ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ನಾಯಕರ ಸಂಧಾನ ವಿಫಲ: ಮೋದಿ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದ ಈಶ್ವರಪ್ಪ

Published 17 ಮಾರ್ಚ್ 2024, 9:23 IST
Last Updated 17 ಮಾರ್ಚ್ 2024, 9:23 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪ್ರಧಾನಿ ನರೇಂದ್ರ ಮೋದಿ ಮಾ.18ಕ್ಕೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

'ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರೂ ಅವರ ಹೆಸರು ಹೇಳುವುದನ್ನು ಬಿಡುವುದಿಲ್ಲ. ಆದರೆ, ಏಕ ಕುಟುಂಬದ ಕಪಿಮುಷ್ಠಿಯಿಂದ ಪಕ್ಷವನ್ನು ಬಿಡುಗಡೆ ಮಾಡಬೇಕು ಎನ್ನುವ ಉದ್ದೇಶದಿಂದ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಮೋದಿ ಬಳಿ ಹೋಗುವೆ. ಕಾರ್ಯಕ್ರಮಕ್ಕೆ ತೆರಳದಿರುವ ಕುರಿತ ದುಃಖವಿದೆ' ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಸಂಧಾನಕ್ಕಾಗಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸಿದ್ದರು. ನಾನು ಅವರ ಸಂಧಾನಕ್ಕೆ ಒಪ್ಪಿಲ್ಲ. ನನ್ನ ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಮಾತ್ರವಲ್ಲ, ನನಗೆ ಯಡಿಯೂರಪ್ಪ ಕುಟುಂಬದವರು ಮೋಸ ಮಾಡಿದ್ದಾರೆ' ಎಂದು ದೂರಿದರು.

ಯಡಿಯೂರಪ್ಪ ಹಾಗೂ ಅವರ ಪುತ್ರರ ಕೈಯಿಂದ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪ ಅವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ಪಕ್ಷ ನಿಷ್ಠೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರದೇ ರಾಜ್ಯಭಾರವಾಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ' ಎಂದು ಆರೋಪಿಸಿದರು.

ಸಂಧಾನ ವಿಫಲ: ಬಿಜೆಪಿ ಹೈಕಮಾಂಡ್ ಪರವಾಗಿ ಈಶ್ವರಪ್ಪ ನಿವಾಸಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ ಅಗರವಾಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಒಳಗೊಂಡ ಪಕ್ಷದ ನಿಯೋಗ ಭಾನುವಾರ ಭೇಟಿ ನೀಡಿತು. ಮಧ್ಯಾಹ್ನ 12ಗಂಟೆಗೆ ಆಗಮಿಸಿ ಈಶ್ವರಪ್ಪ ಅವರ ಮನವೊಲಿಸಲು ಸಭೆ ನಡೆಸಲಾಯಿತು. ಆದರೆ, ಇದಕ್ಕೆ ಜಗ್ಗದ ಈಶ್ವರಪ್ಪ, ಸಭೆಯ ಮಧ್ಯದಲ್ಲಿಯೇ ಬೇರೆ ಕಾರ್ಯಕ್ರಮದ ನಿಮಿತ್ತ ಎದ್ದು ತೆರೆಳಿದರು. ಬಳಿಕ 1.30 ರವರೆಗೆ ಕಾದು ಕುಳಿತ ಕೇಂದ್ರ ನಾಯಕರ ನಿಯೋಗ ಹೊರ ನಡೆಯಿತು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ ಅಗರವಾಲ್ ಅವರು, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವೆ. ಅದೇ ರೀತಿ ಈಶ್ವರಪ್ಪ ಅವರಿಗೆ ಚುನಾವಣೆಯಿಂದ ಹಿಂದೆ ಸರಿಯುವಂತೆ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿರುವೆ. ಕಾದು ನೋಡಬೇಕಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT