ಸೋಮವಾರ, ಜುಲೈ 4, 2022
21 °C

ಕುವೆಂಪು ವಿವಿ ಕುಲಸಚಿವ ತ್ಯಾಗರಾಜ ಎತ್ತಂಗಡಿ: ಕುಲಪತಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ. ತ್ಯಾಗರಾಜ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸರ್ಕಾರದ ಈ ಆದೇಶದಿಂದ ಕುಲಪತಿ ವೀರಭದ್ರಪ್ಪ ಅವರಿಗೆ ಮುಖಭಂಗವಾಗಿದೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವಂತೆ ತ್ಯಾಗರಾಜ ಅವರಿಗೆ ಸೂಚಿಸಲಾಗಿದೆ. ಅವರ ಜಾಗಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ಎಸ್‌.ಕೆ. ನವೀನ್‌ಕುಮಾರ್ ಅವರನ್ನು ನೇಮಿಸಲಾಗಿದೆ.

ಸಿಂಡಿಕೇಟ್‌ ಹಾಗೂ ವಿದ್ಯಾವಿಷಯಕ ಪರಿಷತ್ ನಿರ್ಧಾರಕ್ಕೆ ವಿರುದ್ಧವಾಗಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ನಂತರ ಆಡಳಿತ ವಿಭಾಗದ ಕುಲಸಚಿವೆ ಜಿ. ಅನುರಾಧಾ ಅವರು ದೂರ ಶಿಕ್ಷಣ ನಿರ್ದೆಶನಾಲಯದ ನಿರ್ದೇಶಕ ಯೋಗೇಶ್‌ ಅವರ ಸ್ಥಾನಕ್ಕೆ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಸ್‌. ಬಿರಾದಾರ ಅವರನ್ನು ನೇಮಿಸಿದ್ದರು. ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅವರು ಈ ನೇಮಕವನ್ನು ರದ್ದುಗೊಳಿಸಿದ್ದರು. ಕುಲಪತಿಗಳ ಆದೇಶವನ್ನು ರದ್ದು ಮಾಡಿರುವ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್‌ ಎಂ. ಹಿರೇಮಠ ಅವರು ಬಿರಾದಾರ್ ಅವರನ್ನೇ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯಲು ಆದೇಶ ಹೊರಡಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2019–20ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ದಿಢೀರ್ ಫಲಿತಾಂಶ ಪ್ರಕಟಿಸಿರುವುದ್ದು ಹಣಕಾಸಿನ ಅವ್ಯವಹಾರ ಶಂಕೆಗೆ ಕಾರಣವಾಗಿದೆ ಎಂದು ‘ಪ್ರಜಾವಾಣಿ’ ಫೆ.12ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.

ವರದಿ ಪ್ರಟಕವಾದ ತಕ್ಷಣ ಕುಲಸಚಿವೆ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ಬದಲಾಯಿಸಿದ್ದಲ್ಲದೇ, ಹಣಕಾಸಿನ ವ್ಯವಹಾರದ ಆರೋಪಗಳನ್ನು ಪರಿಶೀಲಿಸಲು, ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ ಅಧ್ಯಯನ ಕೇಂದ್ರಗಳ ದಾಖಲೆಗಳನ್ನು ಪರಿಶೀಲಿಸಲು ನಾಲ್ಕು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದರು. ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಿದ್ದನ್ನು ಕುಲಪತಿ ಸಮರ್ಥಿಸಿಕೊಂಡಿದ್ದರು.

‘ಸರ್ಕಾರದ ಆದೇಶದಿಂದ ದೂರ ಶಿಕ್ಷಣ ನಿರ್ದೇಶನಾಲಯದ ಹಗರಣಗಳ ನಿಷ್ಪಕ್ಷಪಾತ ತನಿಖೆ ನಡೆಸಲು ಸಹಕಾರಿಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾಗಲು ಸಮಿತಿಗಳಿಗೆ ಸೂಚಿಸಲಾಗಿದೆ’ ಎಂದು ಕುಲಸಚಿವೆ ಅನುರಾಧಾ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು