ. ಅಡಿಕೆ ತೋಟಗಳು ಹಾನಿಗೀಡಾಗಿವೆ.

ಗುಡ್ಡ ಕುಸಿದು ಆಡಗಳಲೆಯ ಜಮೀನುಗಳು ಹಾಳಾಗಿವೆ. ಜೊತೆಗೆ ಗುಡ್ಡಕ್ಕೆ ಹೊಂದಿಕೊಂಡಂತಿರುವ ಮೂರು ಮನೆಗಳು ಅಪಾಯದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಅಪಾಯ ಇದೆ. ನಿವಾಸಿಗಳು ಜೀವಭಯದಲ್ಲಿ ಬದುಕುತ್ತಿದ್ದಾರೆ.

‘ಆಡಗಳಲೆ ಹಳ್ಳ 1500 ಮೀಟರ್ ಹರಿಯುತ್ತದೆ. ಎಲ್ಲ ಕಡೆಯೂ ಇದೇ ಸಮಸ್ಯೆ. 20 ವರ್ಷಗಳಿಂದಲೂ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ತೊಂದರೆ ಅನುಭವಿಸಿ
ರುವವರು ಎಲ್ಲರೂ ಬಡ ರೈತರು. 10, 20 ಗುಂಟೆ ಜಮೀನು ಹೊಂದಿದ್ದಾರೆ. 20 ಎಕರೆ ಜಮೀನು ನಾಟಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಹಳ್ಳ ರಿಪೇರಿ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಜನರಿಗೆ ಸೂಕ್ತ ಪರಿಹಾರ ಕೊಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿಜಯ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT