ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಮಂಜುನಾಥ ಗೌಡರ ವಿರುದ್ಧ ಕಿಮ್ಮನೆ ರತ್ನಾಕರ ಬಹಿರಂಗ ಪತ್ರ

ಮತ್ತೆ ಬೀದಿಗೆ ಬಿದ್ದ ಕಾಂಗ್ರೆಸ್ ಒಳಜಗಳ
Last Updated 25 ಸೆಪ್ಟೆಂಬರ್ 2021, 4:55 IST
ಅಕ್ಷರ ಗಾತ್ರ

ಶಿವಮೊಗ್ಗ: ಜೆಡಿಎಸ್‌ ತೊರೆದು ಈಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡರ ವಿರುದ್ಧ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಬಹಿರಂಗ ಪತ್ರ ಬರೆದು ಕಿಡಿಕಾರಿದ್ದಾರೆ.

‘ಪಕ್ಷಕ್ಕೆ ಸೇರಿದ ದಿನದಿಂದಲೂ ಗುಂಪುಗಾರಿಕೆ ಮಾಡುತ್ತಿದ್ದಾರೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಘಟಕ ಕಡೆಗಣಿಸಿ, ಪಕ್ಷಕ್ಕಾಗಿ ಹತ್ತಾರು ವರ್ಷ ದುಡಿದವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡರ ಭಾವಚಿತ್ರಗಳನ್ನು ಬಳಸಿಕೊಂಡು ಖಾಸಗಿ ಸಭೆ, ಸಮಾರಂಭ, ಪಾದಯಾತ್ರೆ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಭಾಗವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಭಾಗವಹಿಸದ ಸ್ಥಳೀಯ ಮುಖಂಡರಿಗೆ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳ ಟಿಕೆಟ್‌ ತಪ್ಪಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ’ ಎಂದು ಆರೋಪಿಸಿದ್ದಾರೆ.

ಹಣ, ಸಾರಾಯಿ, ಬಿರಿಯಾನಿ, ರೌಡಿಸಂ ಮೂಲಕ ತೀರ್ಥಹಳ್ಳಿ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಲು ಸಾಧ್ಯವಿಲ್ಲ. ಹಣ, ಸಾರಾಯಿ ಖಾಲಿಯಾದಂತೆ ಜನಪ್ರಿಯತೆಯೂ ಖಾಲಿಯಾಗುತ್ತದೆ ಎಂದು ಕುಟುಕಿದ್ದಾರೆ.

‘ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕಲ್ಲುಕೊಪ್ಪ–ಕರಕುಚ್ಚಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಕ್ಷದ ಚಿಹ್ನೆ ಬಳಸಿಲ್ಲ. ಈ ಸಮಸ್ಯೆಗಳ ಕುರಿತು ಹಿಂದೆ ಕಾಗೋಡು ತಿಮ್ಮಪ್ಪ ಹಾಗೂ ತಾವು ಹಲವು ಹೋರಾಟ ನಡೆಸಿದ್ದೇವೆ. ಸಮಸ್ಯೆಗೆ ಪರಿಹಾರ ಒದಗಿಸಿದ್ದೇವೆ. ಹಿಂದೆ ಈ ಸಮಸ್ಯೆ ಕುರಿತು ಏಕೆ ಹೋರಾಟ ಮಾಡಲಿಲ್ಲ. ಈ ಹೋರಾಟ ಮುಂದಿನ ವಿಧಾನಸಭಾ ಚುನಾವಣೆಗಾಗಿ ಎನ್ನುವುದು ಯಾರಿಗಾದರೂ ತಿಳಿಯುತ್ತದೆ. ಹಿಂದೆ ಅವರ ಗುರುಗಳೇ ಮುಖ್ಯಮಂತ್ರಿಗಳಾದರೂ ಸಮಸ್ಯೆ ಏಕೆ ಬಗೆಹರಿಸಲಿಲ್ಲ. ಜೆಡಿಎಸ್‌ಜಿಲ್ಲಾ ಘಟಕದ ಅಧ್ಯಕ್ಷರಾದಾಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಅವರ ಗಮನಕ್ಕೆ ಏಕೆ ತರಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಪಕ್ಷದ ಮುಖಂಡರಲ್ಲಿ ಗೊಂದಲ ಸೃಷ್ಟಿಸಿ, ಇಕ್ಕಟ್ಟಿನಲ್ಲಿ ಸಿಲುಕಿಸಿ, ಡಿಸಿಸಿ ಬ್ಯಾಂಕ್‌ನಲ್ಲಿ ಮಾಡಿದ ಹಾಗೆ ಕಾಂಗ್ರೆಸ್‌ನಲ್ಲಿ ಮಾಡದೆ ಇರುವುದು ಅವರಿಗೂ, ಪಕ್ಷಕ್ಕೂ ಒಳ್ಳೆಯದು. ನಿಮ್ಮ ಹತ್ತಿರ ಹಣ ಇದೆ, ಬಂಗಾರವಿದೆ. ಮೊದಲು ಸರ್ಕಾರಕ್ಕೆ ಕಟ್ಟಬೇಕಾದ ₹ 122 ಕೋಟಿ ಕಟ್ಟಿ. ಸಹಕಾರ ಇಲಾಖೆ ಹೂಡಿರುವ ಅಪಾದನೆಯಿಂದ ಹೊರಬನ್ನಿ. ಆ ಮೇಲೆ ಯಾವ ಪಕ್ಷದ ಟಿಕೆಟ್‌ ಸಿಗುತ್ತದೆಯೋ ಅಲ್ಲಿಂದ ನಿಲ್ಲಿ. ಎಲ್ಲಿಗೆ ಹೋದರೂ ಟಿಕೆಟ್‌ ಕೇಳುವ ಆರ್ಥಿಕ ಸಾಮರ್ಥ್ಯ ನಿಮಗಿದೆ. ಆ ಶಕ್ತಿಯನ್ನು ನಿಮಗೆ ದೇವರು ಹಾಗೂ ಡಿಸಿಸಿ ಬ್ಯಾಂಕ್‌ ನೀಡಿದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅ.2ರ ಗಾಂಧಿ ಜಯಂತಿ ದಿನ ‘ಗ್ರಾಮ ಸ್ವರಾಜ್‌’ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಇದ್ದಾಗ ಅವರಿಗೆ ಗೊತ್ತಿಲ್ಲದಂತೆ ಕಸ್ತೂರ ಬಾ ಅವರು ತಮ್ಮ ತಂದೆ, ತಾಯಿ ಸ್ವಲ್ಪ ಹಣ ಡಬ್ಬಿಯಲ್ಲಿ ಇಟ್ಟಿದ್ದಕ್ಕೆ ಮೂರು ದಿನಗಳು ಸ್ವತಃ ಉಪವಾಸದ ಶಿಕ್ಷೆ ಅನುಭವಿಸಿದ್ದರು. ಡಿಸಿಸಿ ಬ್ಯಾಂಕ್‌ ಹಗರಣ ಕಟ್ಟಿಕೊಂಡ ನಿಮ್ಮ ಜತೆ ಕುಳಿತು ಗಾಂಧೀಜಿ ಅವರ ಚಿಂತನೆ, ಗ್ರಾಮ ಸ್ವರಾಜ್‌ ಕುರಿತು ಯಾರಿಗೆ ಹೇಳುವುದು’ ಎಂದು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT