ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡ ಮಕ್ಕಳಿಂದ ಯಕ್ಷಗಾನ ಪ್ರದರ್ಶನ

ಬೇಸಿಗೆ ರಜೆಯಲ್ಲಿ ಹಳ್ಳಿಗಳ ಮಕ್ಕಳಿಗೆ ಶಿಬಿರ ಆಯೋಜನೆ
Published 16 ಮೇ 2024, 15:23 IST
Last Updated 16 ಮೇ 2024, 15:23 IST
ಅಕ್ಷರ ಗಾತ್ರ

ಕುಂಸಿ: ‘ಕಲೆ ಯಾರ ಸ್ವತ್ತೂ ಅಲ್ಲ. ನಗರ ವಾಸಿಗಳ ಮಕ್ಕಳು ಬೇಸಿಗೆಯಲ್ಲಿ ಆಧುನಿಕ ಕಲೆಗಳ ತರಬೇತಿ ಪಡೆದರೆ ಹಳ್ಳಿ ಮಕ್ಕಳಾದ ನಾವು ದೇಸೀ ಕಲೆಯನ್ನು ಕಲಿತು ನಮ್ಮ ಸಂಸ್ಕೃತಿಯನ್ನು ಉಳಿಸುತ್ತೇವೆ’

ಇದು ಸಮೀಪದ ಕಲ್ಕುರ್ಚಿಯ ವಿದ್ಯಾರ್ಥಿಗಳ ಮಾತು...

ಬೇಸಿಗೆ ರಜೆಯಲ್ಲಿ ಕಲ್ಕುರ್ಚಿ ಗ್ರಾಮದ ಮಕ್ಕಳು ಯಕ್ಷಗಾನ ಕಲಿತು, ಪ್ರದರ್ಶಿಸಿ ಸೈ ಎನಿಸಿಕೊಳ್ಳುತ್ತಿರುವುದು ವಿಶೇಷ. ಇದರ ರೂವಾರಿ ಗ್ರಾಮದ ಸುರೇಶ್.

‘ಕನ್ನಡ ಭಾಷೆಗೆ ಸಂಸ್ಕೃತ ಮಾತ್ರ ಮಿಶ್ರಣ ಮಾಡಿ ಮಾತನಾಡಬಹುದು. ಹಾಗಾಗಿ ಕನ್ನಡ ಮತ್ತು ಸಂಸ್ಕೃತವನ್ನು ಮಿಶ್ರಣ ಮಾಡಿ ಮಾತನಾಡುವ ಶೈಲಿ ಯಕ್ಷಗಾನಕ್ಕಿದೆ. ಮಕ್ಕಳಿಗೆ ಭಾಷೆಯ ಅರಿವು ಮತ್ತು ದಕ್ಷಿಣ ಕರ್ನಾಟಕದ ಸಂಪ್ರದಾಯ ಕಲೆಯನ್ನು ಕಲಿಸಬೇಕು ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಸುರೇಶ್‌.

‘ಶಿಬಿರವನ್ನು 2 ವರ್ಷಗಳಿಂದ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಟ್ರಸ್ಟ್ ಮಾಡಬೇಕು ಎಂಬುದು ನಮ್ಮ ಆಲೋಚನೆ’ ಎಂದು ಸುರೇಶ್‌ ಹೇಳುವರು. 

ಕಲ್ಕುರ್ಚಿಯಲ್ಲಿ 3ನೇ ತರಗತಿಯಿಂದ 10ನೇ ತರಗತಿವರೆಗೂ ವಿದ್ಯಾರ್ಥಿಗಳು ಈ ಯಕ್ಷಗಾನ  ಶಿಬಿರದಲ್ಲಿ ಭಾಗವಹಿಸಿದ್ದು, ಈಗ ಸದ್ಯ 50 ಮಕ್ಕಳು ಈ ಕಲೆ ಕಲಿಯುತ್ತಿದ್ದಾರೆ. ಕಲ್ಕುರ್ಚಿಯಲ್ಲದೇ ಸುತ್ತ 10 ಹಳ್ಳಿಗಳ ಮಕ್ಕಳೂ ಈ ವಿದ್ಯೆ ಕಲಿಯುತ್ತಿದ್ದಾರೆ. ಶಿವಮೊಗ್ಗದ ಪುರದಾಳು, ಕುಂಸಿ ಸಮೀಪದ ಅರನೆಲ್ಲಿ, ಕಲ್ಕೊಪ್ಪ, ಕರಕುಚ್ಚಿ, ಹಣಗೆರೆ, ಬುತ್ತಿಹಳ್ಳ, ಎರೆಬೀಸು, ಚಿಲುಮೆಜೆಡ್ಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳೂ ನಿತ್ಯ ಶಾಲೆಗೆ ಬರುತ್ತಾರೆ.

ಶಿಕ್ಷಕ ಸಾಗರದ ರಾಜು ಭಾಗವತ್ ಕಾಸ್ಪಾಡಿ ಹಾಗೂ ಸಹಾಯಕ ಶಿಕ್ಷಕ ತೀರ್ಥಹಳ್ಳಿಯ ಸುಮಂತ್ ಆಚಾರ್ಯ ಈ ಶಿಬಿರಕ್ಕೆ ಕೈಜೋಡಿಸಿದ್ದಾರೆ. ಅವರು ಹೇಳುವಂತೆ ‘ಈಗಿನ ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಹೇಳಿದರೆ ಅರ್ಥವಾಗುವುದು. ಹಾಗಾಗಿ ಅದನ್ನು ಒಂದು ಪ್ರಸಂಗವಾಗಿ ಯಕ್ಷಗಾನದ ಮೂಲಕ ಮನದಟ್ಟು ಮಾಡಲಾಗುತ್ತಿದೆ. ಗದಾಯುದ್ಧ, ಕಂಸನ ವಿಜಯ ಹೇಗಾಯಿತು ಅಲ್ಲದೇ ಕಂಸನನ್ನು ಯಾಕೆ ಶ್ರೀ ಕೃಷ್ಣ ವಧೆ ಮಾಡಿದ, ಭೀಷ್ಮ ವಿಜಯದ ಬಗ್ಗೆ ಯಕ್ಷಗಾನದ ಮೂಲಕ ಈ ಬಾರಿ ಹೇಳಿಕೊಡುತ್ತಿದ್ದೇವೆ’ ಎಂದರು.

ಮಕ್ಕಳಿಗೆ 2 ತಿಂಗಳುಗಳ ಕಾಲ ಬೆಳಿಗ್ಗೆ 9ರಿಂದ ಸಂಜೆ 4ರವರೆಗೂ ಯಕ್ಷಗಾನ ಹೇಳಿಕೊಡಲಾಗುತ್ತಿದೆ. ಶಿಬಿರದ ಅಂತ್ಯದಲ್ಲಿ ಕಲ್ಕುರ್ಚಿ ಹಾಗೂ ಹಣಗೆರೆ ಗ್ರಾಮಗಳಲ್ಲಿ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರ ನಡುವೆ ವೇದಿಕೆಯಲ್ಲಿ ಮಕ್ಕಳಿಂದಲೇ ಯಕ್ಷಗಾನ ಪ್ರದರ್ಶಿಸಲಾಗುತ್ತದೆ. ಪ್ರದರ್ಶನಕ್ಕೆ ಬೇಕಾದ ವೇಷಭೂಷಣ ಬಾಡಿಗೆಗೆ ತರಿಸಲಾಗುತ್ತದೆ.

ಶಿಬಿರ ಹಾಗೂ ಪ್ರದರ್ಶನಕ್ಕೆ ಅಂದಾಜು ₹ 1.5 ಲಕ್ಷದಿಂದ ₹ 2 ಲಕ್ಷದವರೆಗೂ ಖರ್ಚು ಬರುತ್ತದೆ. ಹೀಗಾಗಿ, ಈ ಬಾರಿ ಊರಿನವರೇ ನಿರ್ಧರಿಸಿರುವಂತೆ ಒಂದು ಮಗುವಿಗೆ ₹ 3,000 ಶುಲ್ಕ ಪಡೆಯಲು ನಿರ್ಧರಿಸಿದ್ದು, ಉಳಿದ ಮೊತ್ತವನ್ನು ಸಹಾಯಾರ್ಥಿಗಳು ನೀಡುತ್ತಾರೆ’ ಎಂದು ಸುರೇಶ್ ಹೇಳಿದರು.

ಶಿಬಿರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಇದೇ ತಿಂಗಳ 27 ಮತ್ತು 28ರಂದು ರಾತ್ರಿ 8ಕ್ಕೆ ಕಲ್ಲುಕೊಪ್ಪ ಮತ್ತು ಹಣಗೆರೆಯಲ್ಲಿ ನಡೆಯಲಿದೆ.

ಈ ವರ್ಷ ಯಕ್ಷಗಾನ ಜನರ ಮುಂದೆ ಪ್ರದರ್ಶಿಸಲು ತರಬೇತಿ ಪಡೆಯುತ್ತಿರುವ ಮಕ್ಕಳು
ಈ ವರ್ಷ ಯಕ್ಷಗಾನ ಜನರ ಮುಂದೆ ಪ್ರದರ್ಶಿಸಲು ತರಬೇತಿ ಪಡೆಯುತ್ತಿರುವ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT