ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಸದಸ್ಯರನ್ನು ಬೀದಿಗೆ ತಳ್ಳಿದ ಬಿಜೆಪಿ

ಕ್ರಿಯಾ ಯೋಜನೆಯ ಅಧಿಕಾರಕ್ಕೂ ಕೊಕ್ಕೆ: ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ
Last Updated 6 ಡಿಸೆಂಬರ್ 2021, 12:53 IST
ಅಕ್ಷರ ಗಾತ್ರ

ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರದ ಜತೆ ಸ್ವಾಭಿಮಾನವನ್ನೂ ಬಿಜೆಪಿ ಕಿತ್ತುಕೊಂಡಿದೆ. ಅನುದಾನ ಕೊಡುವುದಿರಲಿ, ಕ್ರಿಯಾ ಯೋಜನೆಯ ಅವಕಾಶವನ್ನೂ ಸರ್ಕಾರ ಮರಳಿ ಪಡೆದಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ದೂರಿದರು.

ಸರ್ಕಾರ ಅನುದಾನ ಕೊಡುತ್ತಿಲ್ಲ. ಆಶ್ರಯ ಮನೆಗಳೂ ದೊರಕುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಅನುಷ್ಠಾನವಾಗುವ ಯೋಜನೆಗಳ ಕ್ರಿಯಾ ಯೋಜನೆ ಸರ್ಕಾರದಮಟ್ಟದಲ್ಲೇ ಆಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರು ಮುಜುಗರ ಅನುಭವಿಸುತ್ತಿದ್ದಾರೆ. ಇದರಿಂದ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಬಿಜೆಪಿ ಸರ್ಕಾರದ ಇಂತಹ ಧೋರಣೆಯಿಂದ ಬೇಸತ್ತು ಹೋಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರನ್ನು ಬಿಜೆಪಿ ಬೀದಿಗೆ ತಂದು ನಿಲ್ಲಿಸಿದೆ. ಹಾಗಾಗಿಯೇ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಆ ಪಕ್ಷದ ಬೆಂಬಲಿತರೇ ನಿರ್ಧರಿಸಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಿದೆ. ಯಾವುದೇ ಸ್ವನಿರ್ಧಾರದ ಯೋಜನೆಗಳನ್ನು ಅವರು ಮಾಡುವಂತಿಲ್ಲ. ಅನುದಾನ ನೀಡಿಲ್ಲ. ಗ್ರಾಮಪಂಚಾಯಿತಿ ಸದಸ್ಯರ ವೇತನ ಹೆಚ್ಚಳ ಮಾಡಿಲ್ಲ. ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿಯೇ ಮರಿಚಿಕೆಯಾಗಿದೆ ಎಂದು ಆರೋಪಿಸಿದರು.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಸರಳ, ಸೌಜನ್ಯದ ವ್ಯಕ್ತಿತ್ವದವರು. ಆರು ವರ್ಷಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಜತೆ ಉತ್ತಮ ಬಾಂಧವ್ಯ ಬೆಸೆದಿದ್ದಾರೆ. ಅವರ ಮೇಲೆ ಮತದಾರಿಗೆ ಅಪಾರ ಪ್ರೀತಿ ಇದೆ. ಈ ಬಾರಿಯೂ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಿದ್ದಾರೆ. ರಾಜ್ಯಮಟ್ಟದ ತೀರ್ಮಾನಗಳು ಸ್ಥಳೀಯವಾಗಿ ಪರಿಣಾಮ ಬೀರುವುದಿಲ್ಲ. ಇಂತಹ ಚುನಾವಣೆಗಳಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮ ನಿರ್ಧಾರ. ಜೆಡಿಎಸ್‌, ಕಾಂಗ್ರೆಸ್ ಮಧ್ಯೆ ಪಂಚಾಯಿತಿಮಟ್ಟದಲ್ಲಿ ಮಾನಸಿಕ ಹೊಂದಾಣಿಕೆ ಇದೆ. ಜೆಡಿಎಸ್ ಬೆಂಬಲಿತ ಸದಸ್ಯರು ಬಿಜೆಪಿ ಬೆಂಬಲಿಸುವುದಿಲ್ಲ. ಮಾಜಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಸೇರಿದಂತೆ ಜೆಡಿಎಸ್‌ನ ಹಲವು ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್‌ ಮುಖಂಡರಾದ ಎಸ್.ಪಿ.ದಿನೇಶ್, ವಿಜಯಕುಮಾರ್ ದನಿ, ಜಿ.ಡಿ.ಮಂಜುನಾಥ್, ಶಿವಾನಂದ್, ಕಲಗೋಡು ರತ್ನಾಕರ,ನಾಗರಾಜ್, ಶಿವಾನಂದ್, ದೇವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT