ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸದಸ್ಯತ್ವ ನೋಂದಣಿ ಉದ್ಘಾಟಿಸಿದ ಡಿ.ಕೆ.ಶಿವಕುಮಾರ್

Last Updated 6 ಏಪ್ರಿಲ್ 2022, 5:47 IST
ಅಕ್ಷರ ಗಾತ್ರ

ಭದ್ರಾವತಿ: ‘ರಾಷ್ಟ್ರಧ್ವಜ, ಸಂವಿಧಾನಕ್ಕೆ ಅಗೌರವ ತೋರುವುದು ಹಾಗೂ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಶಿವಮೊಗ್ಗದಿಂದ ಆರಂಭವಾಗಿದೆ. ಇದು ದೊಡ್ಡ ಅವಮಾನದ ಸಂಗತಿ. ಇದನ್ನು ಮೆಟ್ಟಿ ನಿಲ್ಲುವ ಮೂಲಕ ಪಕ್ಷ ಸಂಘಟನೆ ಮಾಡುವ ಕೆಲಸ ಆಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶಾಸಕ ಬಿ.ಕೆ.ಸಂಗಮೇಶ್ವರ ಅವರ ಗೃಹ ಕಚೇರಿಯಲ್ಲಿ ಮಂಗಳವಾರ ನಡೆದ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಈ ರೀತಿಯ ಭಾವನೆ ಬೆಳೆದಲ್ಲಿ ಯಾರೊಬ್ಬರೂ ಇಲ್ಲಿ ಹೂಡಿಕೆ ಮಾಡಲು ಬರುವುದಿಲ್ಲ. ಈಗಾಗಲೇ ಇಂತಹ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಮಾಡಿದ್ದಾರೆ. ಈಗ ಇಲ್ಲಿ ಆರಂಭವಾಗಿದೆ. ಇದಕ್ಕೆ ಅಂತ್ಯ ಹಾಡುವ ಕೆಲಸವನ್ನು ಭವಿಷ್ಯದ ದಿನದಲ್ಲಿ ಕಾಂಗ್ರೆಸ್ ಪಕ್ಷ ಮಾಡಲಿದೆ’ ಎಂದರು.

‘ಅಷ್ಟೋ ಇಷ್ಟೋ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ನಾನು ಅಭಿವೃದ್ಧಿ ಆಗಿಲ್ಲ ಎನ್ನುವುದಿಲ್ಲ. ಆದರೆ 144 ಸೆಕ್ಷನ್ ಇದೇ ರೀತಿ ಮುಂದುವರಿದಲ್ಲಿ ಯಾವ ಬಂಡವಾಳಗಾರ ಬಂದು ಇಲ್ಲಿ ಹಣ ಹೂಡುತ್ತಾನೆ? ಇಲ್ಲಿನ ಯುವಕರು ಹೊರಗಡೆ ಹೋಗಿ ದುಡಿಮೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿ ಬರಲು ಅವಕಾಶ ನೀಡಬೇಕಾ’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

‘ಜಿಲ್ಲೆಗೆ ವಿಮಾನನಿಲ್ದಾಣ ಬರುತ್ತಿದೆ. ಈ ರೀತಿಯ ಪರಿಸ್ಥಿತಿ ಇದ್ದರೆ, ಯಾವ ಉದ್ಯಮಿ ಬರುತ್ತಾರೆ? ದಿನಕ್ಕೊಂದು ವಿಷಯ ಇಟ್ಟುಕೊಂಡು ಬೆಂಕಿ ಹಚ್ಚಿದರೆ ನಾವು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕೆ ದೊಡ್ಡ ಆಂದೋಲನ ಹಮ್ಮಿಕೊಂಡು ಹೋರಾಟ ಮಾಡುವ ಮೂಲಕ ಈ ಜಿಲ್ಲೆಯ ಜತೆಗೆ ರಾಜ್ಯದ ಅಭಿವೃದ್ಧಿ ಮಾಡಬೇಕಿದೆ’ ಎಂದು ಹೇಳಿದರು.

ಕೊನೆಯ ವಾರ ಸಭೆ: ‘ಜಿಲ್ಲೆಯ ಮುಖಂಡರ, ಶಾಸಕರ ಹಾಗೂ ಮಾಜಿ ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಇಲ್ಲಿಗೆ ಅಗತ್ಯ ಇರುವ ಜನಪರ ಹೋರಾಟವನ್ನು ಪಕ್ಷ ಹಮ್ಮಿಕೊಳ್ಳಲಿದೆ. ಮುಂದಿನ ವಿಧಾನಸಭೆಯಲ್ಲಿ ಇಲ್ಲಿನ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುತ್ತಾರೆ ಎಂಬ ವಿಶ್ವಾಸವಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತೇನೆ. ಅದಕ್ಕೆ ತಕ್ಕಂತೆ ಕೆಲಸ ಮಾಡಲು ಮುಂದಾಗಿ’ ಎಂದು ಶಿವಕುಮಾರ್‌ ಸಲಹೆ ನೀಡಿದರು.

ಬೊಗಳೆ ಮಾತಿಗೆ ಉತ್ತರಿಸಿ: ‘ಕ್ಷೇತ್ರದಲ್ಲಿ ಸದಸ್ಯತ್ವ ಗುರಿಯನ್ನು ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಬೇಕು. ಇದಕ್ಕಾಗಿ ಪ್ರತಿ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ. ಬಿಜೆಪಿ ನಾಯಕರ ಬೊಗಳೆ ಮಾತುಗಳಿಗೆ ಪ್ರತ್ಯುತ್ತರ ನೀಡುವ ಕೆಲಸ ಮಾಡಿ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಮನವಿ ಮಾಡಿದರು.

ಬಿಜೆಪಿ ಶ್ರೀಮಂತ ಅಲ್ಪಸಂಖ್ಯಾತರ ಪರ: ‘ಶಿವಮೊಗ್ಗ ಬಿಜೆಪಿ ನಾಯಕರು ಶ್ರೀಮಂತ ಅಲ್ಪಸಂಖ್ಯಾತರ ಮಾಲ್ ಉದ್ಘಾಟಿಸಲು ಜತೆಗೆ ಹೋಗುತ್ತಾರೆ. ಆದರೆ ಬೆಂಡು, ಬತಾಸ್ ಮಾರುವ ಬೀದಿ ಬದಿಯ ಅಲ್ಪಸಂಖ್ಯಾತ ವ್ಯಾಪಾರಿಗೆ ಮಾತ್ರ ವಿರೋಧ ಮಾಡುತ್ತಾರೆ’ ಎಂದು ಶಿವಮೊಗ್ಗ ಕಾರ್ಪೊರೇಟರ್‌ ಎಚ್.ಸಿ.ಯೋಗೇಶ್ ಬಿಜೆಪಿ ಮುಖಂಡರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿದರು,

ವೇದಿಕೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ, ಮಾಜಿ ಸಚಿವಾರದ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಿವಮೊಗ್ಗ ಕಾರ್ಪೋರೇಟರ್ ಎಚ್.ಸಿ.ಯೋಗೇಶ್, ಕೆಪಿಸಿಸಿ ಸದಸ್ಯತ್ವ ಜವಾಬ್ದಾರಿ ಹೊತ್ತಿರುವ ಆರ್.ವಿ.ವೆಂಕಟೇಶ್, ಸೂರಜ್ ಹೆಗ್ಡೆ, ಪ್ರಫುಲ್ಲಾ ಮಧುಕರ್, ಕಲಗೋಡು ರತ್ನಾಕರ, ಡಾ.ರಾಜನಂದಿನಿ ಕಾಗೋಡು, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ನಗರ ಅಧ್ಯಕ್ಷ ಟಿ.ಚಂದ್ರೇಗೌಡ, ಸಿ.ಎಂ.ಖಾದರ್, ಗೀತಾರಾಜಕುಮಾರ್, ಚನ್ನಪ್ಪ, ಬಿ.ಟಿ. ನಾಗರಾಜ್ ಹಾಜರಿದ್ದರು.

‘ವ್ಯಕ್ತಿಪೂಜೆ ಬಿಡಿ, ಪಕ್ಷದ ಪೂಜೆ ಮಾಡಿ’

‘ಪಕ್ಷದಲ್ಲಿ ವ್ಯಕ್ತಿಪೂಜೆ ಮಾಡುವುದನ್ನು ಬಿಡಿ. ಪಕ್ಷದ ಪೂಜೆ ಮಾಡಿ. ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯ ಇರುತ್ತದೆ. ಅದಕ್ಕೆ ಕಾರ್ಯಕರ್ತರು ತಲೆಬಿಸಿ ಮಾಡಿಕೊಳ್ಳಬಾರದು’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳಷ್ಟಿದೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈಗ ಬೊಮ್ಮಾಯಿ ಇಳಿಸಿ ನಿರಾಣಿಯನ್ನು ಮುಖ್ಯಮಂತ್ರಿ ಮಾಡುತ್ತೇನೆ ಎನ್ನುತ್ತಾರೆ. ಈ ಸ್ಫೋಟ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT