ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮರಿ: ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಪಾದಯಾತ್ರೆ

ಅಂಬಾರಗುಡ್ಡ ಜೀವ ವೈವಿಧ್ಯ ವಲಯಕ್ಕೆ ಜನವಸತಿ ಪ್ರದೇಶ ಸೇರ್ಪಡೆಗೆ ವಿರೋಧ
Last Updated 17 ಫೆಬ್ರುವರಿ 2023, 6:20 IST
ಅಕ್ಷರ ಗಾತ್ರ

ತುಮರಿ: ‘ಬಹುಕಾಲದಿಂದ ಬದುಕು ಕಟ್ಟಕೊಂಡ ಸಮುದಾಯಗಳ ಹಕ್ಕುಗಳನ್ನು ಅರಣ್ಯ ನೀತಿ ಹೆಸರಿನಲ್ಲಿ ದಮನಿಸಲಾಗುತ್ತಿದ್ದು, ಗಣತಂತ್ರ ವ್ಯವಸ್ಥೆಯಿಂದ ಆಯ್ಕೆಯಾದ ಸರ್ಕಾರಗಳ ಇಂತಹ ಜನ ವಿರೋಧಿ ನೀತಿಯನ್ನು ಸಂಘಟಿತ ಹೋರಾಟದ ಮೂಲಕ ಎದುರಿಸಬೇಕು’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಶರಾವತಿ ಎಡದಂಡೆಯ ಸಂಕಣ್ಣ ಶ್ಯಾನುಭೋಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಗ್ರಾಮದಲ್ಲಿ ಜೀವ ವೈವಿಧ್ಯ ತಾಣದಲ್ಲಿ ಜನವಸತಿ ಪ್ರದೇಶ ಉಳಿವಿಗೆ ಆಗ್ರಹಿಸಿ ಕಾಂಗ್ರೆಸ್ ಆಯೋಜಿಸಿದ್ದ ‘ಪಾದಯಾತ್ರೆ’ ಯನ್ನು ಡೋಲು ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ತಲೆತಲಾಂತರದಿಂದ ಜೀವನ ನಡೆಸುತ್ತಾ ಇರುವ ಜನ ಸಮುದಾಯ ಅಲ್ಲಿಯ ಕಾಡು ನಾಡಿನ ಜೊತೆಗೆ ಬೆರೆತು ಜೀವನ ನಡೆಸುತ್ತಿದೆ. ಆದರೆ, ಅವರನ್ನು ಕಾನೂನುಗಳ ಬಲ ಪ್ರಯೋಗದ ಹೆಸರಿನಲ್ಲಿ ಒಕ್ಕಲು ಎಬ್ಬಿಸುವ ಕ್ರಮ ಮನುಷ್ಯ ವಿರೋಧಿಯಾಗಿದೆ. ಅಂಬಾರಗುಡ್ಡ ಜೀವ ವೈವಿಧ್ಯ ತಾಣದ ಹೆಸರಿನಲ್ಲಿ ಜನವಸತಿ ಪ್ರದೇಶ ಸೇರಿಸಿ ಕಂದಾಯ ಇಲಾಖೆ ಭೂಮಿಯನ್ನು ಯಾವ ಸರ್ವೆ ಕಾರ್ಯ ನಡೆಸದೇ ಹಸ್ತಾಂತರ ಮಾಡಿರುವುದು ಮನುಷ್ಯ ವಿರೋಧಿ ಕ್ರಮ. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು’ ಎಂದು ಆಗ್ರಹಿಸಿದರು.

‘ಶರಾವತಿ ಹಿನ್ನೀರಿನ ಜನತೆ ದ್ವೀಪದಲ್ಲಿ ಬದುಕುವುದು ಅಸಾಧ್ಯವಾದ ವಾತವರಣವನ್ನು ಈಗಾಗಲೇ ಅರಣ್ಯ ಇಲಾಖೆ ನಿರ್ಮಾಣ ಮಾಡಿದೆ. ಈ ನಡುವೆ ಜೀವ ವೈವಿಧ್ಯ ತಾಣದ ಹೆಸರಿನಲ್ಲಿ ಸಾವಿರಾರು ಕುಟುಂಬಗಳ ವಾಸ ಇರುವ ಜಾಗವನ್ನು ಅವರ ಒಪ್ಪಿಗೆ ಇಲ್ಲದೆ ಅರಣ್ಯ ಇಲಾಖೆಗೆ ಸೇರಿಸಿರುವುದು ಬಾಣಲೆಯಿಂದ ಬೆಂಕಿಗೆ ಬೀಳುವಂತೆ ಮಾಡಿದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ಷೇಪ ವ್ಯಕ್ತಪಡಿಸಿದರು.

‘ಈ ಹಿಂದಿನ ಸರ್ಕಾರಗಳ ಅವಧಿಗಳಲ್ಲಿ ಈ ರೀತಿಯ ಅಧಿಕಾರಿಗಳ ದೌರ್ಜನ್ಯಕ್ಕೆ ಅವಕಾಶ ಇರಲಿಲ್ಲ. ಆದರೆ, ನಾಲ್ಕು ವರ್ಷಗಳಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಾ ಇದ್ದು
ಯಾವುದೇ ಜನ ಪ್ರತಿನಿಧಿಯ ಭಯ ಇಲ್ಲವಾಗಿದೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲದೇ ಇರುವುದು ಇದಕ್ಕೆ ಕಾರಣ ಆಗಿದೆ’ ಎಂದು ಆರೋಪಿಸಿದರು.

ನಾಡ ಕಚೇರಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ, ‘ಹದಿನೈದು ವರ್ಷಗಳ ಹಿಂದೆ ಆಂಬಾರಗುಡ್ಡ ಗಣಿಗಾರಿಕೆ ಆರಂಭ ಆದಾಗ ದೀಪದ ಜನರು ಹೋರಾಟ ಮಾಡಿ ಉಳಿಸಿಕೊಂಡೆವು. ಆದರೆ ಯಾವ ಭೂಮಿಯನ್ನು ಉಳಿಸಿಕೊಂಡೆವೋ ಆ ಭೂಮಿಯನ್ನೂ ಸೇರಿ ಹೆಚ್ಚುವರಿ ಜನವಸತಿ ಪ್ರದೇಶವನ್ನು ಸೇರಿಸಿ ಜೀವ ವೈವಿಧ್ಯ ವಲಯ ಎಂದು ಘೋಷಣೆ ಮಾಡಿದೆ. ಈ ಮೂಲಕ ಜನರನ್ನು ವಂಚಿಸುವ ಕೆಲಸ ಸರ್ಕಾರ ಮಾಡಿದೆ’ ಎಂದರು.

ಮರಾಠಿ ಗ್ರಾಮದಿಂದ ಬೆಳಿಗ್ಗೆ ಆರಂಭವಾದ 16 ಕಿ.ಮೀ. ಪಾದಯಾತ್ರೆ ಇಕ್ಕಿಬೀಳು– ಹೊಸಕೊಪ್ಪ– ಆಡಗಳಲೆ ಮಾರ್ಗವಾಗಿ ಕ್ರಮಿಸಿ ಮಧ್ಯಾಹ್ನ ನಾಲ್ಕು ಗಂಟೆಗೆ ಸುಳ್ಳಳ್ಳಿ ನಾಡಕಚೇರಿ ಅವರಣ ತಲುಪಿತು.

ಬಿಸಿಲಿನ ಧಗೆಯನ್ನು ಲೆಕ್ಕಿಸದೇ ಆರು ನೂರಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಮುಖಂಡರಾದ ತಸ್ರೀಪ್, ಅಶೋಕ ಬರದಹಳ್ಳಿ, ನಾಗರಾಜ್ ಜೈನ್, ದೇವರಾಜ್ ಕಪ್ಪದೂರು, ಚಂದ್ರಕಲಾ, ವಿಮಲಾ, ವಿಜಯ ಅಡಗಳಲೆ , ಹಾಬಿಗೆ ರಾಮಚಂದ್ರ, ಗಣೇಶ್ ಜಾಕಿ, ರವಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT