ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಹಾಳುಬಿದ್ದಿದೆ ‘ಮುಳುಗಡೆ’ ಪ್ರದೇಶದ ಅಸ್ಮಿತೆ

ಲಿಂಗನಮಕ್ಕಿ ಅಣೆಕಟ್ಟೆ ಪರಿಸರದ ಮ್ಯೂಸಿಯಂ ಅನಾಥ
Published 19 ಜೂನ್ 2024, 5:54 IST
Last Updated 19 ಜೂನ್ 2024, 5:54 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗರ ತಾಲ್ಲೂಕಿನ ಕಾರ್ಗಲ್‌ ಬಳಿಯ ಲಿಂಗನಮಕ್ಕಿ ಅಣೆಕಟ್ಟೆ ಪರಿಸರದಲ್ಲಿ ಮುಳುಗಡೆ ಸಂತ್ರಸ್ತರ ‘ತ್ಯಾಗ’ದ ಕಥನ ಹೇಳುತ್ತಿದ್ದ ವಿಶಿಷ್ಟ ಮ್ಯೂಸಿಯಂ ಈಗ ಜನಸಂಪರ್ಕವಿಲ್ಲದೇ ಪಾಳು ಬಿದ್ದಿದೆ.

ಲಿಂಗನಮಕ್ಕಿ ಅಣೆಕಟ್ಟೆ ಪೂರ್ಣಗೊಂಡ ನಂತರ ಮುಳುಗಡೆ ಆಗಲಿದ್ದ ಶರಾವತಿ ಕಣಿವೆಯ ಗ್ರಾಮಗಳು ಹಾಗೂ ಜನವಸತಿಯಲ್ಲಿನ ಮಾಸ್ತಿಕಲ್ಲು, ವೀರಗಲ್ಲು, ಶಿಲಾ ಶಾಸನಗಳು, ಶಿಲಾ ಮೂರ್ತಿಗಳು ಹಾಗೂ ಧಾರ್ಮಿಕ ಮಹತ್ವದ ಕುರುಹುಗಳ ಸಂಗ್ರಹಿಸಿ ತರಲಾಗಿತ್ತು. ಸರ್ಕಾರ 1958ರಲ್ಲಿ ಜಲಾಶಯದ ಪರಿಸರದಲ್ಲಿಯೇ ಮ್ಯೂಸಿಯಂ ನಿರ್ಮಿಸಿ ಅವುಗಳನ್ನು ಅಲ್ಲಿಯೇ ಕಾಪಿಟ್ಟಿದೆ.

ಮುಳುಗಡೆ ಪ್ರದೇಶದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕಥನಕ್ಕೆ ವರ್ತಮಾನದಲ್ಲಿ ಸಾಕ್ಷಿಯಾಗಿರುವ ಮ್ಯೂಸಿಯಂ ಸುಸಜ್ಜಿತ ಕಟ್ಟಡ ಹೊಂದಿದೆ. ಅದರೊಳಗೆ ಈ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಕಟ್ಟಡದ ಅಂಗಳ ಸೇರಿದಂತೆ ಸುತ್ತಲಿನ ಪರಿಸರದಲ್ಲೂ ಕೆಲವು ಪ್ರಾಚ್ಯವಸ್ತುಗಳಿಗೆ ಜಾಗ ನಿಗದಿಗೊಳಿಸಲಾಗಿದೆ.

ಪ್ರವಾಸಿಗರಿಗೆ ನಿರ್ಬಂಧ, ಮ್ಯೂಸಿಯಂ ಅನಾಥ:

ಭದ್ರತೆಯ ಕಾರಣಕ್ಕೆ ಲಿಂಗನಮಕ್ಕಿ ಜಲಾಶಯಕ್ಕೆ ಪ್ರವಾಸಿಗರ ಭೇಟಿಗೆ ಸರ್ಕಾರ ನಿರ್ಬಂಧ ವಿಧಿಸಿದ್ದು, ಕರ್ನಾಟಕ ಕೈಗಾರಿಕಾ ಭದ್ರತಾ ದಳದ (ಕೆಎಸ್‌ಐಎಸ್‌ಎಫ್‌) ಯೋಧರು ಅಲ್ಲಿ ಸತತ ಕಾವಲು ಕಾಯುತ್ತಾರೆ. ಹೀಗಾಗಿ ಮ್ಯೂಸಿಯಂ ವೀಕ್ಷಣೆಗೆ ಪ್ರವಾಸಿಗರು ಬರುತ್ತಿಲ್ಲ. ಸಹಜವಾಗಿಯೇ ಮ್ಯೂಸಿಯಂ ಕಟ್ಟಡ ಜನಮಾನಸದಿಂದ ದೂರವಾಗಿ ಹಾಳು ಸುರಿಯುತ್ತಿದೆ. ಪಕ್ಕದಲ್ಲಿಯೇ ಹೆಲಿಪ್ಯಾಡ್, ಉದ್ಯಾನವನ ಇದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಲೋಕೋಪಯೋಗಿ ಇಲಾಖೆ ಮ್ಯೂಸಿಯಂ ನಿರ್ಮಿಸಿದ್ದರೂ ಸದ್ಯ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಸುಪರ್ದಿಯಲ್ಲಿದೆ.

ಮ್ಯೂಸಿಯಂನಲ್ಲಿ ಇಟ್ಟಿರುವ ಪ್ರಾಚ್ಯ ಕುರುಹುಗಳು ದೂಳು ಹಿಡಿದಿವೆ. ಕಟ್ಟಡದ ಹೊರಭಾಗದಲ್ಲಿನ ಕುರುಹುಗಳು, ಮಾಹಿತಿ ಫಲಕಗಳ ಸುತ್ತಲೂ ಗಿಡಗಳು ಬೆಳೆದಿವೆ. ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಶರಾವತಿ ಕಣಿವೆಯ ಜಲವಿದ್ಯುತ್‌ ಯೋಜನೆಗಳ ಮಾದರಿಯೂ ಮುರಿದುಬಿದ್ದಿದೆ.

‘ಮ್ಯೂಸಿಯಂನಲ್ಲಿರುವುದು ಬರೀ ಶರಾವತಿ ಮುಳುಗಡೆ ಪ್ರದೇಶದಲ್ಲಿ ದೊರೆತ ಕುರುಹುಗಳಲ್ಲ. ಬದಲಿಗೆ ಅವೆಲ್ಲವೂ ಸಂತ್ರಸ್ತರ ಅಸ್ಮಿತೆ. ಹೀಗಾಗಿ ಪಾಳು ಬಿದ್ದಿರುವ ಮ್ಯೂಸಿಯಂಗೆ ಸರ್ಕಾರ ಮರುಜೀವ ಕೊಡಲಿ’ ಎಂದು ಕಾರ್ಗಲ್ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಸಂತೋಷಕುಮಾರ್ ಒತ್ತಾಯಿಸುತ್ತಾರೆ.

ಮ್ಯೂಸಿಯಂನಲ್ಲಿರುವ ಕುರುಹುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅವು ಅಧ್ಯಯನ ಯೋಗ್ಯವೂ ಆಗಿವೆ ಎನ್ನುತ್ತಾರೆ.

‘ಮುಳುಗಡೆ’ ಕಥನಕ್ಕೂ ಸ್ಪೂರ್ತಿ:

ಹಿರಿಯ ಸಾಹಿತಿ ನಾ.ಡಿಸೋಜಾ ಅವರ ‘ಮುಳುಗಡೆ’ ಕಾದಂಬರಿಯ ಕಥಾ ವಸ್ತುವೂ ಈ ಮ್ಯೂಸಿಯಂ ನಿರ್ಮಾಣದ ಸಂಗತಿಯೇ ಆಗಿತ್ತು ಎಂಬುದು ವಿಶೇಷ. ಶರಾವತಿ ಕಣಿವೆಯ ಮುಳುಗಡೆ ಪ್ರದೇಶದಲ್ಲಿನ ಈ ಸಾಂಸ್ಕೃತಿಕ ಕುರುಹುಗಳ ಗುರುತಿಸಿ ಮ್ಯೂಸಿಯಂಗೆ ತರುವ ಪ್ರಯತ್ನದಲ್ಲಿಯೇ ಸಂತ್ರಸ್ತರ ತಲ್ಲಣಗಳನ್ನು ಈ ಕೃತಿ ಕಟ್ಟಿಕೊಡುತ್ತದೆ. ಹೀಗಾಗಿ ಮ್ಯೂಸಿಯಂಗೆ ಕನ್ನಡ ಸಾರಸ್ವತ ಲೋಕದಲ್ಲೂ ಮಹತ್ವವಿದೆ.

ಲಿಂಗನಮಕ್ಕಿ ಅಣೆಕಟ್ಟೆ ಪರಿಸರದಲ್ಲಿರುವ ಮ್ಯೂಸಿಯಂ ಕಟ್ಟಡ
ಲಿಂಗನಮಕ್ಕಿ ಅಣೆಕಟ್ಟೆ ಪರಿಸರದಲ್ಲಿರುವ ಮ್ಯೂಸಿಯಂ ಕಟ್ಟಡ
ಮ್ಯೂಸಿಯಂ ಎದುರು ಇಟ್ಟಿರುವ ಕುರುಹು
ಮ್ಯೂಸಿಯಂ ಎದುರು ಇಟ್ಟಿರುವ ಕುರುಹು

ಅವಕಾಶವಿದ್ದರೆ ಜೋಗದ ಹಳೆಯ ಪ್ರವಾಸಿ ಮಂದಿರ ಕಟ್ಟಡ ನವೀಕರಿಸಿ ಮ್ಯೂಸಿಯಂ ಅನ್ನು ಅಲ್ಲಿಗೆ ಸ್ಥಳಾಂತರಿಸಬಹು‌ದಾಗಿದೆ. ಆ ಬಗ್ಗೆ ಕೆಪಿಸಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು.

-ಗೋಪಾಲಕೃಷ್ಣ ಬೇಳೂರು ಸಾಗರ ಶಾಸಕ

ಮ್ಯೂಸಿಯಂ ಜೋಗಕ್ಕೆ ಸ್ಥಳಾಂತರಿಸಲಿ

ರಾಜ್ಯ ಸರ್ಕಾರ ₹ 184 ಕೋಟಿ ವೆಚ್ಚದಲ್ಲಿ ಜೋಗ ಜಲಪಾತದ ಪರಿಸರದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಅಲ್ಲಿಗೆ ಈ ಮ್ಯೂಸಿಯಂ ಸ್ಥಳಾಂತರಿಸಲಿ ಎಂದು ಕಾರ್ಗಲ್ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಸಂತೋಷಕುಮಾರ್ ಒತ್ತಾಯಿಸುತ್ತಾರೆ.  ಜೋಗ ಜಲಪಾತ ವೀಕ್ಷಣೆಗೆ ರಾಜ್ಯದ ಹಾಗೂ ದೇಶ–ವಿದೇಶದ ಪ್ರವಾಸಿಗರು ನಿರಂತರವಾಗಿ ಬರುತ್ತಾರೆ. ಅವರು ವೀಕ್ಷಿಸಿ ವಿಷಯ ತಿಳಿದಲ್ಲಿ ಈ ಮ್ಯೂಸಿಯಂ ಸ್ಥಾಪನೆಯ ಆಶಯ ಈಡೇರಲಿದೆ. ನಿರ್ವಹಣೆ ಕಷ್ಟವಾದರೆ ಅದಕ್ಕೆ ಪ್ರವೇಶ ದರ ನಿಗದಿಗೊಳಿಸಲಿ ಎಂದು ಅವರು ಸಲಹೆ ನೀಡುತ್ತಾರೆ.

ಸರ್ಕಾರ ಅದೇಕೋ ಆಸಕ್ತಿ ತೋರುತ್ತಿಲ್ಲ: ನಾ.ಡಿಸೋಜಾ

‘ಮ್ಯೂಸಿಯಂಗೆ ಜನರು ಬರಲು ಅವಕಾಶ ಮಾಡಿಕೊಡಿ. ಶರಾವತಿ ಕೊಳ್ಳದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಟ್ಟಂತಾಗುತ್ತದೆ ಎಂದು ಹಿಂದೆಯೂ ಒಮ್ಮೆ ಹೇಳಿದ್ದೆ. ಸರ್ಕಾರ ಅದೇಕೋ ಆಸಕ್ತಿ ತೋರುತ್ತಿಲ್ಲ’ ಎಂದು ಸಾಹಿತಿ ನಾ.ಡಿಸೋಜ ಹೇಳುತ್ತಾರೆ. ಮ್ಯೂಸಿಯಂನಲ್ಲಿ ಬಹಳ ಒಳ್ಳೊಳ್ಳೆಯ ಶಿಲ್ಪಗಳು ಶಿಲಾ ಶಾಸನಗಳು ಇವೆ. ಮುಳುಗಡೆ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಶೋಧನಾ ವಿಭಾಗದ ಮುಖ್ಯಸ್ಥರು ಬಂದು ಪರಿಶೀಲಿಸಿ ಪಟ್ಟಿ ಮಾಡಿ ಮ್ಯೂಸಿಯಂಗೆ ಸ್ಥಳಾಂತರಿಸಿ ಜೋಡಿಸಿ ಇಟ್ಟಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ‘ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯವರು ನಂತರ ಅದರ ನಿರ್ವಹಣೆಗೆ ಗಮನ ಕೊಡಲಿಲ್ಲ. ಲೋಕೋಪಯೋಗಿ ಇಲಾಖೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ನಡುವಿನ ತಿಕ್ಕಾಟದಲ್ಲಿ ಮ್ಯೂಸಿಯಂ ಅನಾಥವಾಗಿದೆ‘ ಎಂದು ಖೇದ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT