ಭಾನುವಾರ, ಅಕ್ಟೋಬರ್ 17, 2021
23 °C
ಕೆರೆಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು: ಆರೋಪ

ಸೊರಬ: ಭೂದಾಹಕ್ಕೆ ಅಸ್ತಿತ್ವ ಕಳೆದುಕೊಂಡ ಕೆರೆಗಳು

ರಾಘವೇಂದ್ರ ಟಿ. Updated:

ಅಕ್ಷರ ಗಾತ್ರ : | |

Prajavani

ಸೊರಬ: ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲ್ಲೂಕಿನಲ್ಲಿ ಆರಂಭವಾಗಿರುವ ಒತ್ತುವರಿ ನಿಧಾನವಾಗಿ ಕೆರೆಗಳನ್ನು ಕಬಳಿಸುತ್ತಾ ಬಂದಿದೆ.

ಅವ್ಯಾಹತ ಒತ್ತುವರಿ ಪರಿಣಾಮ ಬೇಸಿಗೆ ಆರಂಭವಾಗುವ ಮುನ್ನವೇ ಕೆರೆಗಳ ಒಡಲು ಬರಿದಾಗುತ್ತಿದೆ. ಮಲೆನಾಡಿಗೆ ವಿಶೇಷ ಸೊಬಗು ಬರುವ ರೀತಿಯಲ್ಲಿ ರಸ್ತೆಯುದ್ದಕ್ಕೂ ಕಾಣಬರುವ ಕೆರೆಗಳು ಸಾಗರದಂತೆ ದಡಕ್ಕೆ ಅಪ್ಪಳಿಸಿ, ವಿಶಾಲವಾದ ಭೂಪ್ರದೇಶವನ್ನು ಆವರಿಸಿ ಸಸ್ಯ ಹಾಗೂ ಪ್ರಾಣಿ ಜಗತ್ತಿಗೆ, ಹಳ್ಳಿಗರ ಜೀವನಾಧಾರಕ್ಕೆ ಮೂಲ ಸೆಲೆಯಾಗಿವೆ. ಜನರ ಒಡನಾಡಿಯಾಗಿರುವ ಕೆರೆಗಳು ಕೆಲವರ ಭೂದಾಹಕ್ಕೆ ಒಳಗಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.

ಕೆರೆ ಅಚ್ಚುಕಟ್ಟು ಭಾಗದ ರೈತರು ತಮ್ಮ ಜಮೀನಿಗೆ ಹೊಂದಿಕೊಂಡಿರುವ ಕೆರೆ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಅಡಿಕೆ, ಭತ್ತ ಬೆಳೆಯುತ್ತಿದ್ದಾರೆ. ಕೆಲವು ಭಾಗದಲ್ಲಿ ಎಕರೆಗಟ್ಟಲೇ ಕೆರೆ ಜಮೀನು ಅತಿಕ್ರಮಿಸಿಕೊಂಡು ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ. ಕೆರೆಯ ಒಡಲು ಕೃಷಿ ಭೂಮಿಯಾಗಿ ಬದಲಾವಣೆ ಹೊಂದಿರುವ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ. ಗ್ರಾಮಸ್ಥರು ಮನವಿ ಮಾಡಿದ ಗ್ರಾಮಗಳ ಕೆರೆಗಳನ್ನು ಮಾತ್ರ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಉಳಿದ ಕೆರೆಗಳ ಒತ್ತುವರಿ ಬಗ್ಗೆ ಮೌನವಹಿಸಿದ್ದಾರೆ ಎನ್ನುವ ಆರೋಪ ಸಾರ್ವಜನಿಕರದ್ದು.

ತಾಲ್ಲೂಕಿನಲ್ಲಿ 1,204 ಕೆರೆಗಳಿವೆ. 8,228 ಭೂ ವಿಸ್ತೀರ್ಣವನ್ನು ಹೊಂದಿವೆ. ಇದರಲ್ಲಿ 122 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಕೆರೆ ಸಂರಕ್ಷಣೆಯನ್ನು ನೇರವಾಗಿ ಜಲಾನಯನ ಇಲಾಖೆ ನಿರ್ವಹಣೆ ಮಾಡುತ್ತಿದೆ. ತನ್ನ ವ್ಯಾಪ್ತಿಯ ಕೆರೆಗಳನ್ನು ಒತ್ತುವರಿ ಮಾಡಿರುವ ಕುರಿತು ಭೂಮಾಪನ ಇಲಾಖೆಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಅಧಿಕಾರಿಗಳು ಮಳೆಗಾಲ ಮುಗಿದ ನಂತರ ಸರ್ವೆ ಕಾರ್ಯ ಮಾಡುವ ಭರವಸೆ ನೀಡಿದ್ದಾರೆ. ನಂತರ ಒತ್ತುವರಿಯಾಗಿರುವ ಕೆರೆಗಳ ಸಂರಕ್ಷಣೆ ಮಾಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

1,082 ಕೆರೆಗಳು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಉದ್ಯೋಗ ಖಾತ್ರಿ ಅಡಿ ಕೆರೆಗಳ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿವೆ. ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುತ್ತಿರುವ ಕೆರೆಗಳಲ್ಲಿ ಒತ್ತುವರಿಯಾಗಿರುವ ಕುರಿತು ಗ್ರಾಮ ಸಭೆಗಳಲ್ಲಿ ಚರ್ಚೆ ನಡೆದಿದೆ. ಆದರೂ ಈ ಬಗ್ಗೆ ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಿಲ್ಲ ಎನ್ನುತ್ತಾರೆ ಬಸವಣ್ಯಪ್ಪ.

ತಾಲ್ಲೂಕಿನ ಕೆಲವು ಗ್ರಾಮಸ್ಥರು ತಮ್ಮ ಕೆರೆಗಳ ಅತಿಕ್ರಮಣ ತೆರವುಗೊಳಿಸುವಂತೆ ಹೋರಾಟ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಮನವಿ, ಹೋರಾಟ ಮಾಡಿದ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ, ತೆರವುಗೊಳಿಸಲು ಮುಂದಾಗಿದೆ. ಆದರೆ, ಹೈಕೋರ್ಟ್ ಕೆರೆ ತೆರವುಗೊಳಿಸಲು ಸೂಚನೆ ನೀಡಿದ ನಂತರ‌ 240 ಕೆರೆಗಳನ್ನು ಸರ್ವೆ ಮಾಡಲಾಗಿದೆ. ಇದರಲ್ಲಿ 107 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂದು ವರದಿ ಸಲ್ಲಿಸಲಾಗಿದೆ. 133 ಕೆರೆಗಳು ಒತ್ತುವರಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ಒಂದು ವರ್ಷದ ಅವಧಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಕೆರೆ ಒತ್ತುವರಿ ಸಮೀಕ್ಷೆಯಲ್ಲಿ ತಾಲ್ಲೂಕಿನ ಹಾಲಗಳಲೆ, ಹಿರೇಕಸವಿ, ಬೆಲವಂತನಕೊಪ್ಪ, ಕೋಡಿಹಳ್ಳಿ, ಮಲ್ಲಾಪುರ, ತವನಂದಿ, ದ್ಯಾವನಹಳ್ಳಿ, ಕೆರೆಕೊಪ್ಪ ಸೇರಿ 23 ಗ್ರಾಮಗಳ ಕೆರೆಗಳನ್ನು ಒತ್ತುವರಿ ತೆರವುಗೊಳಿಸುವಂತೆ ಆದೇಶ ಮಾಡಲಾಗಿದೆ.

ವೇಗ ಪಡೆಯದ ಕೆರೆಗಳ ಸರ್ವೆ ಕಾರ್ಯ
ಶಿವಮೊಗ್ಗ:
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳ ಸರ್ವೆ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು. ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದ್ದರೂ, ಸರ್ವೆ ಕಾರ್ಯ, ತೆರವು ಕಾರ್ಯಾಚರಣೆ ವೇಗ ಪಡೆದಿಲ್ಲ.

ಕೆರೆಗಳು ಜೀವಸಂಕುಲದ ಜೀವಜಲ. ಗ್ರಾಮೀಣ ಜನರ ಜೀವನ, ಕೃಷಿ, ರಾಸುಗಳು, ಪ್ರಾಣಿ, ಪಕ್ಷಿಗಳ ದಾಹ ತಣಿಸುವ ತಾಣಗಳು. ನಗರಗಳು ಬೆಳೆದಂತೆ, ಗ್ರಾಮೀಣ ಕೃಷಿ ಪ್ರದೇಶ ವಿಸ್ತಾರವಾದಂತೆ ಇಂತಹ ಜೀವಜಲದ ಬಹುತೇಕ ತಾಣಗಳು ಒತ್ತುವರಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರೇ ಕೆರೆ ಒತ್ತುವರಿ ಮಾಡಿದ್ದು ಹೊಲ, ಗದ್ದೆ, ಅಡಿಕೆ, ಬಾಳೆ ತೋಟಗಳು ತಲೆ ಎತ್ತಿವೆ. ನಗರ ಪ್ರದೇಶಗಳಲ್ಲಿ ಅಕ್ರಮ ಲೇಔಟ್‌ಗಳಿಗೆ, ಸರ್ಕಾರಿ ಕಟ್ಟಡಗಳಿಗೆ ಕೆರೆ ಬಳಕೆ ಮಾಡಿಕೊಳ್ಳಲಾಗಿದೆ.

ಇಂತಹ ಕೆರೆಗಳ ಒತ್ತುವರಿ ವಿರುದ್ಧ ಹಲವರು ಕಾನೂನು ಹೋರಾಟ ನಡೆಸಿದ್ದಾರೆ. ರಾಷ್ಟ್ರೀಯ ಹಸಿರು ಪ್ರಾಧಿಕಾರ ಕೆರೆಗಳ ಸರ್ವೆ ಹಾಗೂ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ನಂತರ ಶಿವಮೊಗ್ಗ ಜಿಲ್ಲೆಯಲ್ಲೂ ಸಮಿತಿ ರಚಿಸಲಾಗಿದೆ. ಕೆರೆಗಳ ಸರ್ವೆ ಕಾರ್ಯದ ಹೊಣೆ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ನೀಡಲಾಗಿದೆ. ಪ್ರತಿ ತಿಂಗಳು ಗುರಿ ನಿಗದಿಪಡಿಸಿದ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಕೆರೆಯನ್ನು ಸಂಬಂಧಪಟ್ಟ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕು. ಹಾಗೆ ತೆರವಾದ ಕೆರೆಗಳ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕಿದೆ. ತೆರವಾದ ಕೆರೆ ಮತ್ತೆ ಒತ್ತುವರಿಯಾದರೆ ಆಯಾ ವಿಭಾಗದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ, ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ. ಆದರೂ ಕೆರೆ ಸಂರಕ್ಷಣಾ ಕಾರ್ಯ ನಿಗದಿತ ಪ್ರಗತಿ ಸಾಧಿಸಿಲ್ಲ.

ಕೆಲವು ಕೆರೆಗಳಿಗೆ ಕಾಯಕಲ್ಪ ನೀಡಿದ ಏತ ನೀರಾವರಿ: ಜಿಲ್ಲೆಯಲ್ಲಿ ಹಲವು ಏತ ನೀರಾವರಿ ಯೋಜನೆಗಳು ಅನುಷ್ಠಾನವಾದ ನಂತರ 500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಏತ ನೀರಾವರಿ ಫಲವಾಗಿ ಸ್ಥಳೀಯ ಆಡಳಿತಗಳು ಅನಿವಾರ್ಯವಾಗಿ ಕೆರೆಗಳನ್ನು ಸಂರಕ್ಷಿಸುವ ಕೆಲಸಕ್ಕೆ ಮುಂದಾಗಿವೆ. ಹೂಳು ತೆಗೆಸುವುದು, ಒತ್ತುವರಿ ತೆರವು ಮೂಲಕ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ 225 ಕೆರೆಗಳಿಗೆ ನೀರು ತುಂಬಿಸುವ ಪುರದಕೆರೆ ಏತ ನೀರಾವರಿ ಯೋಜನೆ, ಹೊಸಹಳ್ಳಿ ತುಂಗಾ ಏತ ನೀರಾವರಿ, ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಸೊರಬ ತಾಲ್ಲೂಕಿನ ಮೂಡಿ, ಮೂಗೂರು ಯೋಜನೆಗಳ ಫಲವಾಗಿ ಹಲವು ಕೆರೆಗಳು ಮತ್ತೆ ಜೀವ ತಳೆದಿವೆ. ಉದ್ಯೋಗ ಖಾತ್ರಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ 1,023 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ.

ಭದ್ರಾವತಿ: ತಿಂಗಳಿಗೆ 40 ಕೆರೆಗಳ ಸರ್ವೆ
ಭದ್ರಾವತಿ:
ತಾಲ್ಲೂಕಿನಲ್ಲಿ 426 ಕೆರೆಗಳಿದ್ದು, 321 ಕೆರೆಗಳ ಸರ್ವೆ ಬಾಕಿ ಇದೆ. ತಾಲ್ಲೂಕು ಆಡಳಿತ ವರ್ಷದೊಳಗೆ ಇತ್ಯರ್ಥ ಮಾಡುವ ಗುರಿ ಇಟ್ಟುಕೊಂಡಿದೆ. ತಿಂಗಳಿಗೆ ಕನಿಷ್ಠ 40 ಕೆರೆಯನ್ನು ಸರ್ವೆ ಮಾಡಿಸುವ ಜತೆಗೆ ಸೂಕ್ತ ನಕ್ಷೆ ಸಿದ್ಧಪಡಿಸಿದೆ. 

‘ಕೆರೆ ಸರ್ವೆ ಮತ್ತು ಒತ್ತುವರಿ ತೆರವು ಕೆಲಸ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಮನಃಸ್ಥಿತಿ ಇದೆ. ಇದರಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೆರೆ ಇರುವ ಪ್ರದೇಶದ ಸ್ಥಳೀಯ ಸಂಸ್ಥೆಯ ಜವಾಬ್ದಾರಿ ಸಹ ಇದೆ ಎಂಬುದನ್ನು ಮನಗಾಣಿಸುವ ಕೆಲಸ ಈಗಾಗಲೇ ಮಾಡಿದ್ದೇವೆ’ ಎನ್ನುತ್ತಾರೆ ತಹಶೀಲ್ದಾರ್ ಪ್ರದೀಪ್.

ತಿಂಗಳಿಗೆ ಕನಿಷ್ಠ 40 ಕೆರೆಗಳ ಸರ್ವೆ ಕೆಲಸ ಮುಗಿಸಿ, ಒತ್ತುವರಿ ಇದ್ದಲ್ಲಿ ಕನಿಷ್ಠ 20 ಕೆರೆಯ ತೆರವು ಕಾರ್ಯ ಮಾಡುವ ಜತೆಗೆ ಅದು ಯಾವ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಸೇರುತ್ತದೋ ಅದನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡಲಾಗುವುದು. ಈ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕೆರೆ ಹಸ್ತಾಂತರ ಪಡೆದ ಸ್ಥಳೀಯ ಸಂಸ್ಥೆಗಳು ಸರ್ಕಾರದ ಅನುದಾನದಲ್ಲಿ ಸೂಕ್ತವಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ವಾಕಿಂಗ್ ಪಾಥ್, ವಾಟರ್ ಶೆಡ್ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ಸರ್ವೆ ಕೆಲಸ ನನೆಗುದಿಗೆ: ನಗರಸಭಾ ವ್ಯಾಪ್ತಿಯಲ್ಲಿ 19 ಕೆರೆಗಳಿವೆ. ಎಲ್ಲಾ ಕೆರೆಗಳ ಸರ್ವೆ ಕಾರ್ಯ ನಡೆದಿಲ್ಲ. ಒತ್ತುವರಿ ಮಾಡಿದ ಕೆರೆಗಳನ್ನು ಸ್ಥಳೀಯ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನಿರ್ವಹಣೆ ಮಾಡುವ ಪ್ರಸ್ತಾವ ಸಲ್ಲಿಕೆಯಾಗಿದೆ.

‘ಕೆರೆ ಸರ್ವೆ, ಸಂರಕ್ಷಣೆ ಕುರಿತು ಜಿಲ್ಲಾಡಳಿತಕ್ಕೆ ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿದ ನಂತರ ನಗರಸಭಾ ವ್ಯಾಪ್ತಿಯಲ್ಲಿ ಒಂದಿಷ್ಟು ಕೆಲಸ ನಡೆದಿದೆ. ಸಿದ್ದಾಪುರ ಕೆರೆ ಅಭಿವೃದ್ಧಿ ಕೆಲಸ ನನೆಗುದಿಯಲ್ಲಿದೆ’ ಎಂದು ನಗರಸಭೆ ಮಾಜಿ ಸದಸ್ಯ ಆರ್.ವೇಣುಗೋಪಾಲ್ ಪ್ರತಿಕ್ರಿಯಿಸಿದರು.

‘ದಶಕದ ಹಿಂದೆ ಒತ್ತುವರಿ ತೆರವು ಮಾಡಿದ್ದ ಕೆರೆಯಲ್ಲಿ ಪುನಃ ಅಕ್ರಮ ಆರಂಭವಾಗಿದೆ. ಸ್ಥಳೀಯಾಡಳಿತ ಸೂಕ್ತ ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಅರದೊಟ್ಟಲು ಜಗದೀಶ.

**

ಕೆರೆಗಳ ಸರ್ವೆ ಕಾರ್ಯ ತ್ವರಿತಗೊಳಿಸಲು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಒತ್ತುವರಿ ಕೆರೆಗಳ ಪಟ್ಟಿ ಸಿದ್ಧವಾದ ತಕ್ಷಣ ತೆರವು ಕಾರ್ಯಾಚರಣೆ ನಡೆಸಲಾಗುವುದು.
–ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

**

ಒಂದು ಸಮುದಾಯದ ಭಾಗವಾಗಿರುವ ಕೆರೆಗಳು ಆಧುನಿಕತೆಗೆ ನಲುಗಿ ತಮ್ಮ ಕುರುಹುಗಳನ್ನು ಕಳೆದುಕೊಂಡಿವೆ. ಪ್ರಾಣಿ, ಪಕ್ಷಿ ಸಂಕುಲ ಉಳಿಯಬೇಕಾದರೆ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
–ರೇಣುಕಮ್ಮ ಗೌಳಿ, ಅಧ್ಯಕ್ಷೆ, ಅಕ್ಕನ ಬಳಗ

**

ಕೆರೆಗಳು ರೈತರ ಜಮೀನುಗಳಿಗೆ ನೀರಾವರಿ ಮೂಲವಾಗಿರುವುದರಿಂದ ಸಂಬಂಧಪಟ್ಟವರು ಒತ್ತುವರಿದಾರರಿಂದ ತೆರವುಗೊಳಿಸಿ ಅವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಅಂರ್ತಜಲವೂ ಹೆಚ್ಚಳವಾಗಲಿದೆ.
–ರಾಜಪ್ಪ ಮಾಸ್ತರ್‌, ಸಾಮಾಜಿಕ ಚಿಂತಕ

**

ಭದ್ರಾವತಿ ತಾಲ್ಲೂಕು ಕಲಜ್ಜನಾಳ್ ಕೆರೆ ನೀರು ಸಂಗ್ರಹ ಕಡಿಮೆಯಾಗಿದೆ. ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸಬೇಕು. ಕೆರೆ ಅವಲಂಬಿತ ರೈತರ ಹಿತಾಸಕ್ತಿ ಕಾಪಾಡಬೇಕು.
–ರುದ್ರೇಶ್, ಹನುಮಂತಾಪುರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.