ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್ ವರದಿ, ಜನಪ್ರತಿನಿಧಿಗಳಿಂದಲೇ ತಪ್ಪು ಮಾಹಿತಿ: ಅಖಿಲೇಶ್ ಚಿಪ್ಪಳಿ

ಕಸ್ತೂರಿರಂಗನ್ ವರದಿ ಜನರ ಬದುಕಿಗೆ ಉರುಳು: ಪ್ರಜಾವಾಣಿ ಸಂವಾದದಲ್ಲಿ ಶಾಸಕ ರಾಜೇಗೌಡ
Last Updated 11 ಜನವರಿ 2021, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕಸ್ತೂರಿರಂಗನ್ ವರದಿ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ಜನಪ್ರತಿನಿಧಿಗಳೇ ಮಾಡಿಕೊಂಡು ಬಂದಿದ್ದಾರೆ ಎಂದು ಪರಿಸರವಾದಿ ಅಖಿಲೇಶ್ ಚಿಪ್ಪಳಿ ಆರೋಪಿಸಿದರೆ, ಯಾವುದೇ ಯೋಜನೆ ಜನರ ಬದುಕಿಗೆ ಉರುಳಾಗಲು ಅವಕಾಶ ನೀಡುವುದಿಲ್ಲ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಸವಾಲು ಎಸೆದರು.

‘ಕಸ್ತೂರಿರಂಗನ್ ವರದಿ ಏಕೆ ಬೇಕು?’ ವಿಷಯ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಫೇಸ್‌ ಬುಕ್‌ ಸಂವಾದದಲ್ಲಿ ವರದಿಯ ಪರ–ವಿರುದ್ಧ ಚರ್ಚೆ ನಡೆಸಿದರು.

ಪಶ್ಚಿಮಘಟ್ಟ ವ್ಯಾಪ್ತಿಯ ಅರಣ್ಯ ಸಂರಕ್ಷಣೆಗೆ ಈಗಾಗಲೇ ಸಾಕಷ್ಟು ಕಾನೂನುಗಳು ಜಾರಿಯಾಗಿವೆ. ಹಲವು ನಿರ್ಬಂಧಗಳ ಮಧ್ಯೆಯೂ ಕಾಡು, ಪ್ರಾಣಿಗಳ ಜತೆ ಜನರು ಬದುಕು ಕಟ್ಟಿಕೊಂಡಿದ್ದಾರೆ.ಇಷ್ಟು ವರ್ಷಗಳು ಜನರೇ ಅರಣ್ಯ ಸಂರಕ್ಷಣೆ ಮಾಡಿದ್ದಾರೆ. ಮತ್ತೆ ಹೊಸ ನಿಯಮಗಳ ಅಗತ್ಯವೇ ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸಿಸುತ್ತಿರುವ ಗುಡ್ಡ ಗಾಡು ಜನರ ಬವಣೆ ಇಂದಿಗೂ ನೀಗಿಲ್ಲ. ಅಂದು ಘೋಷಣೆ ಮಾಡುವಾಗ ಮೂಲಸೌಕರ್ಯಗಳಿಗೆ ತೊಂದರೆ ಮಾಡುವುದಿಲ್ಲ ಎಂಬ ಭರವಸೆ ನೀಡಲಾಗಿತ್ತು. ಇಂದು ಕಾಡಿನ ಉತ್ಪನ್ನ ಸಂಗ್ರಹಿಸಲೂ ಬಿಡುತ್ತಿಲ್ಲ. ಅವರ ಬದುಕು ದುಸ್ತರವಾಗಿದೆ. ಇಂತಹ ಸ್ಥಿತಿ ರಾಜ್ಯದ 1,576 ಹಳ್ಳಿಗಳ ಜನರು ಅನುಭವಿಸಬೇಕೇ ಎಂದು ರಾಜೇಗೌಡ ಪ್ರಶ್ನಿಸಿದರು.

ಭೌತಿಕ ಪರಿಶೀಲನೆ ನಡೆಸದೇ, ವೈಮಾನಿಕ ಸರ್ವೆ ಮೂಲಕ ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಲಾಗಿದೆ. ಹಸಿರು ಕಂಡ ಅಡಿಕೆ, ಕಾಫಿ ತೋಟಗಳನ್ನೂ ಅರಣ್ಯ ಭೂಮಿ ಎಂದು ಗುರುತಿಸಲಾಗಿದೆ. ಹಲವು ನಿರ್ಬಂಧ ಗಳನ್ನು ಹಾಕಲಾಗಿದೆ. ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಚುನಾ ವಣೆಗಳನ್ನೂ ಬಹಿಷ್ಕರಿಸಿದ್ದಾರೆ. ಜನರಿಗೆ ವಿರುದ್ಧವಾದ ಯಾವುದೇ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದರು.

‘ದೊಡ್ಡ ಪ್ರಮಾಣದ ಗಣಿಗಾರಿಕೆ, ಬೃಹತ್ ಜಲಾಶಯಗಳಿಗೆ ನಮ್ಮ ವಿರೋ ಧವಿದೆ. ಆದರೆ, ಜನರ ನಿತ್ಯದ ಬದುಕಿಗೆ ತೊಂದರೆಯಾಗಲು ಬಿಡುವುದಿಲ್ಲ. ಶ್ರೀಮಂತರು ಬೆರಳೆಣಿಕೆಯಷ್ಟು ಇದ್ದಾರೆ. ಬಡವರ ಸಂಖ್ಯೆಯೇ ಹೆಚ್ಚು. ಅವರಿಗೆ ತೊಂದರೆಯಾಗಬಾರದು’ ಎಂದರು.

ಕಸ್ತೂರಿರಂಗನ್‌ ವರದಿ ಪರಿಸರ, ಜೀವವೈವಿಧ್ಯ, ಅಲ್ಲಿನ ಜನರ ಬದುಕಿಗೆ ಪೂರಕವಾಗಿದೆ. ದೊಡ್ಡ ಕೈಗಾರಿಕೆಗಳು, ಗಣಿಗಾರಿಕೆ, ಬೃಹತ್ ಜಲಾಶಯಗಳಿಗೆ ನಿರ್ಬಂಧವಿದೆ. 20 ಸಾವಿರ ಚದುರ ಮೀಟರ್‌ಗಿಂತ ಮಿಗಿಲಾದ ಮನೆ ಕಟ್ಟಲು ಅನುಮತಿ ಇಲ್ಲ. ಮಧ್ಯಮ ವರ್ಗ, ಶ್ರೀಮಂತರಾದರೂ ಭಾರಿ ಎಂದರೆ ಮೂರು ಸಾವಿರ ಚದರ ಮೀಟರ್ ಮನೆ ಕಟ್ಟಬಹುದು. ಕಿತ್ತಳೆ ವಲಯದ ಕೈಗಾರಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ. ಎಲ್ಲೂ ರಸ್ತೆ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳಿಗೆ ತೊಂದರೆ ಮಾಡುವುದಿಲ್ಲ. ಹೊಸ ರಸ್ತೆ, ಕಟ್ಟಡಗಳಿಗೆ ಸ್ಥಳೀಯ ಪಂಚಾ ಯಿತಿಗಳಿಂದ ಅನುಮತಿ ಪಡೆಯಬೇಕು ಅಷ್ಟೆ. ರಾಜಕಾರಣಿಗಳು ವರದಿ ಸರಿ ಯಾಗಿ ಓದದೇ ಮತಗಳಿಕೆಗಾಗಿ ಜನರ ದಿಕ್ಕು ತಪ್ಪಿಸುತ್ತಾರೆ. ಸುಳ್ಳುಗಳನ್ನು ಹೇಳುತ್ತಾರೆ ಎಂದು ಅಖಿಲೇಶ್ ಚಿಪ್ಪಳಿ ಕಿಡಿಕಾಡಿದರು.

ಈಗಾಗಲೇ ಹಲವು ಯೋಜನೆ ಗಳಿಗೆ, ಕೃಷಿಗಾಗಿ ಸಾಕಷ್ಟು ಅರಣ್ಯ ನಾಶವಾಗಿದೆ. ಇರುವ ಅರಣ್ಯ ಉಳಿಸಿ ಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವರದಿ ವಿರೋಧಿಸಿದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೇ ಪರಿಸರ ಅಸಮತೋಲನದ ಪರಿಣಾಮ ಮಳೆಯಲ್ಲಿ ವ್ಯತ್ಯಾಸವಾಗಿದೆ. ಅಂತರ್ಜಲಮಟ್ಟ ಕುಸಿದಿದೆ. ಶುದ್ಧ ಗಾಳಿಗೂ ಕೊರತೆ ಇದೆ. ಪ್ರಾಣಿಗಳು ನಾಡಿಗೆ ಬರುತ್ತಿವೆ. ಅಕೇಶಿಯಾ ನೆಡು ತೋಪುಗಳು ಬದುಕಿಗೆ ಮಾರಕವಾಗಿವೆ. ಇವೆಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಜೀವ ವೈವಿಧ್ಯ ಕಾಪಾಡಲು ಕಸ್ತೂರಿರಂಗನ್ ವರದಿ ಜಾರಿಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಜನರ ಬದುಕಿಗೆ ತೊಂದರೆ ಯಾಗದಂತೆ ಅರಣ್ಯ ಸಂರಕ್ಷಣೆಗೆ ವಿರೋಧವಿಲ್ಲ. ರಸ್ತೆ, ನೀರು, ಚರಂಡಿ ಮತ್ತಿತರ ಸೌಕರ್ಯಕ್ಕೆ ಅಡ್ಡಿ ಮಾಡಿದರೆ ಸಹಿಸುವುದಿಲ್ಲ ಎಂದು ರಾಜೇಗೌಡ ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT