ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ ನಂಬಿ ಚುನಾವಣೆ ಮಾಡೊಲ್ಲ:ಗೀತಾ ವಿರುದ್ಧ ಅಪಪ್ರಚಾರಕ್ಕೆ ಮಧು ಕಿಡಿ

Published 12 ಮಾರ್ಚ್ 2024, 6:41 IST
Last Updated 12 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಚುನಾವಣೆಗೆ ನಿಲ್ಲಲು ಗೀತಾ ಶಿವರಾಜಕುಮಾರ್‌ಗೆ ಏನು ಅರ್ಹತೆ ಇದೆ ಎಂದು ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರಂಭಿಸಿದ್ದಾರೆ. ಹಾಗಿದ್ದರೆ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಬಿ.ವೈ.ರಾಘವೇಂದ್ರ ಅವರಿಗೆ ಏನು ಅರ್ಹತೆ ಇತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಸಾಮಾಜಿಕ ಜಾಲತಾಣ ನಂಬಿಕೊಂಡು ಚುನಾವಣೆ ಮಾಡಲು ಆಗೊಲ್ಲ. ಅದನ್ನೆಲ್ಲ ಕಸದ ಬುಟ್ಟಿಗೆ ಹಾಕಿ. ಗೀತಾ ಶಿವರಾಜ ಕುಮಾರ್ ಅವರು ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೆಲುವು ನಮ್ಮದೇ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದಿನ ಲೋಕಸಭಾ ಚುನಾವಣೆಗಳನ್ನು ಬಿಜೆಪಿಯವರು ಅಕ್ರಮ ಹಣದಿಂದ ಮಾಡಿದ್ದಾರೆ. ಅವರ ಗೆಲುವು ಹೇಗೆ ಆಗಿವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಟಾಂಗ್ ನೀಡಿದರು.

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಗೀತಾ ಶಿವರಾಜ್‌ ಕುಮಾರ್ ಗೆಲುವು ನಿಶ್ಚಿತ. ಈ ಹಿಂದೆ ಗೀತಕ್ಕ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ನಾನು ಕೂಡ ಸ್ಪರ್ಧೆ ಮಾಡಿದ್ದೆ. ಆಗ ವಾತಾವರಣ ಪೂರಕವಾಗಿರಲಿಲ್ಲ. ಆದರೂ ಸಾಕಷ್ಟು ಮತಗಳು ಬಿದ್ದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವುದರಿಂದ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಗ್ಯಾರಂಟಿ ಯೋಜನೆಗಳಿಂದಗಾಇ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಇದೆ. ಕಾಂಗ್ರೆಸ್ ಗ್ಯಾರಂಟಿಗಳಿಂದಾಗಿ ಸರ್ಕಾರ ದಿವಾಳಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಮೋದಿ ಅವರ ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುವುದಿಲ್ಲವಾ ಎಂದು ಪ್ರಶ್ನಿಸಿದರು.

ರಾಗಿಗುಡ್ಡದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ತಡೆದಿದ್ದೇವೆ. ಇಂತಹ ಘಟನೆಗಳನ್ನೇ ಬಿಜೆಪಿಯವರು ಬಂಡವಾಳ ಮಾಡಿಕೊಳ್ಳುತ್ತಾರೆ. ಶರಾವತಿ ಸಂತ್ರಸ್ತರಿಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಸಾಧ್ಯವಾಗದ ಸಂಸದರು ಈಗ ಡಿಜಿಟಲ್ ಬ್ಯಾನರ್ ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ರಮೇಶ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಎಚ್.ಸಿ. ಯೋಗೀಶ್, ಎನ್.ಪಿ. ಧರ್ಮರಾಜ್, ಎಸ್.ಕೆ.ಮರಿಯಪ್ಪ, ರಮೇಶ್, ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT