ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಪರ್ಯಾಯ ಸಾಧ್ಯತೆಗಳ ಹುಡುಕಾಟ

ಚರಕ ಸಂಸ್ಥೆಯಲ್ಲಿ ಮುದ್ರಣ, ಕಸೂತಿ ಕಾರ್ಯಾಗಾರ
Last Updated 22 ಮೇ 2021, 3:51 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಹೆಗ್ಗೋಡು ಗ್ರಾಮದ ಚರಕ ಸಂಸ್ಥೆಯು ಕಳೆದ ವರ್ಷ ಕೋವಿಡ್ ಕಾರಣಕ್ಕೆ ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಕೆರೆ ಹೂಳೆತ್ತುವ, ಮಣ್ಣಿನ ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳ ಮೂಲಕ ‘ಉದ್ಯೋಗ ಸೃಷ್ಟಿ’ ಮಾಡಲಾಗಿತ್ತು.

ಈ ವರ್ಷ ಲಾಕ್‌ಡೌನ್ ತಂದಿರುವ ಸಂಕಟವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಎದುರಿಸಲು ಚರಕ ಯೋಜನೆ ರೂಪಿಸಿದೆ. ಶೇ 30ರಷ್ಟು ಮಾತ್ರ ಚರಕದ ಕೆಲಸಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಲಾಕ್‌ಡೌನ್ ಅವಧಿಯ ಪರ್ಯಾಯ ಸಾಧ್ಯತೆಗಳ ಹುಡುಕಾಟದಲ್ಲಿ ಸಂಸ್ಥೆ ತೊಡಗಿದೆ.

ಇದರ ಫಲವಾಗಿ ಮೇ 13ರಿಂದ ಹೊನ್ನೆಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕದಲ್ಲಿ ಕೆಲಸ ಮಾಡುವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆಸಕ್ತರಿಗಾಗಿ ಕೈಮಗ್ಗ ಬಟ್ಟೆಗಳ ಉತ್ಪನ್ನಕ್ಕೆ ಸಂಬಂಧಿಸಿದ ಪಡಿಯಚ್ಚು ಮುದ್ರಣ, ಕಸೂತಿ ಕಾರ್ಯಾಗಾರ ನಡೆಯುತ್ತಿದೆ.

ಚರಕದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಹೊತ್ತಿಗೆ ಇಂತ ಕಾರ್ಯಾಗಾರಗಳನ್ನು ನಡೆಸುವುದು ಕಷ್ಟ. ಆದ್ದರಿಂದ ಲಾಕ್‌ಡೌನ್ ಅವಧಿಯನ್ನು ಕಾರ್ಯಾಗಾರಕ್ಕಾಗಿ ಬಳಸಿಕೊಳ್ಳುವ ಮೂಲಕ ಚರಕ ಕ್ರಿಯಾಶೀಲ ಹೆಜ್ಜೆ ಇಟ್ಟಿದೆ.

ಪಡಿಯಚ್ಚು ಮುದ್ರಣ ರಾಜಸ್ಥಾನ, ಗುಜರಾತ್‌ನಂತಹ ರಾಜ್ಯಗಳಲ್ಲಿ ಬಟ್ಟೆಯ ಮೇಲೆ ಚಿತ್ರಗಳನ್ನು ಮುದ್ರಿಸುವ ಕಲೆ ಪಾರಂಪರಿಕವಾಗಿದೆ. ಆಂಧ್ರದಲ್ಲೂ ‘ಕಲಂಕಾರಿ’ ಎಂಬ ಹಳೆಯ ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.

‘ಕರ್ನಾಟಕದಲ್ಲಿ ಮುದ್ರಣಕ್ಕೆ ಸಂಬಂಧಪಟ್ಟ ಅಂತಹ ಪರಂಪರೆ ಇಲ್ಲ. ಹಾಗೆಂದು ಇಲ್ಲಿನವರು ರಾಜಸ್ಥಾನ, ಗುಜರಾತ್, ಆಂಧ್ರದ ಶೈಲಿ ಅನುಕರಿಸಿದರೆ ಆ ರಾಜ್ಯದವರು ಮತ್ತಷ್ಟು ಮುಂದಕ್ಕೆ ಹೋಗುವ ಹೊತ್ತಿಗೆ ನಾವು ಹಿಂದೆಯೇ ಉಳಿಯಬೇಕಾಗುತ್ತದೆ’ ಎನ್ನುತ್ತಾರೆ ದೇಸೀ ಚಿಂತಕ ಪ್ರಸನ್ನ.

ಕರ್ನಾಟಕದ ದೃಶ್ಯ ಜಾನಪದ ಪರಂಪರೆಗಳಿಂದ ಕೊಡು–ಕೊಳ್ಳುವಿಕೆಯ ಮೂಲಕ ಬಟ್ಟೆಗಳ ಮೇಲಿನ ಪಡಿಯಚ್ಚು ಮುದ್ರಣದ ಪರ್ಯಾಯ ಶೈಲಿಯನ್ನು ಅನ್ವೇಷಿಸುವ ಪ್ರಯತ್ನ ಕಾರ್ಯಾಗಾರದ ಮೂಲಕ ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಯಂತ್ರಗಳನ್ನು ಬಳಸಿ ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣ ಮಾಡುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಚಿತ್ರಗಳಲ್ಲಿ ಏಕತಾನತೆ ಕಾಣಲು ಆರಂಭವಾಗಿದೆ. ಅದನ್ನು ಮುರಿದು ಕಟ್ಟುವ ಪ್ರಯತ್ನದ ಭಾಗವಾಗಿಯೂ ಕಾರ್ಯಾಗಾರ ಸಂಯೋಜನೆಗೊಂಡಿದೆ.

ಬಟ್ಟೆಗಳ ಮೇಲೆ ಪಡಿಯಚ್ಚು ಮುದ್ರಣವಾದ ನಂತರ ಮೆರಗು ನೀಡಲು ಕಸೂತಿ ಹಾಕಲಾಗುತ್ತದೆ. ಮನೆಯಲ್ಲೇ ಕುಳಿತು ಕಸೂತಿ ಹಾಕುವ ಕಲೆ ಮಲೆನಾಡಿನ ಹಳ್ಳಿಗಳ ಹೆಣ್ಣುಮಕ್ಕಳಿಗೆ ಕರಗತವಾಗಿದ್ದರೂ ಆ ಕಲೆಯ ಸೂಕ್ಷ್ಮ ಸಂಗತಿಗಳ ಅರಿವು ಅವರಿಗಿಲ್ಲ. ಪಡಿಯಚ್ಚು ಮುದ್ರಣ ಮಾಡಿದ ಬಟ್ಟೆಗಳ ಮೇಲೆ ಯಾವ ರೀತಿಯ ಕಸೂತಿ ಹಾಕುವುದರಿಂದ ಯಾವ ಪರಿಣಾಮ ಉಂಟಾಗುತ್ತದೆ ಎನ್ನುವ ಬಗ್ಗೆ ಮುದ್ರಣಕಾರರು ಮತ್ತು ಕಸೂತಿಕಾರರ ನಡುವೆ ಪರಸ್ಪರ ಮಾತುಕತೆ ನಡೆದು ಮುಖಾಮುಖಿಯಾಗಲು ಕಾರ್ಯಾಗಾರ ವೇದಿಕೆ ಸೃಷ್ಟಿಸಿದೆ.

ಈ ಮೂಲಕ ಮುದ್ರಣ ಹಾಗೂ ಕಸೂತಿ ನಡುವೆ ಸಮನ್ವಯ ತರುವ ಗುರಿಯಿಂದ ಕಾರ್ಯಾಗಾರ ನಡೆಯುತ್ತಿದೆ. ಕುಶಲಕರ್ಮಿಗಳೆಂದರೆ ಕೇವಲ ತಲೆತಗ್ಗಿಸಿ ಕೆಲಸ ಮಾಡುವವರಷ್ಟೇ ಅಲ್ಲ, ವಿನ್ಯಾಸಕಾರರಲ್ಲಿ ಇರುವ ಒಳನೋಟಗಳನ್ನು ಕುಶಲಕರ್ಮಿಗಳಲ್ಲೂ ಜಾಗೃತಗೊಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.

ಮೈಸೂರಿನ ಕಾವಾ ಸಂಸ್ಥೆಯ ಪದವೀಧರ ಕಲಾವಿದ ನಿರಂಜನ್, ದೇಸೀ ಚಿಂತಕ ಪ್ರಸನ್ನ, ವಿನ್ಯಾಸಕ ರಾದ ಪದ್ಮಶ್ರೀ, ರುದ್ರಪ್ಪ ಮೊದಲಾದವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಸಾಗಿದೆ.

***

ಲಾಕ್‌ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚರಕ ಮುದ್ರಣ, ಕಸೂತಿ ಕಾರ್ಯಾಗಾರ ಆಯೋಜಿಸಿದೆ. ಇದರಿಂದ ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.

- ಮಹಾಲಕ್ಷ್ಮಿ, ಚರಕ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT