ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | BJP ಅಭ್ಯರ್ಥಿ ಆಯ್ಕೆಗೆ ಆಂತರಿಕ ಚುನಾವಣೆ

ಬಿಜೆಪಿ: ಶುಭಶ್ರೀ ಕಲ್ಯಾಣಮಂಟಪದಲ್ಲಿ ಏಳು ಕ್ಷೇತ್ರಗಳ ಅಭ್ಯರ್ಥಿ ಪರ ಮತದಾನ
Last Updated 1 ಏಪ್ರಿಲ್ 2023, 6:13 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಬಿಜೆಪಿ ಆಂತರಿಕ ಚುನಾವಣೆಗೆ ಮುಂದಾಗಿದೆ. ಶುಕ್ರವಾರ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಶಿವಮೊಗ್ಗದ ಪೇಸ್‌ ಕಾಲೇಜು ಹಿಂಭಾಗದಲ್ಲಿನ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪರ ರಹಸ್ಯ ಮತದಾನ ನಡೆಯಿತು.

ಪ್ರತಿ ಕ್ಷೇತ್ರದಿಂದ ತಲಾ 150 ಮಂದಿ ಮತದಾನ ಮಾಡಿದ್ದಾರೆ. ಇದರಲ್ಲಿ ಆಯಾ ವಿಧಾನಸಭಾ ಕ್ಷೇತ್ರದಲ್ಲಿನ ಪಕ್ಷದ ಪ್ರಮುಖ ಕಾರ್ಯಕರ್ತರು, ವಾರ್ಡ್‌ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯರು, ಮೋರ್ಚಾಗಳ ಮುಖ್ಯಸ್ಥರು ಹಾಗೂ ಉಸ್ತುವಾರಿಗಳು ಒಳಗೊಂಡಿದ್ದಾರೆ.

ಮುಂಜಾನೆ 7.30ರಿಂದ ಮತದಾನ ಪ್ರಕ್ರಿಯೆ ನಡೆದಿದ್ದು, ಕಾರ್ಯಕರ್ತರು ಉಪಾಹಾರ ಸೇವಿಸಿ ನಂತರ ಮತ ಹಾಕಿ ತೆರಳಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿಯ ಮಹೇಶ ಟೆಂಗಿನಕಾಯಿ ಅವರ ಉಸ್ತುವಾರಿಯಲ್ಲಿ ಮತದಾನ ನಡೆಯಿತು. ಸಂಜೆ ಮತಪೆಟ್ಟಿಗೆಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು.

‘ಇಂತಹವರೇ ಆಗಬೇಕು ಎಂದು ಪಟ್ಟಿಕೊಟ್ಟಿರಲಿಲ್ಲ, ಬದಲಿಗೆ ನಮಗೆ ಇಷ್ಟವಿರುವ ಮೂವರ ಹೆಸರನ್ನು ಮೊದಲು, ಎರಡನೇ ಹಾಗೂ ಮೂರನೇ ಪ್ರಾಶಸ್ತ್ಯದಲ್ಲಿ ಹೆಸರು ಬರೆದು ಮತಪೆಟ್ಟಿಗೆಗೆ ಹಾಕಬೇಕಿತ್ತು. ನಾವು ಕೂಡ ಅಪೇಕ್ಷಿತರು ಎಂದು ನಮ್ಮ ಹೆಸರನ್ನು ಬರೆಯಬಹುದಿತ್ತು’ ಎಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರೊಬ್ಬರು ಹೇಳಿದರು.

‘ಮತ ಪತ್ರದಲ್ಲಿ ಯಾರ ಹೆಸರು ಬರೆದಿದ್ದೇವೆ ಎಂಬುದನ್ನು ಬೇರೆಯವರಿಗೆ ತೋರಿಸಲು, ಫೊಟೊ ತೆಗೆಯಲು ಅವಕಾಶ ಇರಲಿಲ್ಲ. ಮೊಬೈಲ್‌ಫೋನ್ ಸ್ವಿಚ್ಡ್ ಆಫ್ ಮಾಡಿಕೊಳ್ಳಲು ಹೇಳಲಾಗಿತ್ತು. ಇಡೀ ಪ್ರಕ್ರಿಯೆ ಬಹಳಷ್ಟು ರಹಸ್ಯವಾಗಿ ನಡೆಯಿತು. ಸಂಜೆ ಮತಪೆಟ್ಟಿಗೆಗಳನ್ನು ಬೆಂಗಳೂರಿಗೆ ಕೊಂಡೊಯ್ದುರು’ ಎಂದು ತಿಳಿಸಿದರು.

ಇದು ಕರ್ನಾಟಕ ಮಾದರಿ: ಟೆಂಗಿನಕಾಯಿ

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಪಕ್ಷದಿಂದ 11 ಮಾನದಂಡಗಳನ್ನು ರೂಪಿಸಿದ್ದೇವೆ. ಅದರಲ್ಲಿ ಆಂತರಿಕ ಚುನಾವಣೆ ಕೂಡ ಒಂದು ಎಂದು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಅಭ್ಯರ್ಥಿ ಆಯ್ಕೆಗೆ ಸರ್ವೆ ವರದಿ, ಜಿಲ್ಲಾ ಕೋರ್‌ಕಮಿಟಿ, ಮಂಡಲ್‌ ಕೋರ್‌ ಕಮಿಟಿಯ ಅಭಿಪ್ರಾಯಗಳು ಮಾನದಂಡ ಆಗಲಿವೆ. ಇದು ನೇರವಾಗಿ ಕಾರ್ಯಕರ್ತರೊಡನೆ ನಡೆಸಿದ ಸಂಪರ್ಕ. ನಾಲ್ಕರಿಂದ ಆರು ಬೂತ್ ನೋಡಿಕೊಳ್ಳುವ ಕಾರ್ಯಕರ್ತರು ಈ ಸಂಪರ್ಕದಲ್ಲಿ ಜೋಡಣೆಯಾಗಿದ್ದರು ಎಂದರು.

ಪಕ್ಷದ ಕಾರ್ಯಕರ್ತರೇ ಅಂತಿಮ ಎಂಬ ಅಶಯಕ್ಕೆ ಅನುಗುಣವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದೆವು. ಅವರ ಭಾವನೆಗಳಿಗೂ ಬೆಲೆಕೊಟ್ಟಿದ್ದೇವೆ. ಇದು ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ದ್ಯೋತಕ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯಲ್ಲಿ ಮಾದರಿ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

****

ಶಕ್ತಿ ಕೇಂದ್ರ ಮೇಲ್ಪಟ್ಟವರೆಲ್ಲ ಮತದಾನಕ್ಕೆ ಅಪೇಕ್ಷಿತರಾಗಿದ್ದರು. ಕಾರ್ಯಕರ್ತರು ಇದರಿಂದ ಬಹಳ ಖುಷಿ ಆಗಿದ್ದಾರೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

- ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT