ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka assembly election | 224 ಕ್ಷೇತ್ರಗಳಲ್ಲೂ ಎಎಪಿ ಸ್ಪರ್ಧೆ: ರಾವ್

ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್
Last Updated 10 ಜನವರಿ 2023, 5:44 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ತಿಳಿಸಿದರು.

‘10 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವು ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಉತ್ತಮ ಆಡಳಿತವನ್ನೂ ನೀಡುತ್ತಿರುವುದರಿಂದ ಜನರ ವಿಶ್ವಾಸಗಳಿಸಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗುಜರಾತ್, ಗೋವಾ ರಾಜ್ಯದ ಚುನಾವಣೆಯಲ್ಲೂ ನಮ್ಮ ಪಕ್ಷ ಖಾತೆ ತೆರೆದಿದೆ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿ ಇತರೆ ಚುನಾವಣೆಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಕರ್ನಾಟಕ ಸೇರಿ ಮುಂಬರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಸ್ಪರ್ಧಿಸಲಿದೆ’ ಎಂದರು.

‘ರಾಜ್ಯದಲ್ಲಿ ರಾಜಕೀಯ ನಾಯಕರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪಕ್ಷ ಕೀಳುಮಟ್ಟದ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗ ಬಂದಿರುವುದರಿಂದ ಇಳುವರಿ ಕಡಿಮೆಯಾಗಿ ಉತ್ತಮ ಬೆಲೆ ಸಿಗುತ್ತಿಲ್ಲ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ರಚಿಸಿರುವ ಟಾಸ್ಕ್‌ಫೋರ್ಸ್ ಸಮಿತಿ ಚುರುಕಾಗಬೇಕು. ಅದರ ಅಧ್ಯಕ್ಷರಾದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆಗೆ ಉತ್ತಮ ಬೆಲೆ ಸಿಗಲು ಪ್ರಯತ್ನಿಸಬೇಕು’ ಎಂದರು.

‘ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ತಿನಲ್ಲಿ ಅಡಿಕೆಗೆ ಎಲೆಚುಕ್ಕೆ ರೋಗ ಬಂದಿರುವ ಬಗ್ಗೆ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಆದರೆ ಶಾಸಕರು ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರಾಗುವುದರ ಬದಲು ಸಂಸದರೊಬ್ಬರು ಅಧ್ಯಕ್ಷರಾದರೆ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರೂ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಶಿವಮೊಗ್ಗದ ಜನ ಶಾಂತಿ ಬಯಸುತ್ತಾರೆ. ಕೋಮುಗಲಭೆ ನಿಂತರೆ ಮಾತ್ರ ಶಿವಮೊಗ್ಗದ ಪ್ರಗತಿ ಸಾಧ್ಯ. ರಾಜಕೀಯ ನಾಯಕರು ಜವಾಬ್ದಾರಿಯಿಂದ ಮಾತನಾಡಬೇಕು’ ಎಂದರು.

‘ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಪ್ರಬಲ ಮುಖ್ಯಮಂತ್ರಿಯ ಅವಶ್ಯಕತೆಯಿದೆ. ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತರಹ ಇದ್ದರೆ ಕೋಮುಗಲಭೆಯನ್ನು ಮಟ್ಟ ಹಾಕಬಹುದು’ ಎಂದು ಹೇಳಿದರು.

ಆಮ್ ಆದ್ಮಿಯಲ್ಲಿ ಹಲವರು ಆಕಾಂಕ್ಷಿಗಳಿದ್ದಾರೆ ಎಂಬ ಪ್ರಶ್ನೆಗೆ, ‘ಪಕ್ಷದಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮ ಮತ್ತು ಸರ್ವೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಪಕ್ಷವು ನಿರ್ಧಾರ ಮಾಡಿದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸುತ್ತಾರೆ’ ಎಂದರು.

ಪಕ್ಷದ ಸ್ಪರ್ಧಾಕಾಂಕ್ಷಿ ನೇತ್ರಾವತಿ, ಸುರೇಶ್ ಕೋಟೆಕಾರ್, ರವಿಕುಮಾರ್‌, ಅಲ್ಪಸಂಖ್ಯಾತ ಹಾಗೂ ಮಹಿಳಾ, ಯುವ ಘಟಕದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT