ಬುಧವಾರ, ಡಿಸೆಂಬರ್ 7, 2022
23 °C
ಮಾಧ್ಯಮ ಸಂವಾದದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು

ಕಾಗೋಡು ತಿಮ್ಮಪ್ಪಗೆ ರಾಜಕೀಯ ತಂತ್ರಗಾರಿಕೆ ಗೊತ್ತಿಲ್ಲ: ರಾಜನಂದಿನಿ ಕಾಗೋಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ನನ್ನ ತಂದೆ ಕಾಗೋಡು ತಿಮ್ಮಪ್ಪ ಅವರಿಗೆ ಊರಿನ, ಜನರ ಕೆಲಸ ಮಾಡುವುದು ಗೊತ್ತೇ ಹೊರತು ರಾಜಕೀಯ ತಂತ್ರಗಾರಿಕೆ ಗೊತ್ತಿಲ್ಲ. ಅದು ಗೊತ್ತಿದ್ದರೆ ಅವರು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರುತ್ತಿದ್ದರು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಶಾಖೆ ಶನಿವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ನಿಮಗೆ ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಿಸುವ ಸಲುವಾಗಿಯೇ ಈ ಬಾರಿ ಕಾಗೋಡು ತಿಮ್ಮಪ್ಪ ಅವರು ಟಿಕೆಟ್ ಕೇಳಿ ತಾವೂ ಕೂಡ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

‘ಕಾಗೋಡು ತಿಮ್ಮಪ್ಪನವರಿಗೆ 92 ವರ್ಷವಾಗಿದ್ದರೂ ಮಾನಸಿಕವಾಗಿ ಇನ್ನೂ ಯುವಕರಂತೆ ಇದ್ದಾರೆ. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕೆಲಸಗಳು ಆಗದೆ ಇರುವ ಬಗ್ಗೆ ಅವರಲ್ಲಿ ಅತೃಪ್ತಿ ಇದೆ. ಭೂಮಿಯ ಹಕ್ಕಿನ ವಿಷಯ ಬಂದಾಗ ಅವರ ರಕ್ತ ಈಗಲೂ ಕುದಿಯುತ್ತದೆ. ಹೀಗಾಗಿಯೇ ಅವರು ಅರ್ಜಿ ಸಲ್ಲಿಸಿದ್ದಾರೆಯೇ ಹೊರತು ನನಗಾಗಿ ಲಾಬಿ ಮಾಡುವ ಮನಸ್ಥಿತಿ ಅವರಲಿಲ್ಲ’ ಎಂದರು.

‘ರಾಜಕೀಯ ಚಟುವಟಿಕೆಯನ್ನು ಹತ್ತಿರದಿಂದ ನೋಡಿದ್ದೇನೆ. ವೈದ್ಯೆಯಾಗಿ ಹಲವು ವರ್ಷ ಕಾರ್ಯನಿರ್ವಹಿಸಿ ತೃಪ್ತಿ ಕಂಡಿದ್ದೇನೆ. ಈಗ ಆ ಜವಾಬ್ದಾರಿಯನ್ನು ಮಗಳು ನೋಡಿಕೊಳ್ಳುತ್ತಿರುವುದರಿಂದ ನಾನು ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದೇನೆ’ ಎಂದು ಹೇಳಿದರು.

‘ನಾಲ್ಕೂವರೆ ವರ್ಷಗಳಲ್ಲಿ ಸಾಗರ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಶಾಸಕ ಹಾಲಪ್ಪ ಅವರು ಕೇವಲ ಗಣಪತಿ ಕೆರೆ ಅಭಿವೃದ್ಧಿ ವಿಷಯಕ್ಕೆ ಮಾತ್ರ ಒತ್ತು ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರು ಆಸಕ್ತಿ ತೋರಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಾಸಕ ಹಾಲಪ್ಪ ಅವರ ವೈಫಲ್ಯಗಳ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಹೀಗಾಗಿ ಹಾಲಪ್ಪ ಅವರ ಬಗ್ಗೆ ನಾನು ಮೃದು ಧೋರಣೆ ತಾಳಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದರು.

‘ಪಕ್ಷ ಅಂದ ಮೇಲೆ ಗುಂಪುಗಾರಿಕೆ ಇರುವುದು ಸಹಜ. ಇಲ್ಲಿನ ಕಾಂಗ್ರೆಸ್‌ನಲ್ಲೂ ವಿವಿಧ ಗುಂಪುಗಳು ಮತ್ತು ಭಿನ್ನಾಭಿಪ್ರಾಯವಿದೆ. ಆದರೆ ಪಕ್ಷದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತಾರೆ. ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಸಾಗರ ಕ್ಷೇತ್ರದ ಅಭಿವೃದ್ಧಿಯ ಕುರಿತು ಹಲವು ಕನಸುಗಳಿವೆ ಎಂದರು.

ನಗರಸಭೆ ಸದಸ್ಯೆ ಎನ್.ಲಲಿತಮ್ಮ, ಸಬೀನಾ ತನ್ವೀರ್, ಮಾಜಿ ಅಧ್ಯಕ್ಷೆ ನಂದಾ ಗೊಜನೂರು, ಮಾಜಿ ಸದಸ್ಯೆ ಮರಿಯಾ ಲೀಮಾ, ಆವಿನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫೀಯಾ ಅಬೂಬಕರ್, ಪತ್ರಕರ್ತರ ಸಂಘದ ಪ್ರಮುಖರಾದ ಜಿ.ನಾಗೇಶ್, ಮಹೇಶ್ ಹೆಗಡೆ, ಲೋಕೇಶ್ ಕುಮಾರ್, ಎಂ.ಜಿ.ರಾಘವನ್, ದೀಪಕ್ ಸಾಗರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು