ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರ ಹೇಗಿದ್ದೀಯೋ...? ಈಶ್ವರಪ್ಪರನ್ನು ಕಂಡು ಕಾಲೇಜು ಸ್ನೇಹಿತನ ಸಂತಸ

Last Updated 6 ಜೂನ್ 2022, 3:03 IST
ಅಕ್ಷರ ಗಾತ್ರ

ಭದ್ರಾವತಿ: ‘ಈಶ್ವರ ಹೇಗಿದ್ದೀಯೋ ನೋಡಲು ಖುಷಿ ಆಗುತ್ತದೆ...’ ಎಂದು 74ರ ಹರೆಯದ ಜನ್ನಾಪುರ ಗುರುರಾಜ ಅವರು ಶಾಸಕ ಕೆ.ಎಸ್.ಈಶ್ವರಪ್ಪ ಅವರನ್ನು ಅಪ್ಪಿಕೊಂಡು ಮಾತನಾಡಿಸಿದ ಭಾವುಕ ಕ್ಷಣಗಳನ್ನು ಕಂಡು ಅಲ್ಲಿದ್ದವರು ಬೆರಗಾದರು.

ತಮ್ಮ ಸ್ನೇಹಿತ ಗುರುರಾಜ ಅವರನ್ನು ನೋಡುವುದಕ್ಕಾಗಿ ಶಿವಮೊಗ್ಗದಿಂದ ಮನೆ ಹುಡುಕಿಕೊಂಡು ಬಂದ ಈಶ್ವರಪ್ಪ ಅವರನ್ನು ಗುರುರಾಜ ಸ್ವಾಗತಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ತಬ್ಬಿಕೊಂಡು ಹಳೆಯ ನೆನಪುಗಳ ಸರಮಾಲೆ ತೆರೆದಿಟ್ಟರು.

‘ಪಿಯುಸಿ, ಡಿಗ್ರಿ ಒಟ್ಟಾಗಿ ಮಾಡಿದ್ದು, ಪ್ರತಿದಿನ ಮಂಜುನಾಥ ಟಾಕೀಸ್ ಬಳಿ ಹೋಗಿ ಟೀ, ಕಾಫಿ ಕುಡಿಯುತ್ತಿದ್ದ ನೆನಪು ಮೆರಯಲು ಸಾಧ್ಯವಾ?, ಅನೇಕ ಬಾರಿ ನಮಗೆ ತಿಂಡಿ, ಊಟ ಹಾಕಿಸಿ ಬೆಳೆಸಿದ ದೊಡ್ಡ ವ್ಯಕ್ತಿ’ ಎಂದು ಗುರುರಾಜ ಹಳೆಯ ದಿನದ ನೆನಪು ಮಾಡುತ್ತಿದ್ದರೆ ಈಶ್ವರಪ್ಪ ಮುಖದಲ್ಲಿ ಭಾವುಕತೆ ಉಕ್ಕುತ್ತಿತ್ತು.

‘ಇವರೆಲ್ಲ ನನ್ನನ್ನು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲ್ಲಿಸಿ ಮನೆಗೆ ಹೋಗುತ್ತಿದ್ದರು. ಅನಂತರ ಸೋತವರು ಬಂದು ನನಗೆ ಹೊಡೆದು ಬಟ್ಟೆಯೆಲ್ಲಾ ಹರಿದುಹಾಕಿ ಕಳಿಸುತ್ತಿದ್ದರು. ಇವರು ಮಾರನೆ ದಿನ ಸಿಕ್ಕಾಗ ಗೆಲ್ಲಿಸಿ ಹೋಗುತ್ತೀರಾ, ನನಗೆ ಪೆಟ್ಟು’ ಎಂದು ನಗುತ್ತಾ ಗುರುರಾಜ್ ಅವರ ಹೆಗಲ ಮೇಲೆ ಕೈಹಾಕಿ ಹಳೆ ನೆನಪು ತೆರೆದಿಟ್ಟರು.

‘ಆಗಿದ್ದ ಶ್ರೀನಿವಾಸಮೂರ್ತಿ ಪ್ರಾಂಶುಪಾಲರು ನಮಗೆ ಅಷ್ಟೇ ಮಟ್ಟಿನ ಸಹಕಾರ ನೀಡಿ, ಓದಿನ ಕಡೆ ಆಸಕ್ತಿ ವಹಿಸುವಂತೆ ಎಚ್ಚರಿಕೆ ನೀಡುತ್ತಿದ್ದರು. ಅವರು ಇದ್ದಷ್ಟು ದಿನ ನಾನು ಪ್ರತಿ ಬಾರಿ ನಾಮಪತ್ರ ಸಲ್ಲಿಸುವಾಗ ಅವರ ಬಳಿ ಹೋಗಿ ಆಶೀರ್ವಾದ ಪಡೆದು ಬರುತ್ತಿದ್ದೆ’ ಎಂದು ಈಶ್ವರಪ್ಪ ನೆನೆದರು.

ಬಹಳ ವರ್ಷಗಳ ನಂತರದ ಇವರಿಬ್ಬರ ಭೇಟಿಯಲ್ಲಿ ಕಾಂತೇಶ್, ಡಾ.ತೇಜಸ್ವಿ, ಜಿ.ಧರ್ಮಪ್ರಸಾದ್ ಉಪಸ್ಥಿತರಿದ್ದು ಹಳೆಯ ನೆನಪಿನ ಅನಾವರಣಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT