ಸೋಮವಾರ, ಡಿಸೆಂಬರ್ 5, 2022
19 °C
‘ಶಾಸಕರಾಗಿ 25 ವರ್ಷ ಕಳೆದರೂ ರಾಜಕೀಯ ದಾಹಕ್ಕೆ ಗಲಭೆ ಸೃಷ್ಟಿ‘

ಕೋಮು ಗಲಭೆ ಹುಟ್ಟುಹಾಕಿದ್ದೇ ಈಶ್ವರಪ್ಪ ಸಾಧನೆ: ಸುಂದರೇಶ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಶಾಸಕ ಕೆ.ಎಸ್.ಈಶ್ವರಪ್ಪನವರ 25 ವರ್ಷಗಳ ರಾಜಕೀಯ ಬದುಕಿನಲ್ಲಿ ಬರೀ ಕೋಮುಗಲಭೆಗಳ ಹುಟ್ಟುಹಾಕಿದ್ದೇ ಸಾಧನೆ. ಶಾಸಕರ ರಾಜಕೀಯ ದಾಹಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲ ಧರ್ಮದ ಯುವಕರ ಕೊಲೆಗಳಾಗುತ್ತಿವೆ. ಇದಕ್ಕೆ ಕಾರಣ ಕಾಂಗ್ರೆಸ್ ಎಂದು ಈಶ್ವರಪ್ಪನವರು ಹೇಳುತ್ತಿರುವುದು ನೋಡಿದರೆ ಅವರಿಗೆ ನಾಚಿಕೆ ಆಗಬೇಕು. ಹರ್ಷನ ಕೊಲೆಯನ್ನೂ ರಾಜಕೀಯಗೊಳಿಸಿದರು. ಅದರ ಲಾಭ ಪಡೆದರು. ನಗರದಲ್ಲಿ ಗಲಾಟೆ ಎಬ್ಬಿಸಿದರು. ಜನಜೀವನ ಅಸ್ತವ್ಯಸ್ತ ಗೊಳಿಸಿದರು. ಇದೆಲ್ಲವೂ ಅವರ ಅಧಿಕಾರದ ಹಪಾಹಪಿತನದ ಫಲ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬ್ರಿಟೀಷರು, ಬಿಜೆಪಿಯವರ ಆಡಳಿತಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಡವರ ಹಣ ಕಸಿದು ಉಳ್ಳವರಿಗೆ ನೀಡಿ ದೇಶ ಕೊಳ್ಳೆ ಹೊಡೆದು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಅಭಿವೃದ್ಧಿಯನ್ನು ಇಟ್ಟುಕೊಂಡು ಮತ ಕೇಳುವುದನ್ನು ಬಿಟ್ಟು ಧರ್ಮ ಮುಂದಿಟ್ಟು ಕೊಂಡು ಅಧಿಕಾರಕ್ಕೆ ಬಂದು ಅಧರ್ಮದ ದಾರಿ ತುಳಿಯುತ್ತಿದ್ದಾರೆ. ಇನ್ನೇನು ನಗರದಲ್ಲಿ ಶಾಂತಿ ಸ್ಥಾಪನೆ ಆಗುತ್ತದೆ ಅಂದರೆ ಸಾಕು ಕೆಲಸಕ್ಕೆ ಬಾರದ ವಿಷಯ ಮುಂದಿಟ್ಟುಕೊಂಡು ಶಾಂತಿ ಕದಡುವಲ್ಲಿ ಈಶ್ವರಪ್ಪನವರದ್ದು ಎತ್ತಿದ ಕೈ. ಧರ್ಮಗಳ ನಡುವೆ ಬೆಂಕಿ ಹಚ್ಚುವುದು ಬಿಡಿ’ ಎಂದು ಕಿವಿಮಾತು ಹೇಳಿದರು.

ರೇಖಾ ರಂಗನಾಥ್, ಸಿ.ಎಸ್.ಚಂದ್ರಭೂಪಾಲ್, ಚಂದ್ರಶೇಖರ್, ಮುಜೀಬ್, ಚಂದನ್, ಖಲೀಂಪಾಷಾ, ಎನ್.ಡಿ. ಪ್ರವೀಣ್‌ಕುಮಾರ್ ಇದ್ದರು.

***

ಈಸೂರಿನಿಂದ ಹೋರಾಟಗಾರರ ಕುಟುಂಬದವರ ಕರೆಸಬಹುದಿತ್ತು
‘ಬಿಜೆಪಿಯವರಿಗೆ ಸಾವರ್ಕರ್ ಇಷ್ಟು ವರ್ಷ ಗೊತ್ತಿರಲಿಲ್ಲವೇ. ಈಗ ಅವರನ್ನು ವಿಜೃಂಭಿಸುವ ಅವಶ್ಯಕತೆಯಾದರೂ ಏನಿದೆ. ಸಾವರ್ಕರ್ ಮೊಮ್ಮಗನನ್ನು ಕರೆಯಿಸುವ ಅವಶ್ಯವಿತ್ತೇ. ಬೇರೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳು ಇರಲಿಲ್ಲವೇ’ ಎಂದು ಪ್ರಶ್ನಿಸಿದ ಸುಂದರೇಶ್‌, ‘ನಿಜವಾಗಿಯೂ ಈಶ್ವರಪ್ಪನವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪ್ರೀತಿ ಇದ್ದರೆ, ಶಿಕಾರಿಪುರ ತಾಲ್ಲೂಕಿನ ಈಸೂರಿಗೆ ಹೋಗಲಿ ಅಲ್ಲಿ ಹೋರಾಟಗಾರರ ವಂಶವೇ ಇದೆ’ ಎಂದು ಸಲಹೆ ನೀಡಿದರು.

ಯಡಿಯೂರಪ್ಪ ನೋಡಿ ಕಲಿಯಿರಿ
‘ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಈಶ್ವರಪ್ಪ ಕಲಿಯಬೇಕು. ಯಡಿಯೂರಪ್ಪ ಬಿಜೆಪಿಯವರೇ. ಆದರೆ ಧರ್ಮಗಳ ನಡುವೆ ಅವರು ಎಂದೂ ಶಾಂತಿ ಕದಡುವ ಮಾತುಗಳನ್ನು ಆಡುವುದಿಲ್ಲ. ಅಭಿವೃದ್ಧಿಗೆ ಶ್ರಮಿಸುತ್ತಾರೆ. ಆದರೆ, ಈ ಈಶ್ವರಪ್ಪ ಧರ್ಮವನ್ನು ಮೈಮೇಲೆ ಹೊತ್ತುಕೊಂಡಂತೆ ಆಡುತ್ತಾರೆ. ಅಧಿಕಾರಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾ 60 ವರ್ಷಕ್ಕೆ ಅರಳುಮರಳು ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು