ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಜ್ಯೋತಿಯಲ್ಲಿ ₹ 8.45 ಕೋಟಿ ವ್ಯತ್ಯಾಸ

ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 20 ಏಪ್ರಿಲ್ 2021, 13:46 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆ ಮಾರ್ಗಸೂಚಿ ಪ್ರಕಾರ ಕಾಮಗಾರಿ ನಿರ್ವಹಿಸದಿದ್ದರೂ ಹಣ ಪಾವತಿಸಲಾಗಿದೆ. ತಕ್ಷಣ ನೀಡಿದ ಹಣ ಗುತ್ತಿಗೆದಾರರಿಂದ ಮರಳಿ ಪಡೆಯಬೇಕು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿನ ಲೋಪಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪೀಢರ್ ಬೇರ್ಪಡಿಸುವಿಕೆಯ 41 ಮಾರ್ಗಗಳ ಕಾಮಗಾರಿಗೆ ₹ 105 ಕೋಟಿ ನಿಗದಿ ಮಾಡಲಾಗಿದೆ. ಪ್ರಸ್ತುತ ಎಲ್ಲಾ ಮಾರ್ಗಗಳ ಕಾಮಗಾರಿ ಅನುಷ್ಠಾನದ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಇದುವರೆಗೆ 28 ಮಾರ್ಗಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದೆ. ಈ ಕಾಮಗಾರಿಗಳಿಗೆ ₹ 71.55 ಕೋಟಿ ನೀಡಲಾಗಿದೆ. ತಪಾಸಣೆಯಲ್ಲಿ ಸಾಮಾಗ್ರಿಗಳ ಖರೀದಿಯಲ್ಲಿ ₹ 4.80 ಕೋಟಿ, ಕಂಬಗಳಿಗೆ ಮಾಡಲಾದ ಕ್ರಾಂಕ್ರೀಟ್‍ನಲ್ಲಿ ₹ 3.65 ಕೋಟಿ ವ್ಯತ್ಯಾಸ ಕಂಡು ಬಂದಿದೆ. ಭದ್ರಾವತಿಯಲ್ಲಿ 10 ಮಾರ್ಗಗಳ ತಪಾಸಣೆ ಕಾರ್ಯ ಬಾಕಿ ಇದೆ. ಎಲ್ಲಾ ಮಾರ್ಗಗಳ ತಪಾಸಣೆ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 2017ರಲ್ಲಿ ಕಾಮಗಾರಿ ಅನುಷ್ಠಾನ ಪ್ರಾರಂಭಿಸಲಾಗಿದೆ. 2020ರ ಮಾರ್ಚ್‍ನಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿತ್ತು. ವಿಳಂಬ ಕಾಮಗಾರಿ ನಿರ್ವಹಿಸಿರುವುದಕ್ಕೆ ದಂಡ ವಿಧಿಸಬೇಕು. ಕಾಮಗಾರಿ ಪರಿಶೀಲಿಸಲು ತಜ್ಞರ ತಂಡ ರಚಿಸಲಾಗುವುದು. ಈ ತಂಡ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಯೋಜನೆ ಅನುಷ್ಠಾನದ ಪ್ರಮುಖ ಸ್ಥಳಗಳಲ್ಲಿ ಯೋಜನೆ ಕುರಿತ ಮಾಹಿತಿ ಫಲಕ ಅಳವಡಿಸಲಾಗುತ್ತಿದೆ. ಶಿವಮೊಗ್ಗ ವೃತ್ತದಲ್ಲಿ ಅವಾರ್ಡ್ ನೀಡಲಾದ ಪೂರ್ಣ ಮೊತ್ತಕ್ಕೆ ಬಾಂಡ್ ಪಡೆಯಲಾಗಿದೆ. ಕಂಬಗಳನ್ನು ನಿಗದಿಪಡಿಸಿದ ತಾಂತ್ರಿಕ ಗುಣಮಟ್ಟಕ್ಕೆ ಅನುಗುಣವಾಗಿ ಅಳವಡಿಸಿರುವ ಕುರಿತು ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದೆ. ಕಾಮಗಾರಿಯಲ್ಲಿ ಕಂಡು ಬಂದ ನ್ಯೂನತೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT