ಶುಕ್ರವಾರ, ಫೆಬ್ರವರಿ 3, 2023
25 °C

ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಪಾದಯಾತ್ರೆ: ಮಧು ಬಂಗಾರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಭೂಮಿಯ ಹಕ್ಕು ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಮುಳುಗಡೆ ಸಂತ್ರಸ್ತರ ಜಾಗೃತಿ ಸಮಿತಿಯಿಂದ ನವೆಂಬರ್‌ 28ರಂದು ಆಯನೂರಿನಿಂದ ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಅಂದು ಬೆಳಿಗ್ಗೆ 10ಕ್ಕೆ ಆಯನೂರಿನಿಂದ ಹೊರಡುವ ಪಾದಯಾತ್ರೆ ಶಿವಮೊಗ್ಗ ಬಸ್ ನಿಲ್ದಾಣ ಬಳಿಯ ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಮಹಾವೀರ ವೃತ್ತದ ಮೂಲಕ ಸಂಜೆ 4ಕ್ಕೆ ಎನ್‌ಇಎಸ್ ಕಾಲೇಜು ಮೈದಾನ ತಲುಪಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಸೇರಿದಂತೆ ಹಲವು ಶಾಸಕರು ಹಾಗೂ ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಮುಳುಗಡೆ ಸಂತ್ರಸ್ತರು ಭಾಗವಹಿಸಲಿದ್ದಾರೆ ಎಂದರು.

ಹೈಕೋರ್ಟ್ ಸೂಡೂರು ಹಾಗೂ ಕೂಡಿ ಎರಡು ಸರ್ವೆ ನಂಬರ್‌ಗಳಲ್ಲಿನ ಡಿನೋಟಿಫಿಕೇಷನ್ ವಜಾ ಮಾಡಿದರೆ ಅದೇ ಆದೇಶ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಎಲ್ಲಾ 56 ನೋಟಿಫಿಕೇಷನ್‌ಗಳನ್ನು ವಜಾ ಮಾಡಿದೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ನ್ಯಾಯಲಯಕ್ಕೆ ಸಂತ್ರಸ್ತರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಮರ್ಪಕ ಭರವಸೆ ನೀಡುವಲ್ಲಿ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಹೇಳಿಲ್ಲ. ಒಂದು ದಿನವೂ ಮಲೆನಾಡಿನ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡದ ಬಿಜೆಪಿ ಚುನಾವಣೆ ಬರುತ್ತಿದ್ದಂತೆ ಈಗ ಮಾತನಾಡುತ್ತಿದೆ ಎಂದು ದೂರಿದರು.

ಮಲೆನಾಡು ಭಾಗದ ರೈತರು ಮನೆ, ಕೃಷಿ ಭೂಮಿ ಹಕ್ಕುಪತ್ರಕ್ಕಾಗಿ ವಿವಿಧ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ವಜಾಗೊಳಿಸುವ ಕೆಲಸ ಈ ಸರ್ಕಾರದಿಂದ ಆಗಿದೆ. ಕಸ್ತೂರಿ ರಂಗನ್ ವರದಿ ತೂಗು ಕತ್ತಿಯಾಗಿದೆ. ಮುಖ್ಯಮಂತ್ರಿಯಿಂದಲೂ ರೈತರಿಗೆ ಧೈರ್ಯ ತುಂಬುವ ಕೆಲಸವಾಗಿಲ್ಲ ಎಂದು
ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಎಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ, ಎನ್. ರಮೇಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಮಂಜುನಾಥ ಬಾಬು ಇದ್ದರು.

ಗಡುವು ಮುಗಿದರೂ ಪರಿಹಾರ ಸಿಗಲಿಲ್ಲ

ಕಾಂಗ್ರೆಸ್‌ನಿಂದ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸಭೆ ನಡೆಸುತ್ತಿದ್ದಂತೆ ಬಿಜೆಪಿಯವರೂ ನವೆಂಬರ್ 11ರಂದು ಶಿವಮೊಗ್ಗದಲ್ಲಿ ಸಭೆ ನಡೆಸಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಗಡುವು ಶನಿವಾರ ಮುಗಿದಿದೆ. ಆದರೆ ಸಂತ್ರಸ್ತರ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅದೇ ಸಭೆಯಲ್ಲಿ ಯಡಿಯೂರಪ್ಪ ಅವರು ಒಂದು ರೀತಿ ಹೇಳಿದರೆ, ಸಂಸದ ಬಿ.ವೈ. ರಾಘವೇಂದ್ರ ಇನ್ನೊಂದು ರೀತಿ ಹೇಳಿಕೆ ಕೊಟ್ಟಿದ್ದರು. ಇದು ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ಬಿಜೆಪಿಯವರ ಬದ್ಧತೆಯನ್ನು ತೋರಿಸುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು