ಶನಿವಾರ, ಆಗಸ್ಟ್ 20, 2022
21 °C
ದಿಗ್ಗೇನಹಳ್ಳಿ ರೈತರ ಮನೆ ಬಾಗಿಲಿಗೇ ಬರುತ್ತಿವೆ ಕಾಡು ಪ್ರಾಣಿಗಳು

ಶಿವಮೊಗ್ಗ: ಆನವೇರಿ ಸುತ್ತಮುತ್ತ ಚಿರತೆ, ಕರಡಿಗಳ ಕಾಟ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಆನವೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಭಯ ಭೀತರಾಗಿದ್ದಾರೆ. ರೈತರು ಹೊಲ, ತೋಟಗಳತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ದಿಗ್ಗೇನಹಳ್ಳಿಯ ಶಿಕ್ಷಕ ಸೋಮಶೇಖರಪ್ಪ ಅವರ ಪುತ್ರ ಬಸವರಾಜಪ್ಪ ಅವರ ಮನೆಗೆ ಈಚೆಗೆ ಬೆಳಗಿನ ಜಾವ ಮೂರರ ಸುಮಾರಿಗೆ ಬಂದ ಚಿರತೆಯೊಂದು ಕೆಲವು ಸಮಯ ಮನೆಯ ಅಂಗಳದಲ್ಲೇ ತಿರುಗಾಡಿದೆ. ನಂತರ ಸಾಕು ನಾಯಿ ಎತ್ತಿಕೊಂಡು ಪರಾರಿಯಾಗಿದೆ. ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸೈದರ ಕಲ್ಲಹಳ್ಳಿ, ಆದ್ರಿಹಳ್ಳಿ, ಅರಸನಘಟ್ಟ, ಭಗವತಿ ಕೆರೆ, ಗುಡಮಘಟ್ಟೆ, ಶ್ರೀನಿವಾಸಪುರ ಬಳಿಯೂ ಚಿರತೆಗಳು ಕಾಣಿಸಿಕೊಂಡಿವೆ. ಶ್ರೀನಿವಾಸ ಪುರದ ಬಳಿ ಮಧ್ಯಾಹ್ನ ಮರವೇರಿ ಕುಳಿತಿದ್ದ ಚಿರತೆ ಕಂಡು ಅಲ್ಲಿನ ರೈತರು ಭಯಭೀತರಾಗಿದ್ದಾರೆ.

ಈ ಗ್ರಾಮಗಳ ಸುತ್ತಲೂ ಕಿರು ಅರಣ್ಯ ಪ್ರದೇಶ, ಸಾಲುಸಾಲು ಅಡಿಕೆ ತೋಟಗಳು ಇವೆ. ಗುಡ್ಡದ ಬಳಿಯೂ ಮೆಕ್ಕೆಜೋಳದ ಬೆಳೆ ಹಸಿರಾಗಿದೆ. ರಸ್ತೆಗಳು ಸರಿ ಇಲ್ಲದ ಕಾರಣ ರೈತರು ನಡೆದುಕೊಂಡೇ ಹೋಗುತ್ತಾರೆ. ಚಿರತೆಗಳು ಕಾಣಿಸಿಕೊಂಡ ನಂತರ ಜನರು ತೋಟ, ಹೊಲಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. 

ವರ್ಷದ ಹಿಂದೆ ಚಿರತೆ ಸೆರೆ: ಹಿಂದಿನ ವರ್ಷ ಇದೇ ದಿನದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಹಲವು ದಿನಗಳ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿಯಲಾಗಿತ್ತು. ಈ ಬಾರಿ ದಿಗ್ಗೇನಹಳ್ಳಿ ಬಸವರಾಜಪ್ಪ ಅವರ ಮನೆ ಬಳಿ ಚಿರತೆ ಕಾಣಿಸಿಕೊಂಡ ನಂತರ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳಿಂದ ಪಂಚರ ಪಡೆದು ಇಡಲಾಗಿದೆ. ಅದರ ಒಳಗೆ ನಾಯಿಗಳನ್ನು ಇಡಲಾಗಿದೆ. ಆದರೂ, ಚಿರತೆಗಳ ಸೆರೆ ಸಾಧ್ಯವಾಗಿಲ್ಲ.

ಕುರಿಗಾಯಿಗಳ ಎದುರೇ ನಾಯಿ ಹಿಡಿದ ಚಿರತೆ: ಆನವೇರಿ ಬಳಿ ಕುರಿಗಳನ್ನು ತರವಿಕೊಂಡಿದ್ದ ಸ್ಥಳಕ್ಕೆ ಚಿರತೆಯೊಂದು ಬಂದಿದೆ. ಶಬ್ದ ಮಾಡಿ ಅದನ್ನು ಓಡಿಸುವಷ್ಟರಲ್ಲಿ ಮತ್ತೊಂದು ಚಿರತೆ ಅವರ ಬಳಿ ಇದ್ದ ನಾಯಿಯನ್ನು ಎಗರಿಸಿಕೊಂಡು ಹೋಗಿದೆ. ಘಟನೆಯ ನಂತರ ಭಯಗೊಂಡ ಕುರಿಗಾಯಿಗಳು ಬೇರೆ ಸ್ಥಳಕ್ಕೆ ಹೋಗಿದ್ದಾರೆ.

‘ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಮರವೇರಿ ಕುಳಿತಿದ್ದ ಚಿರತೆ ನೋಡಿ ಹೆದರಿದ್ದಾರೆ. ಅಕ್ಕಪಕ್ಕದ ತೋಟಗಳಲ್ಲಿ ಇದ್ದವರು ಬರುವಷ್ಟರಲ್ಲಿ ಅಲ್ಲಿಂದ ಓಡಿಹೋಗಿದೆ. ಘಟನೆಯ ನಂತರ ಕಾರ್ಮಿಕರು ಕೂಲಿ ಕೆಲಸಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ’ ಎಂದು ವಿವರ ನೀಡಿದರು ಶ್ರೀನಿವಾಸಪುರದ ಅಡಿಕೆ ಬೆಳೆಗಾರ ಪ್ರಸನ್ನ ಪುಟ್ಟಪ್ಪ.

ಬಾಗಿಲಿಗೇ ಬರುವ ಕರಡಿಗಳು: ಈ ಗ್ರಾಮಗಳಲ್ಲಿ ಕರಡಿಗಳ ಕಾಟವೂ ಹೆಚ್ಚಾಗಿದೆ. ಸೂರ್ಯ ಮುಳುಗಿ, ಮಬ್ಬುಗತ್ತಲು ಆವರಿಸಿದರೆ ಸಾಕು ದಿಗ್ಗೇನಹಳ್ಳಿಯ ಜನರ ಮನೆಗಳ ಬಾಗಿಲಿಗೇ ಕರಡಿಗಳು ಬರುತ್ತವೆ. ಕಿಟಕಿ, ಬಾಗಿಲು ಬಡಿಯುತ್ತವೆ. ಸ್ವಲ್ಪ ಸಮಯವಿದ್ದು ಮರಳುತ್ತವೆ ಎನ್ನುತ್ತಾರೆ ಗ್ರಾಮಸ್ಥರು.

‘ಇದುವರೆಗೂ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಂತ ಮೈಮರೆತು ಇರಲು ಆಗದು. ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕು. ಚರತೆ, ಕರಡಿಗಳನ್ನು ಸೆರೆ ಹಿಡಿದು ದಟ್ಟ ಅರಣ್ಯಕ್ಕೆ ಬಿಡಬೇಕು. ರೈತರು ಸುಗಮವಾಗಿ ಹೊಲ, ತೋಟಗಳಿಗೆ ಹೋಗಲು ಅಗತ್ಯವಾದ ರಸ್ತೆಗಳನ್ನು ಸರ್ಕಾರ ನಿರ್ಮಿಸಿಕೊಡಬೇಕು’ ಎನ್ನುತ್ತಾರೆ ದಿಗ್ಗೇನಹಳ್ಳಿಯ ರೈತ ಹರೀಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು