ಬುಧವಾರ, ಸೆಪ್ಟೆಂಬರ್ 22, 2021
28 °C

ನೂತನ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡಿದರೆ ಒಪ್ಪಿಕೊಳ್ಳುವೆ: ಈಶ್ವರಪ್ಪ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾವುದೇ ಸ್ಥಾನ ನೀಡಿದರೂ ಒಪ್ಪಿಕೊಳ್ಳುವೆ. ಜಗದೀಶ್ ಶೆಟ್ಟರ್ ಅವರಂತೆ ಹೊರಗುಳಿಯುವ ನಿಲುವು ತಾಳುವುದಿಲ್ಲ. ಪಕ್ಷ ಸಂಘಟನೆಗೆ ಸೂಚಿಸಿದರೂ ಆಕ್ಷೇಪಿಸುವುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.

ಉಪ ಮುಖ್ಯಮಂತ್ರಿ, ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ. ಇಲ್ಲ ಶಾಸಕನಾಗಿಯೇ ಉಳಿದು ಪಕ್ಷ ಸಂಘಟನೆಯ ಕೆಲಸ ಮಾಡುವೆ. ಸ್ಥಾನಕ್ಕಾಗಿ ಲಾಭಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರ ಸಮ್ಮತಿ ಪಡೆದೇ ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ನಡೆದಿದೆ. ಅವಕಾಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಗೆ ನಿರಾಶೆಯಾಗಿದೆ. ಪಕ್ಷದಲ್ಲಿ ಯಾವ ಗೊಂದಲಗಳೂ ಇಲ್ಲ. ರಾಷ್ಟ್ರೀಯ ನಾಯಕರು ಸರಳವಾಗಿ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ ಎಂದು ಶ್ಲಾಘಿಸಿದರು.

ಹಲವು ಸಂಘ, ಸಂಸ್ಥೆಗಳು, ಅಭಿಮಾನಿಗಳು ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿವೆ. ಅವರ ಅಭಿಮಾನಕ್ಕೆ ಋಣಿ. ಆದರೆ, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ರಾಜಕೀಯಕ್ಕೆ ಬರುತ್ತೇನೆ. ಶಾಸಕ, ಸಚಿವ, ಉಪ ಮುಖ್ಯಮಂತ್ರಿಯಾಗುವೆ ಎಂದು ಕನಸು ಕಂಡಿರಲಿಲ್ಲ. ಪಕ್ಷ ಎಲ್ಲವನ್ನೂ ನೀಡಿದೆ.  ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.

ರಾಮರಾಜ್ಯ ಪರಿಕಲ್ಪನೆಯ ಆಡಳಿತ ನಡೆಸಲು ಶ್ರೀಕೃಷ್ಣನ ತಂತ್ರಗಾರಿಕೆಯೂ ಅಗತ್ಯ. ಇದೇ ಮೇಲ್ಪಂಕ್ತಿ ವರಿಷ್ಠರು ಹಾಕಿಕೊಟ್ಟಿದ್ದಾರೆ. ಬೊಮ್ಮಾಯಿ ಆಯ್ಕೆಯಲ್ಲೂ ಅಂತಹ ರಾಜಕೀಯ ತಂತ್ರಗಾರಿಕೆ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ರಾಮರಾಜ್ಯ ಸ್ಥಾಪಿಸುತ್ತದೆ ಎಂದು ಭವಿಷ್ಯ ನುಡಿದರು.

ಸಂಪುಟ ಬದಲಾದರೂ ಜಾರಿಯಲ್ಲಿರುವ ಯಾವ ಅಭಿವೃದ್ಧಿ ಕಾರ್ಯಗಳೂ ನಿಲ್ಲುವುದಿಲ್ಲ. ಶಿವಮೊಗ್ಗಕ್ಕೆ ಮತ್ತಷ್ಟು ಯೋಜನೆ ತರುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ  ಮತ್ತಷ್ಟು ಪ್ರಬಲವಾಗಲಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು