ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾತಿ ವಿವಾಹ: ಶಿವಮೊಗ್ಗಕ್ಕೆ ರಾಜ್ಯದಲ್ಲಿ ಮೂರನೇ ಸ್ಥಾನ

Published 7 ಫೆಬ್ರುವರಿ 2024, 5:55 IST
Last Updated 7 ಫೆಬ್ರುವರಿ 2024, 5:55 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು...’ ವರಕವಿ ದ.ರಾ.ಬೇಂದ್ರೆ ಅವರ ಕವಿತೆಯ ಈ ಸಾಲು ಕುವೆಂಪು ನೆಲದಲ್ಲಿ ಹರಳುಗಟ್ಟಿದೆ. ಕಳೆದ ವರ್ಷ (2023) ರಾಜ್ಯದಲ್ಲಿ ಬೆಂಗಳೂರು, ಮೈಸೂರು ಬಿಟ್ಟರೆ ಅತಿ ಹೆಚ್ಚು ಅಂತರ್ಜಾತಿ ವಿವಾಹ ನಡೆದ ಶ್ರೇಯ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಸಂದಿದೆ.

ಇದಕ್ಕೆ ಪೂರಕವಾಗಿ 2023ರ ಜನವರಿಯಿಂದ 2024ರ ಫೆಬ್ರುವರಿ 5ರವರೆಗೆ ರಾಜ್ಯದಲ್ಲಿ ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ಪಡೆಯಲು ಸಮಾಜ ಕಲ್ಯಾಣ ಇಲಾಖೆಗೆ ಒಟ್ಟು 3,972 ಜೋಡಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ 720, ಮೈಸೂರಿನ 342 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಶಿವಮೊಗ್ಗದಲ್ಲಿ 303 ಮಂದಿ ಅರ್ಜಿ ಹಾಕಿದ್ದಾರೆ. ಇದೇ ಅವಧಿಯಲ್ಲಿ 4 ವಿಧವಾ ವಿವಾಹ ನಡೆದಿವೆ.

‘ಪ್ರೋತ್ಸಾಹಧನ ಅರ್ಜಿ ಸಲ್ಲಿಕೆಯ ಹಿರಿತನದ ಆಧಾರದ ಮೇಲೆ ಮಂಜೂರು ಮಾಡುತ್ತೇವೆ. ಆ ಮೊತ್ತವನ್ನು ದಂಪತಿಯ ಹೆಸರಿನಲ್ಲಿರುವ ಬ್ಯಾಂಕ್‌ನ ಜಂಟಿ ಖಾತೆಗೆ ಜಮಾ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲಾ ಉಪನಿರ್ದೇಶಕ ಡಿ.ಮಲ್ಲೇಶ‍ಪ್ಪ ಹೇಳುತ್ತಾರೆ.

‘ಇದು ಒಳ್ಳೆಯ ಬೆಳವಣಿಗೆ. ಯೋಜನೆಯ ಉಪಯೋಗ, ಅಂತರ್ಜಾತಿ ವಿವಾಹದ ಮಹತ್ವದ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಪ್ರೋತ್ಸಾಹ ಕೊಡುತ್ತಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿವೆ’ ಎಂದು ಮಲ್ಲೇಶಪ್ಪ ಹರ್ಷ ವ್ಯಕ್ತಪಡಿಸುತ್ತಾರೆ.

‘ಇಂದು ಯುವಜನತೆಯ ಆದ್ಯತೆಗಳು ಬದಲಾಗಿವೆ. ಉನ್ನತ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂವಹನ, ಬದುಕಿನ ಆಯ್ಕೆಯ ವಿಚಾರದಲ್ಲಿ ಬದಲಾದ ಧೋರಣೆ. ಇವೆಲ್ಲವೂ ಅಂತರ್ಜಾತಿ ವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಇಲ್ಲಿನ ಗೋಪಾಳದ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಹಿಮಾಂಶಿ ರಾಠೋಡ್ ಹೇಳುತ್ತಾರೆ.

ಹಿಮಾಂಶಿ ಪತಿ ಬಿಹಾರದವರು. ಕಂಪೆನಿಯಲ್ಲಿ ಸಹೊದ್ಯೋಗಿ. ‘ಪರಸ್ಪರ ಅರಿತುಕೊಂಡು ಬಾಳಿದರೆ ಭಾಷೆ, ಆಚಾರ, ವಿಚಾರ, ಜಾತಿ ಇಲ್ಲಿ ಯಾವುದೂ ಮುಖ್ಯವಾಗುವುದಿಲ್ಲ’ ಎಂದು ಹಿಮಾಂಶಿ ನಗೆ ಬೀರುತ್ತಾರೆ.

‘ಕೆಲವು ಸಮುದಾಯಗಳಲ್ಲಿ ಹೆಣ್ಣು ಮಕ್ಕಳು ಸಿಗದಿರುವ ಕಾರಣದಿಂದಲೂ ಅನಿವಾರ್ಯವಾಗಿ ಹುಡುಗರು ಅಂತರ್ಜಾತಿ ಮದುವೆಯತ್ತ ಮುಖ ಮಾಡುತ್ತಿದ್ದಾರೆ’ ಎಂಬುದು ವೀರಣ್ಣ ಲೇಔಟ್ ನಿವಾಸಿ ನಿವೃತ್ತ ಶಿಕ್ಷಕ ಬಿ.ಎಂ.ಚಂದ್ರಶೇಖರಯ್ಯ ಅವರ ಅಭಿಮತ.

ಮಂತ್ರ ಮಾಂಗಲ್ಯ ಮದುವೆ; ಬೆಂಗಳೂರಲ್ಲೇ ವೇದಿಕೆ..

ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯ ಕವಿಮನೆಯಲ್ಲಿ ಮಂತ್ರ ಮಾಂಗಲ್ಯ ರೀತಿಯ ಸರಳ ವಿವಾಹ ಆಗಲು ಈಚೆಗೆ ಬಹಳಷ್ಟು ಯುವಜೋಡಿಗಳು ಆಸಕ್ತಿ ತೋರುತ್ತಿವೆ. ಆದರೆ ಅವರಿಗೆ ಅಗತ್ಯವಿರುವ ದಿನ ಕವಿಮನೆ ಲಭ್ಯವಾಗುತ್ತಿಲ್ಲ.

‘ಅಲ್ಲಿ ಮಕ್ಕಳ ಶಿಬಿರ, ರಂಗ ತರಬೇತಿ, ಸಾಹಿತ್ಯ ಕಾರ್ಯಕ್ರಮ ಹೀಗೆ ಬೇರೆ ಬೇರೆ ಚಟುವಟಿಕೆ ನಡೆಯುವುದರಿಂದ ವರ್ಷಕ್ಕೆ 10ರಿಂದ 12 ಮದುವೆಗೆ ಮಾತ್ರ ಅವಕಾಶವಾಗುತ್ತಿದೆ’ ಎಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಹೇಳುತ್ತಾರೆ.

‘ಈ ಕೊರತೆ ನೀಗಿಸಲು ಕುವೆಂಪು ಪ್ರತಿಷ್ಠಾನದಿಂದ ಬೆಂಗಳೂರಿನ ನಾಗರಬಾವಿಯ ವಿಶ್ವೇಶ್ವರ ಲೇಔಟ್‌ನಲ್ಲಿ 30,000 ಅಡಿ ಜಾಗದಲ್ಲಿ 250 ಜನರು ಸೇರುವಷ್ಟು ಸಾಮರ್ಥ್ಯದ ಸಭಾಂಗಣ ನಿರ್ಮಿಸಲಾಗುತ್ತಿದೆ. ಮಾರ್ಚ್‌ನಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಹೇಳಿದರು.

‘ಮಂತ್ರಮಾಂಗಲ್ಯ ರೀತಿಯ ವಿವಾಹಕ್ಕೆ ಬೆಂಗಳೂರು, ಮೈಸೂರು ಭಾಗದವರೂ ಆದ್ಯತೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಭವನ ನಿರ್ಮಾಣ ಪೂರ್ಣಗೊಂಡರೆ ಅವರಿಗೆ ಅನುಕೂಲ ಆಗಲಿದೆ’ ಎಂದರು.

ಪೂಜಾಗಾಂಧಿ ಆಸೆ ಈಡೇರಲಿಲ್ಲ

‘ಚಿತ್ರನಟಿ ಪೂಜಾ ಗಾಂಧಿ ಮಂತ್ರ ಮಾಂಗಲ್ಯ ರೀತಿಯಲ್ಲಿ ಕುಪ್ಪಳಿಯಲ್ಲೇ ಮದುವೆ ಆಗಲು ಬಂದಿದ್ದರು. ಆದರೆ, ಅವರು ಕೇಳಿದ್ದ ದಿನ ಚಾಮರಾಜನಗರದ ಬೇರೊಂದು ಜೋಡಿಯ ಮದುವೆ ನಿಗದಿಯಾಗಿತ್ತು. ಹೀಗಾಗಿ ಅವರು ಬೆಂಗಳೂರಿನಲ್ಲೇ ಸರಳ ವಿವಾಹವಾದರು. ಸಮಾರಂಭಕ್ಕೆ ನಾವೂ ಸಾಕ್ಷಿಯಾಗಿದ್ದೆವು’ ಎಂದು ಪ್ರಕಾಶ್ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT