ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಸಿ: ವಿಠಗೊಂಡನಕೊಪ್ಪದ ಜೀವನಾಡಿ ಈ ‘ಹುಲಿಕೆರೆ’

ಬರಗಾಲದಲ್ಲೂ ಜನ, ಜಾನುವಾರುಗಳ ನೀರಿನ ಬವಣೆ ನೀಗಿಸುವ ಕೆರೆ ಈಗ ಜೀವಸಂಪತ್ತಿನ ತಾಣ
Published 5 ಏಪ್ರಿಲ್ 2024, 6:57 IST
Last Updated 5 ಏಪ್ರಿಲ್ 2024, 6:57 IST
ಅಕ್ಷರ ಗಾತ್ರ

ಕುಂಸಿ: ಬೇಸಿಗೆಯ ತಾಪಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ದಿನೇ ದಿನೇ ಪಾತಾಳ ತಲುಪುತ್ತಿದ್ದರೆ ಕುಂಸಿ ಸಮೀಪದ ವಿಠಗೊಂಡನಕೊಪ್ಪದ ಹುಲಿಕೆರೆಯಲ್ಲಿ ಬೇಸಿಗೆಯಲ್ಲೂ ಸಾಕಷ್ಟು ನೀರಿನ ಸಂಗ್ರಹವಿದ್ದು, ಜನ ಮತ್ತು ಜಾನುವಾರುಗಳ ಜೊತೆಗೆ ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಸರ್ಕಾರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡರೆ ಬೇಸಿಗೆಯ ಬವಣೆಯನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ವಿಠಗೊಂಡನಕೊಪ್ಪದ ಜನರೇ ಸಾಕ್ಷಿ.

ಇತರೆ ಎಲ್ಲ ಗ್ರಾಮಗಳ ಕೆರೆಗಳಂತೆ ಹುಲಿಕೆರೆಯೂ ಸಾಮಾನ್ಯ ಕೆರೆಯಾಗಿತ್ತು. 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ವಿಶ್ವಬ್ಯಾಂಕ್ ನೆರವಿನಿಂದ ರಾಜ್ಯದ ಕೆರೆಗಳ ಅಭಿವೃದ್ಧಿಗೆ ಜಲ ಸಂವರ್ಧನಾ ಯೋಜನೆ ಜಾರಿಗೆ ತಂದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ವೇಗ ನೀಡಲಾಯಿತು. ವಿಠಗೊಂಡನಕೊಪ್ಪದ ಗ್ರಾಮಸ್ಥರು ನಿವೃತ್ತ ಗ್ರಾಮ ಲೆಕ್ಕಿಗ ಸಿ.ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘ ಕಟ್ಟಿಕೊಂಡು ಗ್ರಾಮದ ವ್ಯಾಪ್ತಿಯ ಹುಲಿಕೆರೆ ಹಾಗೂ ಅಗಸಿನಕಟ್ಟೆ ಕೆರೆ ಅಭಿವೃದ್ಧಿಗೆ ಮುಂದಾದರು.

2012ರಲ್ಲಿ ಕೆರೆಗಳನ್ನು ಸಂಘಕ್ಕೆ ಹಸ್ತಾಂತರಿಸಲಾಯಿತು. ನಂತರ ಸಂಘದ ನೇತೃತ್ವದಲ್ಲಿ ಕೆರೆ ಸ್ವಚ್ಛಗೊಳಿಸಿ, ಒತ್ತುವರಿ ತೆರವು ಮಾಡಿ, ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾಮದ ಜನರು ಸರದಿಯ ಮೇಲೆ ಶ್ರಮದಾನ ಮಾಡಿದರು. ಗ್ರಾಮದ ಪ್ರಮುಖ ಮುಖಂಡರು ಕೆರೆ ಸಂವರ್ಧನೆಗೆ ಕೆಲಸಕ್ಕೆ ನೆರವಾದರು. ಸರ್ಕಾರವು ಹುಲಿಕೆರೆಗೆ ನೀಡಿದ್ದ ₹14.40 ಲಕ್ಷ ಹಾಗೂ ಅಗಸಿನಕಟ್ಟೆ ಕೆರೆಗೆ ನೀಡಿದ್ದ ₹15.43 ಲಕ್ಷ ಅನುದಾನವನ್ನು ಕೆರೆ ಹಾಗೂ ಸುತ್ತಲ ಕಾಲುವೆ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು.

ಪ್ರತೀ ವರ್ಷ ಮಳೆಗಾಲ ಮುಗಿಯುತ್ತಿದ್ದಂತೆಯೇ ಈ ಕೆರೆಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲೂ ಜೀವಜಲ ತುಂಬಿದ್ದು, ಗ್ರಾಮದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ ಕಾಡು ಪ್ರಾಣಿಗಳು, ಜಾನುವಾರುಗಳಿಗೆ ವರದಾನವಾಗಿದೆ. ದೂರದೂರಿನ ವೈವಿಧ್ಯಮಯ ಪಕ್ಷಿ ಸಂಕುಲವೇ ಬಂದು ಇಲ್ಲಿ ನೆಲೆನಿಲ್ಲುವಂತಾಗಿದೆ. ಕುರಿಗಾಹಿಗಳಿಗೂ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. 

ಕುಂಸಿ ಸಮೀಪದ ವಿಠಗೊಂಡನಕೊಪ್ಪದ ಹುಲಿಕೆರೆಯಲ್ಲಿ ಜಾನುವಾರುಗಳು ನೀರು ಕುಡಿಯುತ್ತಿರುವುದು
ಕುಂಸಿ ಸಮೀಪದ ವಿಠಗೊಂಡನಕೊಪ್ಪದ ಹುಲಿಕೆರೆಯಲ್ಲಿ ಜಾನುವಾರುಗಳು ನೀರು ಕುಡಿಯುತ್ತಿರುವುದು
ಸಿ.ಶಿವಾನಂದಪ್ಪ
ಸಿ.ಶಿವಾನಂದಪ್ಪ

ನೀರು ಕಾರ್ಖಾನೆ ಅಥವಾ ಪ್ರಯೋಗ ಶಾಲೆಯಲ್ಲಿ ತಯಾರಾಗುವುದಿಲ್ಲ. ಪ್ರಕೃತಿದತ್ತವಾಗಿ ದೊರೆಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಹೀಗಾದಾಗ ಮುಂದಿನ ಪೀಳಿಗೆಗೆ ನೀರಿನ ಕೊರತೆ ನೀಗಿದಂತಾಗುತ್ತದೆ

–ಸಿ.ಶಿವಾನಂದಪ್ಪ, ಅಧ್ಯಕ್ಷ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘ ವಿಠಗೊಂಡನಕೊಪ್ಪ

ಗ್ರಾಮಸ್ಥರ ಆದಾಯದ ಮೂಲವಾದ ಕೆರೆ

ಕೆರೆ ಅಭಿವೃದ್ಧಿಯ ಜೊತೆಗೆ ಕೆರೆಯಲ್ಲಿ ಮೀನು ಸಾಕಾಣಿಕೆಗೂ ಅವಕಾಶ ಕಲ್ಪಿಸಲಾಗಿದ್ದು ಮೀನುಗಳು ಚೆನ್ನಾಗಿ ಬೆಳೆದಿವೆ. ಒಂದೊಂದು ಮೀನು ಐದಾರು ಕೆ.ಜಿ ತೂಗುತ್ತವೆ. ಹಾಗಾಗಿ ಮೀನು ಹಿಡಿಯಲು ಕೆರೆ ಹರಾಜಿಗೆ ಸುತ್ತಮುತ್ತಲಿನ ಊರಿನ ಜನರು ಪೈಪೋಟಿಗೆ ಇಳಿದಿದ್ದಾರೆ. ಇದು ಸಂಘಕ್ಕೆ ಪರ್ಯಾಯ ಆದಾಯದ ಮೂಲವೂ ಆಗಿದೆ. ಸಂಘದ ವತಿಯಿಂದ ₹ 1 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು ಗ್ರಾಮಸ್ಥರ ಆರ್ಥಿಕ ಸಬಲತೆಗೂ ಒತ್ತು ನೀಡಲಾಗಿದೆ. ಗ್ರಾಮಸ್ಥರ ವೈದ್ಯಕೀಯ ತುರ್ತಿನ ಸಂದರ್ಭದಲ್ಲೂ ಸಂಘ ಸಾಲ ನೀಡುತ್ತದೆ.  ಗುಡ್ಡಗಾಡು ಪ್ರದೇಶದಲ್ಲಿನ ಈ ಹುಲಿಕೆರೆ 8 ಎಕರೆ 4 ಗುಂಟೆ ವಿಸ್ತೀರ್ಣವಿದೆ. ಗುಡ್ಡಗಳಿಂದ ಹರಿದುಬರುವ ನೀರು ಮತ್ತು ಇತ್ತೀಚಿನ ತುಂಗಾ ಏತ ನೀರಾವರಿ ಯೋಜನೆಯಿಂದ ಹರಿಸಲಾಗುವ ನೀರಿನಿಂದ ಕೆರೆ ತುಂಬಿ ಇತರೆ ಕೆರೆಗಳಿಗೂ ಹರಿದು ನಂತರ ತುಂಗಭದ್ರಾ ನದಿ ಸೇರುತ್ತದೆ. ಕೆರೆ ಈಗ ಜೀವಸಂಪತ್ತಿನ ತಾಣವಾಗಿದೆ. ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರನ್ನು ಒದಗಿಸಬಹುದು. ಸರ್ಕಾರ ಮತ್ತು ಜನಪ್ರತಿನಿಧಿಗಳು ಹುಲಿಕೆರೆಯಷ್ಟೇ ಅಲ್ಲದೇ ಎಲ್ಲ ಕೆರೆಗಳನ್ನು ತಾಂತ್ರಿಕವಾಗಿ ಅಭಿವೃದ್ಧಿಪಡಿಸಲು ಗಮನಹರಿಸಬೇಕು ಎನ್ನುತ್ತಾರೆ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವಾನಂದಪ್ಪ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT