ಗುರುವಾರ , ಜನವರಿ 28, 2021
25 °C
ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಳವಳ

ಶುದ್ಧೀಕರಿಸದೇ ನದಿಯಿಂದ ನೇರವಾಗಿ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತುಂಗಾ ನದಿ ತೀರದ ಹಲವು ಗ್ರಾಮಗಳಿಗೆ ಶುದ್ಧೀಕರಣ ಮಾಡದೆ ನದಿಯಿಂದ ನೇರವಾಗಿ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ನೀರು ಬತ್ತಿದಾಗ ಕೆಲವು ಭಾಗಗಳಲ್ಲಿ ಮೀನುಗಳಿಗೆ ಹಾಕುವ ವಿಷ ನೀರಿನ ಮೂಲಕ ಮನೆಗಳಿಗೂ ತಲುಪುತ್ತದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಕ್ಷೇತ್ರದ ಹಲವು ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ಬೇಸಿಗೆ ಸಮಯದಲ್ಲಿ ಜನರು ಸಾಕಷ್ಟು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೇರವಾಗಿ ನದಿಯಿಂದ ಕೊಳವೆಗಳ ಮೂಲಕ ನೀರು ಹರಿಸುತ್ತಿರುವ ಪರಿಣಾಮ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ತಕ್ಷಣ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕರ ಅಳಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಗ್ರಾಮಗಳಿಗೆ ನೀರು ಪೂರೈಸುವ ಮೊದಲು ಶುದ್ಧೀಕರಣ ಘಟಕ ಅಳವಡಿಸಬೇಕು. ಗಾಜನೂರು, ಹೊಸಳ್ಳಿ ಗ್ರಾಮಗಳಿಗೆ ಪ್ರತ್ಯೇಕ ಪೈಪ್‌ಲೈನ್, ಮತ್ತೂರು ಗ್ರಾಮಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರೋತ್ಥಾನ ಯೋಜನೆಯಲ್ಲಿ ಶಿರಾಳಕೊಪ್ಪದಲ್ಲಿ ₹ 1.25 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶಿಕಾರಿಪುರದಲ್ಲಿ ಹೊಸ ಟ್ಯಾಂಕ್ ನಿರ್ಮಾಣ ಮುಗಿದಿದೆ. ಸಾಗರದಲ್ಲಿ ಕೈಗೊಳ್ಳಲಾದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಭದ್ರಾವತಿಯಲ್ಲಿ 11 ಸಾವಿರ ಮನೆಗಳಿಗೆ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ಫೆಬ್ರುವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಾಸ್ಟೆಲ್‌ಗಳ ಆರಂಭಕ್ಕೆ ಕ್ರಮ

ಕಾಲೇಜುಗಳು ಆರಂಭವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದಿದ್ದರೆ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಆರಂಭಕ್ಕೆ ಸಿದ್ದತೆ ಮಾಡಿಕೊಳ್ಳಬೇಕು ಎಂದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು, ಅಂತಿಮ ಪದವಿ, ಅಂತಿಮ ಸ್ನಾತಕೋತ್ತರ ಪದವಿ ಹಾಸ್ಟೆಲ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. 65 ಹಾಸ್ಟೆಲ್‌ಗಳಲ್ಲಿ 2,350 ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬಂದಿದ್ದಾರೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಬಿಸಿಎಂ ಹಾಸ್ಟೆಲ್‌ಗಳಿಗೆ ಪೀಠೋಪಕರಣ ನೀಡಬೇಕು. ಹಾಸ್ಟೆಲ್ ಕಟ್ಟಡಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಂದ ತುರ್ತು ಪ್ರಸ್ತಾವ ಪಡೆಯಬೇಕು ಎಂದು ಕೋರಿದರು.

ಮನೆ ಕಟ್ಟಿಕೊಳ್ಳದಿದ್ದರೆ ಆಯ್ಕೆ ರದ್ದು:

ಆಶ್ರಯ ಮನೆ ಮಂಜೂರಾಗಿ ಇದುವರೆಗೂ ಮನೆ ಕಟ್ಟಿಕೊಳ್ಳದ ಫಲಾನುಭವಿಗಳ ಹೆಸರು ರದ್ದು ಮಾಡಬೇಕು. ಅಂತಹ ಫಲಾನುಭವಿಗಳಿಂದ ಪತ್ರ ಬರೆಸಿಕೊಳ್ಳಬೇಕು. ಕ್ರಮ ಕೈಗೊಳ್ಳಬೇಕು. ನಗರ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿ+2 ಮಾದರಿ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಕ್ರಿಯೆಯ ಹಂತದಲ್ಲೇ ಇದೆ. ಮನೆಗಳ ತ್ವರಿತ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಶಾಸಕ ಹಾಲಪ್ಪ ಎಚ್‌.ಹರತಾಳು ಮಾತನಾಡಿ, ಬಹುಳಷ್ಟು ಅಂಗನವಾಡಿಗಳಿಗೆ ಕಾಂಪೌಂಡ್‌ ಇಲ್ಲ. ಎನ್‌ಆರ್‌ಇಜಿ ಯೋಜನೆ ಅಡಿಯಲ್ಲಿ ಕಂಪೌಂಡ್ ನಿರ್ಮಿಸುವಂತೆ ಮನವಿ ಮಾಡಿದರು.

ಕಾಂಪೌಂಡ್ ಇಲ್ಲದ 549 ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಿಸಲು ಮುಂದಿನ ತ್ರೈಮಾಸಿಕ ಸಭೆಯೊಳಗೆ ಪ್ರಸ್ತಾವ ಸಲ್ಲಿಸುವಂತೆ ಈಶ್ವರಪ್ಪ ಸೂಚಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.