ಶುಕ್ರವಾರ, ಮೇ 20, 2022
23 °C
ರಾಯದುರ್ಗದಲ್ಲಿ ಸ್ಫೋಟಕ ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು; ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಹುಣಸೋಡು ಸ್ಫೋಟ‌ ಪ್ರಕರಣ:‌ ಕ್ರಷರ್‌ ಮಾಲೀಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹುಣಸೋಡು ಸ್ಫೋಟಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕರಾದ ಶಂಕರಗೌಡ ಟಿ. ಕುಲಕರ್ಣಿ, ಅವಿನಾಶ್ ಕುಲಕರ್ಣಿ ಹಾಗೂ ಆಂಧ್ರಪ್ರದೇಶದ ಅನಂತಪುರಂ ನಿವಾಸಿಗಳಾದ ಪಿ.ಶ್ರೀರಾಮಲು, ಪಿ.ಮಂಜುನಾಥ್ ಸಾಯಿ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಕೆ.ಎಂ.ಶಾಂತರಾಜು,  ‘ರಾಯದುರ್ಗದಲ್ಲಿ ಪಿ.ಶ್ರೀರಾಮಲು ಅವರಿಗೆ ಸಂಬಂಧಪಟ್ಟ ಸ್ಫೋಟಕಗಳ ದಾಸ್ತಾನು ಗೋದಾಮು ಇದೆ. ಅಲ್ಲಿ ಪರವಾನಗಿ ಪಡೆಯದೇ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಅನಂತಪುರಂ ಜಿಲ್ಲೆಯ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಅಕ್ರಮ ಸ್ಫೋಟಕ ದಾಸ್ತಾನು ಸಂಬಂಧಪಟ್ಟಂತೆ ಪ್ರಕರಣ ಕೂಡ ದಾಖಲಾಗಿದೆ. ಈ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಹುಣಸೋಡು ಘಟನೆಗೆ ಸಂಬಂಧಿಸಿದ ಸ್ಫೋಟಕಗಳು ಪಿ. ಶ್ರೀರಾಮುಲು ಅವರ ಮಾಲೀಕತ್ವದಲ್ಲಿರುವ ಆಂಧ್ರ ಪ್ರದೇಶದ ಅನಂತಪುರಂನ ಗಣೇಶ್ ಟ್ರೇಡರ್ಸ್‌ನಿಂದ ಪೂರೈಕೆಯಾಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಪ್ರಕರಣದಲ್ಲಿ ಇದುವರೆಗೆ 8 ಜನರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆ ಪಿಐ ಅಭಯ್ ಪ್ರಕಾಶ್, ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್, ಎಎಸ್‌ಐ ವಿಜಯ್, ಸಿಬ್ಬಂದಿ ಕಿರಣ್ ಮೋರೆ ಅವರನ್ನೊಳಗೊಂಡ ತಂಡವು ಅನಂತಪುರಂ, ರಾಯದುರ್ಗ ಮುಂತಾದ ಕಡೆಗಳಿಗೆ ಭೇಟಿ ನೀಡಿ ನಂತರ ಹೈದರಾಬಾದ್‌ಗೆ ತೆರಳಿತ್ತು. ಖಚಿತ ಮಾಹಿತಿಯ ಮೇರೆಗೆ ಮುಂಬೈಗೆ ತೆರಳಿ ಅಲ್ಲಿ ಶ್ರೀರಾಮುಲು ಮತ್ತು ಮಂಜುನಾಥ್ ಅವರನ್ನು ಬಂಧಿಸಿದೆ.

ಫೆ. 4ರಂದು ಭದ್ರಾವತಿ ಟೌನ್ ಸಿಪಿಐ ರಾಘವೇಂದ್ರ ಕಾಂಡಿಕೆ, ವಿನೋಬನಗರ ಎಸ್‌ಐ ಉಮೇಶ್, ಸಿಬ್ಬಂದಿ ನಾಗರಾಜ್, ಸಂದೀಪ್ ಅವರನ್ನು ಒಳಗೊಂಡ ತಂಡವು ಜಮೀನಿನ ಮಾಲೀಕರಾದ ಶಂಕರ್‌ಗೌಡ ಮತ್ತು ಅವಿನಾಶ್ ಅವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು