ವಾರ್ಷಿಕ ₹ 25 ಕೋಟಿ: ಕಡಿಮೆ ಅನುದಾನಕ್ಕೆ ಆಕ್ಷೇಪ

ಶಿವಮೊಗ್ಗ: ಹದಿಮೂರು ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗೆ (ಎಂಎಡಿಬಿ) ವರ್ಷಕ್ಕೆ ಸಿಗುವ ಅನುದಾನ ₹ 25 ಕೋಟಿ. ಇಷ್ಟು ಕಡಿಮೆ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಮಲೆನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚುವರಿ ಅನುದಾನ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶನಿವಾರ ನಡೆದ ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ನಿರ್ಣಯ ಅಂಗೀಕರಿಸಿತು.
ಎಂಎಡಿಬಿ ಸಭಾಂಗಣದಲ್ಲಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ 2021-22ನೇ ಸಾಲಿನ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ವಿಧಾನಸಸಭೆ, ವಿಧಾನ ಪರಿಷತ್ ಸದಸ್ಯರು, ನಾಮನಿರ್ದೇಶಿತರು ಸೇರಿದಂತೆ ಎಲ್ಲ ಸದಸ್ಯರೂ ಒಕ್ಕೊರಲ ನಿರ್ಣಯ ಕೈಗೊಂಡರು.
ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಮಲೆನಾಡಿನ ಅಭಿವೃದ್ದಿ ಕುರಿತು ಶಾಸಕರು ನೀಡಿದ ಕ್ರಿಯಾಯೋಜನೆಗಳನ್ನು ಸರ್ಕಾರ ಅನುಮೋದಿಸಿ, ಮಂಡಳಿ ವ್ಯಾಪ್ತಿಯ ಇತರೆ ಅನುಷ್ಠಾನ ಇಲಾಖೆಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಪ್ರತಿ ಶಾಸಕರಿಗೆ ತಲಾ ₹ 1 ಕೋಟಿ ಅನುದಾನ ನಿಗದಿಯಾಗಿದ್ದರೂ ಹಲವು ವರ್ಷಗಳಿಂದ ₹ 30 ಲಕ್ಷದಿಂದ ₹ 40 ಲಕ್ಷ ಬಿಡುಗಡೆಯಾಗುತ್ತಿದೆ. ಇಷ್ಟು ದೊಡ್ಡ ಮಂಡಳಿಗೆ ವಾರ್ಷಿಕ ₹ 25 ಕೋಟಿ ಅನುದಾನ ಸಾಕಾಗುತ್ತಿಲ್ಲ. ಬಾಕಿ ಕಾಮಗಾರಿಗಳಿಗೆ ₹ 30 ಕೋಟಿ ಕೊರತೆ ಇದೆ. ಸದಸ್ಯರು ತಮಗೆ ನಿಗದಿಪಡಿಸಿದ ಅನುದಾನವನ್ನು ₹ 1.5 ಕೋಟಿಗೆ ಹೆಚ್ಚಿಸುವಂತೆ ಹಾಗೂ ನಾಮ ನಿರ್ದೇಶಿತ ಸದಸ್ಯರು ₹ 1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ. ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಮುಂದಿನ ಅಧಿವೇಶನದ ಒಳಗೆ ಸಭೆ ಕರೆದು ಸದಸ್ಯರಿಗೆ ಹೆಚ್ಚುವರಿ ಅನುದಾನ ಹಾಗೂ ಬಾಕಿ ಕಾಮಗಾರಿ ಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರ ನೀಡಿದರು.
ಶಾಸಕ ರಾಜೇಗೌಡ, ಹಲವು ಹಳೆಯ ಕಾಮಗಾರಿಗಳು ಬಾಕಿ ಇವೆ. ಸಾರ್ವಜನಿಕರ ಅಭಿವೃದ್ದಿ ಕೆಲಸ ಮಾಡಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಪ್ರತಿ ಸದಸ್ಯರಿಗೆ ₹ 1.5 ಕೋಟಿ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಂಡಳಿ ಕಾಮಗಾರಿ ಕೈಗೊಳ್ಳುವಾಗ ಜಿಎಸ್‍ಟಿ, ಲೇಬರ್ ಸೆಸ್, ರಾಯಲ್ಟಿ, ಸೇವಾ ತೆರಿಗೆ ಸೇರಿದಂತೆ ಅನುಷ್ಠಾನ ಸಂಸ್ಥೆಗಳಿಗೆ ಶೇ 25ರಷ್ಟು ಹಣ ಖರ್ಚಾಗುತ್ತದೆ. ಉಳಿದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಅನಿವಾರ್ಯತೆ ಇದೆ. ಹಾಗಾಗಿ, ಹೆಚ್ಚುವರಿ ಅನುದಾನದ ಆವಶ್ಯಕತೆ ಇದೆ ಎಂದರು.
ನಾಮ ನಿರ್ದೇಶಿತ ಸದಸ್ಯರಾದ ಅಶೋಕ ಅಂಡಿಗೆ, ಮಹಾದೇವಪ್ಪ, ನಮಗೂ ಕೂಡ ಜನರು ಮಂಡಳಿ ವತಿಯಿಂದ ಅಭಿವೃದ್ಧಿ ಕೆಲಸ ಮಾಡಿಸುವಂತೆ ಕೋರುತ್ತಾರೆ. ನಾಮನಿರ್ದೇಶಿತರಿಗೂ ತಲಾ ₹ 1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದರು.
2020-21ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ಬಳಕೆಯಾಗದ ₹ 3.10 ಕೋಟಿಯ ವೆಚ್ಚದ 46 ಕಾಮಗಾರಿ ಹೊರತುಪಡಿಸಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಆಡಳಿತ ವೆಚ್ಚದಲ್ಲಿ ಮಿತವ್ಯಯ ಸಾಧಿಸಲಾಗಿದೆ ಎಂದು ಗುರುಮೂರ್ತಿ ಅಂಕಿಅಂಶ ನೀಡಿದರು.
ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೋಲಿಸಿದರೆ ಶೇ 53.54ರಷ್ಟು ಗರಿಷ್ಟ ಸಾಧನೆ ಮಾಡಲಾಗಿದೆ. ಪ್ರಸಕ್ತ ವರ್ಷ ಹೆಚ್ಚುವರಿ ಅನುದಾನ ಪಡೆದು ಹೊಸ ಕಾರ್ಯಕ್ರಮಗಳ ಕ್ರಿಯಾ ಯೋಜನೆ ರೂಪಿಸಬೇಕಿದೆ. ಹಿಂದಿನ ಸಾಲಿನಲ್ಲಿ ಮುಖ್ಯಮಂತ್ರಿ ಅವರು ₹ 10 ಕೋಟಿ ವಿಶೇಷ ಅನುದಾನ ನೀಡಿದ್ದರು ಎಂದು ಸ್ಮರಿಸಿದರು.
ಸಾಗರ ಶಾಸಕ ಎಚ್.ಹಾಲಪ್ಪ ಹರತಾಳು, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಕಾಪು ಶಾಸಕ ಲಾಲ್‌ಜಿ ಮೆಂಡನ್, ಬೇಲೂರು ಶಾಸಕ ಲಿಂಗೇಶ್, ಕಲಘಟಗಿ ಶಾಸಕ ಲಿಂಬಣ್ಣನವರ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಂಡಳಿ ಕಾರ್ಯದರ್ಶಿ ಕೆ.ಎಸ್.ಮಣಿ ಗೌಡ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.