ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 2ನೇ ಅಲೆ ಎದುರಿಸಲು ಮೆಗ್ಗಾನ್‌ ಆಸ್ಪತ್ರೆ ಸಜ್ಜು

ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 17 ಏಪ್ರಿಲ್ 2021, 13:22 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳು, ಮಾನವ ಸಂಪನ್ಮೂಲ ಹಾಗೂ ಹಣಕಾಸು ವ್ಯವಸ್ಥೆ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೋವಿಡ್‌ ನಿಯಂತ್ರಣಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮೆಗ್ಗಾನ್‍ಗೆ ಹೆಚ್ಚುವರಿಯಾಗಿ ಅಗತ್ಯವಿರುವ 50 ಶುಶ್ರೂಷಕಿಯರು, ‘ಡಿ’ ಗ್ರೂಪ್ ನೌಕರರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಇರುವ ಆಮ್ಲಜನಕ ಪೂರೈಕೆ ಸೌಲಭ್ಯವಿರುವ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯಿಂದ ಹೆಚ್ಚುವರಿ ಅಂಬುಲೆನ್ಸ್ ನೀಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಸೆಪ್ಟಂಬರ್‌ನಲ್ಲಿ ಕೊರೊನಾ ಅತ್ಯಂತ ಹೆಚ್ಚಾಗಿದ್ದ ವೇಳೆ ರಚಿಸಲಾಗಿದ್ದ ವೈದ್ಯಕೀಯ ತಂಡಗಳನ್ನೇ ಈಗಲೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಳೆದ ಬಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕೊರೊನಾ ಸೋಂಕಿತರ ಪ್ರಾಥಮಿಕ ತಪಾಸಣೆ ನಡೆಸಲಾಗುತ್ತಿತ್ತು. ಪ್ರಸ್ತುತ ಮೆಗ್ಗಾನ್‍ನಲ್ಲಿ ಮಾಡಲಾಗುತ್ತಿದೆ. ದಿನದ 24 ಗಂಟೆಯೂ ಸೇವೆ ದೊರಕಲಿದೆ. ಮೆಗ್ಗಾನ್‍ನಲ್ಲಿ ಚಿಕಿತ್ಸೆ ಅಗತ್ಯವಿದ್ದವರನ್ನು ಮಾತ್ರ ದಾಖಲು ಮಾಡಲಾಗುವುದು ಉಳಿದವರಿಗೆ ಹೋಂ ಐಸೋಲೇಷನ್ ಮಾಡಲಾಗುವುದು. ಅಗತ್ಯ ಬಿದ್ದರೆ ಕರೋನಾ ಕೇರ್‌ಸೆಂಟರ್ ಆರಂಭಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಸಹ ದಾಖಲು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಪ್ರಸ್ತುತ ಮೆಗ್ಗಾನ್ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಪೈಪ್‍ಲೈನ್ ಸೌಲಭ್ಯ ಸೇರಿದಂತೆ ಒಟ್ಟು 613 ಆಮ್ಲಜನಕ ಪೂರೈಕೆ ಪಾಯಿಂಟ್ ಸೌಲಭ್ಯ ಕಲ್ಪಿಸಲಾಗಿದೆ. 500 ಪಾಯಿಂಟ್ ಕಲ್ಪಿಸುವುದರ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ₹1.20 ಕೋಟಿ ಅನುದಾನ ಅಗತ್ಯವಿದೆ ಎಂದು ಎಂಜಿನಿಯರ್ ರವಿಕಿರಣ್ ಮಾಹಿತಿ ನೀಡಿದರು.

ಲಸಿಕೆ ಕೊರತೆ ಇಲ್ಲ

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಲಾಗುತ್ತಿದೆ. ಆನ್‍ಲೈನ್‍ನಲ್ಲೂ ಮಾಹಿತಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಅಲ್ಲಿಯೇ ಲಸಿಕೆ ನೀಡಲಾಗುವುದು ಅಥವಾ ಲಸಿಕೆ ನೀಡುವ ದಿನ ತಿಳಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಪಡೆದುಕೊಳ್ಳಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌.ವೈಶಾಲಿ, ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ಅಧೀಕ್ಷಕ ಡಾ.ಶ್ರೀಧರ್, ಆಡಳಿತ ಮಂಡಳಿ ನಿರ್ದೇಶಕರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT