ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುವವನೇ ಹೊಲದೊಡೆಯ; ಮತ್ತೆ ಮೊಳಗಿದ ಘೋಷಣೆ

ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2020, 3:59 IST
ಅಕ್ಷರ ಗಾತ್ರ

ಸಾಗರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹಲವು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಬಡವರ, ದುಡಿಯುವ ವರ್ಗದವರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ
ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೃಷಿಕರಲ್ಲದವರು ಕೂಡ ಗರಿಷ್ಠ ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಕಾಯ್ದೆ ತಿದ್ದುಪಡಿ ಮೂಲಕ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಕೃಷಿ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಲಿದೆ’ ಎಂದು ಎಚ್ಚರಿಸಿದರು.

‘ರೈತರಾದವರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಬಹುದು ಎಂದು ಕಾಯ್ದೆಯಲ್ಲಿದ್ದ ಷರತ್ತನ್ನು ರಾಜ್ಯ ಸರ್ಕಾರ ತೆಗೆದು ಹಾಕಿರುವುದು ಮೂರ್ಖತನದ ಪರಮಾವಧಿಯಾಗಿದೆ. ಈಗಾಗಲೇ ಉದ್ಯೋಗ ಸೃಷ್ಟಿ ಇಲ್ಲದೆ ದೇಶದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೃಷಿ ಭೂಮಿ ಭಾರಿ ಶ್ರೀಮಂತರ, ಬಂಡವಾಳಶಾಹಿಗಳ ವಶವಾದರೆ ನಿರುದ್ಯೋಗದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಕೃಷಿಕರನ್ನು ಕೂಲಿಯಾಳುಗಳನ್ನಾಗಿ ಪರಿವರ್ತಿಸಲು ಹೊರಟಿದೆ. ಇನ್ನು ಮುಂದೆ ಭಾರಿ ಹಣ ಇರುವವರು ಮಾತ್ರ ಭೂಮಿಯ ಒಡೆಯರಾಗುತ್ತಾರೆ. ಕಾಗೋಡು ಸತ್ಯಾಗ್ರಹದ ಮೂಲಕ ಭೂಮಿಯ ಹಕ್ಕು ಪಡೆದ ಕುಟುಂಬದ ಯುವ ತಲೆಮಾರಿನವರು ಹೋರಾಟವನ್ನು ಮರೆಯಬಾರದು’ ಎಂದು ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ‘ಸಂವಿಧಾನವನ್ನು ತಿದ್ದುಪಡಿ ಮಾಡದೆಯೇ ಅದರ ಆಶಯಗಳನ್ನು ಕೊಲ್ಲುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಬಿಎಸ್‌ಎನ್‌ಎಲ್‌ ಮುಚ್ಚುವ ಹಂತಕ್ಕೆ ಬಂದಿದೆ. ರೈಲುನಿಲ್ದಾಣ, ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಸರ್ಕಾರದ ತಪ್ಪು ಆರ್ಥಿಕ ನೀತಿಗೂ ಅದು ತರುತ್ತಿರುವ ಕಾಯ್ದೆ ತಿದ್ದುಪಡಿಗಳಿಗೂ ನೇರ ಸಂಬಂಧವಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದಲೇ ಜನರ ಪರವಾಗಿರುವ ಕಾನೂನುಗಳನ್ನು ತಿದ್ದಲಾಗುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಬಿ.ಆರ್.ಜಯಂತ್, ‘ಭೂ ಸುಧಾರಣೆ ಕಾಯ್ದೆಯ ಆಶಯವನ್ನೇ ಬುಡಮೇಲು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಇಡೀ ದೇಶದ ಗಮನ ಸೆಳೆದ ಕಾಗೋಡು ಸತ್ಯಾಗ್ರಹವನ್ನೇ ಅಪ್ರಸ್ತುತಗೊಳಿಸುವ ಹುನ್ನಾರ ನಡೆದಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಅನಿತಾಕುಮಾರಿ, ಶ್ವೇತಾ ಬಂಡಿ, ಭೀಮನೇರಿ ಶಿವಪ್ಪ, ಕಲಗೋಡು ರತ್ನಾಕರ, ಮಾಜಿ ಸದಸ್ಯೆ ಸುಮಂಗಲಾ ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ಐ.ಎನ್. ಸುರೇಶ್ ಬಾಬು, ಮಧು ಮಾಲತಿ, ಕೆ.ಎಸ್. ಪ್ರಶಾಂತ್, ಬಿ.ಜಿ. ನಾಗರಾಜ್, ತೀ.ನ. ಶ್ರೀನಿವಾಸ್, ಗಣಪತಿ ಕಾಗೋಡು, ಕೆ.ಎಚ್. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT